Site icon Ullalavani

ದೈವದ ಸೇವಕರಿಗೆ ಸರಕಾರದಿಂದ ಶ್ರೀಘ್ರ ವೇತನ ವ್ಯವಸ್ಥೆ ಜಾರಿ: ಪದ್ಮನಾಭ ಕೋಟ್ಯಾನ್

UN NETWORKS

ಕೊಣಾಜೆ: ಸಾವಿರಾರು ದೇವಸ್ಥಾನ, ದೈವಸ್ಥಾನಗಳಿರುವ ನೆಲೆಬೀಡಾಗಿರುವ ಪರಶುರಾಮನ ಸೃಷ್ಠಿಯ ಈ ತುಳುನಾಡಿನಲ್ಲಿ ಸಂಪ್ರದಾಯ, ಆಚರಣೆಗಳಿಗೆ ಮಹತ್ವದ ಸ್ಥಾನವಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನದ ಅರ್ಚಕರಿಗೆ ಸರ್ಕಾರದಿಂದ ವೇತನ ನೀಡಲಾಗುತ್ತಿದ್ದು, ದೈವದ ಸೇವಕರಿಗೂ ಸರ್ಕಾರದಿಂದ ಶೀಘ್ರ ವೇತನ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.

ಅವರು ಕೊಣಾಜೆ ಗ್ರಾಮದ ಬೊಲ್ಮ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ, ಶ್ರೀ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಬ್ರಹ್ಮ ಕಲಶೋತ್ಸವ ಆಗಲು ಐದಾರು ವರ್ಷ ಹಿಡಿಯುತ್ತದೆ. ಆದರೆ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಬ್ರಹ್ಮಕಲಶೋತ್ಸವ ಕೇವಲ ಆರು ತಿಂಗಳಲ್ಲಿಯೇ ನಡೆಯುತ್ತಿರುವುದು ವಿಶೇಷವಾಗಿದ್ದು, ದೇವರ ಆಶೀರ್ವಾದ ಹಾಗೂ ಈ ಭಾಗದ ಜನರ ಧಾರ್ಮಿಕ ನಂಬಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಪ್ರದೇಶವೂ ಅಭಿವೃದ್ದಿಯನ್ನು ಕಾಣಲಿದೆ ಎಂದರು. ಕಾರ್ಯಕ್ರಮದಲ್ಲಿ ದೈವಜ್ಞರಾದ ರಾಜಗೋಪಾಲ್ ಆಚಾರ್ಯ ಹಾಗೂ ಶಿಲ್ಪಿ ಸುಂದರ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಯೆ, ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮ್ ಮೋಹನ್ ಆಳ್ವ ತೇವುನಾಡುಗುತ್ತು, ಶ್ರೀ ಕ್ಷೇತ್ರ ಕಣಂತೂರು ಅನುವಂಶಿಕ ಮೊಕ್ತೇಸರ ದೇವಿ ಪ್ರಸಾದ್ ಪೊಯ್ಯತ್ತಾಯ, ಉಳ್ಳಾಲ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಸ್ಥಾಪಕ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ತೋಡಿಕಾನ ಶ್ರೀ ಮಲ್ಲಕಾರ್ಜುನ ದೇವಸ್ಥಾನದ ಅಧ್ಯಕ್ಷ ಪಿ.ಬಿ. ದಿವಾಕರ ರೈ ಪೆರಾಜೆ, ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕೆ.ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ರವೀಂದ್ರ ಬಂಗೇರ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ರೈ, ರಾಜೇಶ್ ಶೆಟ್ಟಿ ಪಜೀರುಗುತ್ತು ಹಾಗೂ ಪುಷ್ಪರಾಜ್ ಕೊನಿಲ ಕಾರ್ಯಕ್ರಮ ನಿರೂಪಿಸಿದರು.

Exit mobile version