UN NETWORKS
ಬಗಂಬಿಲ : ಬಗಂಬಿಲ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವದ ಮೂಲಕ ವೈದ್ಯನಾಥನಗರದಲ್ಲಿ ಯುವಶಕ್ತಿ ಜಾಗೃತವಾಗಿದ್ದು, ಹೀಗೆ ಎಲ್ಲೆಡೆಯಲ್ಲಿಯೂ ಧರ್ಮ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಂಗಳೂರಿನ ನ್ಯಾಯವಾದಿ ಶಿವರಾಮ್ ಮಣಿಯಾಣಿ ಸುಸಂಸ್ಕೃತ ಸಮಾಜಕ್ಕೆ ಧಾರ್ಮಿಕ ನೆಲೆಗಟ್ಟು ಅವಶ್ಯಕ. ನಮ್ಮ ಸಂಸ್ಕೃತಿ-ಸಂಪ್ರದಾಯಗಳಿಗೆ ದಾಳಿಯಾಗಲು ಆಸ್ಪದ ನೀಡಬಾರದು ಎಂದು ತಿಳಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶ್ರಾಂತ ಮುಖ್ಯ ವ್ಯವಸ್ಥಾಪಕ ಕೆ. ರಾಜಾರಾಮ್ ಭಟ್, ಕೆ. ಗೀತಾಲಕ್ಷ್ಮಿ ಬಗಂಬಿಲ, ದೇರಳಕಟ್ಟೆ ಕರ್ಣಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಸಂದೀಪ್ ಕುಮಾರ್ ಪಿ, ಸಾರ್ವಜನಿಕ ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ಅತ್ತಾವರ ಉಪಾಧ್ಯಕ್ಷ ಚಂದ್ರನಾಥ್ ಅತ್ತಾವರ್, ಮಲ್ಲಿಕ ಪ್ರಶಾಂತ್ ಪಕ್ಕಳ ಮಲಾರುಬೀಡು, ದೃಷ್ಟಿ ಆಪ್ಟಿಕಲ್ಸ್ ದೇರಳಕಟ್ಟೆ ಮಾಲಕ ವಿಶುಕುಮಾರ್ ಕೆ ಹಾಗೂ ಕೆಪಿಟಿಸಿಎಲ್‍ನ ನಿವೃತ್ತ ಕಿರಿಯ ಇಂಜಿನಿಯರ್ ಜನಾರ್ಧನ ಮೂಲ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ದಶಮ ಸಂಭ್ರಮದ ಸವಿನೆನಪಿನ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ನಾರಾಯಣ ಭಟ್ ಕಾಯರ್ಕಟ್ಟೆ ಸ್ಮರಣ ಸಂಚಿಕೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯನಾಥನಗರದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಯಶ್ ಎಸ್. ಕುಮಾರ್ ಮತ್ತು ಅನ್ವಿತಾ ಚೌಟ ಇವರಿಗೆ ಪ್ರೋತ್ಸಾಹ ಧನ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಶ್ರೀ ವೈದ್ಯನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ.ಸುರೇಶ್ ಶೆಟ್ಟಿ ಸ್ವಾಗತಿಸಿದರು. ನಾಗೇಶ್ ವಂದಿಸಿದರು.ಬಳಿಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. “ಭಜನಾ ಕೀರ್ತನೆ”, ಸಾಮೂಹಿಕ ಶಿವಕಲ್ಪೋಕ್ತ ಪೂಜೆ ಹಾಗೂ ದುರ್ಗಾನಮಸ್ಕಾರ ಪೂಜೆ, ಪ್ರಾರ್ಥನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.