ಸರಕಾರದ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ : ಮಹಮ್ಮದ್ ಮೋನು
UllalaVani
UN NETWORKS
ಹರೇಕಳ: ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸರಕಾರದಿಂದ ನೀಡಲ್ಪಡುವ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಎಂಟನೇ ತರಗತಿಯ ಸುಮಾರು 93 ಮಕ್ಕಳಿಗೆ ಸೈಕಲನ್ನು ವಿತರಿಸಿ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನುರವರು, ಶಾಲಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರಕಾರವು ಹೊರತಂದಿದ್ದು ಅವುಗಳೆಲ್ಲಾವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು.
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳ್ಳಬೇಕು ಹಾಗೂ ವ್ಯಕ್ತಿತ್ವ ವಿಕಸನಕ್ಕೆಪೂರಕವಾದ ಅಂಶಗಳಾದ ಧೈರ್ಯ, ತಾಳ್ಮೆ, ಏಕಾಗ್ರತೆ ಮತ್ತು ದೈಹಿಕ ಬೆಳವಣಿಗೆ ಮುಂತಾದ ಗುಣಗಳನ್ನು ಉತ್ತಮ ಪಡಿಸಿಕೊಳ್ಳಲು ಸರಕಾರವು ಈ ಯೋಜನೆಯನ್ನು ಹಮ್ಮಿಕೊಂಡಿದೆ.ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ಡಿ’ ಸೋಜ ಇವರು ವಿದ್ಯಾರ್ಥಿಗಳು ಮನೆಯ ಅಂಗಳದಲ್ಲಿ ಮೊದಲು ಸೈಕಲ್ ತುಳಿಯಲು ಅಭ್ಯಾಸವನ್ನು ಮಾಡಿ ಅದರ ನಂತರವೇ ದಾರಿಗೆ ಸೈಕಲ್ ಸವಾರಿ ಮಾಡುವುದು ಒಳಿತು. ಆರೋಗ್ಯ ದೃಷ್ಟಿಯಲ್ಲಿ ಉತ್ತಮವೆಂದರೂ ಸೈಕಲ್ ತುಳಿಯಲು ಗೊತ್ತಿಲ್ಲದವರು ಸೈಕಲ್ ತುಳಿದುಕೊಂಡು ಮಾರ್ಗಕ್ಕೆ ಬರುವುದು ಅವಘಡಕ್ಕೆ ಎಡಮಾಡಿಕೊಡಬಹುದು. ಆದುದರಿಂದ ಜಾಗೃತೆ ವಹಿಸುವುದು ಉತ್ತಮವೆಂದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ನಿರೂಪಿಸಿದರು.