Site icon Ullalavani

ಇನ್ಸ್ ಪೆಕ್ಷನ್‍ಗಾಗಿ ಬಳಿದ ಪೈಂಟ್, ರೊಚ್ಚಿಗೆದ್ದ ಪ್ರಯಾಣಿಕರು

UN NETWORKS

ಕೊಣಾಜೆ: ದಿನದ ಹಿಂದೆಯಷ್ಟೆ ಬಸ್ಸಿಗೆ ಬಳಿದ ಪೈಂಟ್ ಒಣಗುವ ಮುನ್ನ ಸಂಚಾರಕ್ಕೆ ಬಳಸಿದ ಪರಿಣಾಮ ಪ್ರಯಾಣಿಕರ ಬಟ್ಟೆ, ದೇಹಕ್ಕೆ ಅಂಟಿಕೊಂಡ ಹಿನ್ನೆಲೆಯಲ್ಲಿ ಆಕ್ರೋಶಿತ ಪ್ರಯಾಣಿಕರು ಬಸ್ಸನ್ನು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ ಪ್ರಕರಣ ನಡೆದಿದೆ.

ಮಂಗಳೂರಿನಿಂದ ಹರೇಕಳ ನಡುವೆ ಸಂಚರಿಸುವ ಬಸ್ಸೊಂದರ ಮಾಲೀಕ ಶುಕ್ರವಾರ ಆರ್‍ಟಿಎ ತಪಾಸಣೆ ಇದ್ದ ಹಿನ್ನೆಲೆಯಲ್ಲಿ ನಿರ್ಲಕ್ಷ್ಯದಿಂದ ಗುರುವಾರ ರಾತ್ರಿ ಪೈಂಟ್ ಮಾಡಿಸಿ ಮರುದಿನವೇ ಬಸ್ ಸಂಚಾರಕ್ಕೆ ಬಳಸಿದ್ದು ಅವಾಂತರಕ್ಕೆ ಕಾರಣವಾಗಿದೆ. ಮಂಗಳೂರಿನಿಂದ ಹರೇಕಳಕ್ಕೆ ಹಲವು ಬಸ್ಸುಗಳ ಪರವಾನಗಿ ಇದೆಯಾದರೂ ಈ ರೂಟ್‍ನಲ್ಲಿ ಎರಡು ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಅದರ ವಿರುದ್ಧ ಡಿವೈಎಫ್‍ಐ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಎಷ್ಟು ಬಸ್ಸುಗಳ ಪರವಾನಿಗೆ ಹರೇಕಳಕ್ಕಿದೆ ಎನ್ನುವ ಮಾಹಿತಿಯೂ ಗ್ರಾಮಸ್ಥರಲ್ಲಿಲ್ಲ. ಗ್ರಾಮಕ್ಕೆ ಬರುವ ಎರಡು ಬಸ್ಸುಗಳ ಪೈಕಿ ಒಂದು ಬಸ್ಸಿಗೆ ಶುಕ್ರವಾರ ಆರ್‍ಟಿಓ ತಪಾಸಣೆ ಇತ್ತು. ಅಲ್ಲಲ್ಲಿ ಪೈಂಟ್ ಎದ್ದುಹೋಗಿದ್ದರಿಂದ ಬಸ್ಸನ್ನು ಮೇಲ್ನೊಟಕ್ಕೆ ಸುಂದರವನ್ನಾಗಿಸಲು ಹೊರಟ ಮಾಲೀಕ ಗುರುವಾರ ರಾತ್ರಿ ಎಲ್ಲ ಟ್ರಿಪ್ ಮುಗಿದ ಬಳಿಕ ಪೈಂಟ್ ಬಳಿಸಿದರು. ಅದರ ಪರಿಣಾಮ ಶುಕ್ರವಾರ ಬೆಳಗ್ಗೆ ಪ್ರಯಾಣಿಕರು ಬಸ್ಸು ಏರಿದಾಗ ಕೈ, ಕಾಲುಗಳು, ವಸ್ತ್ರಕ್ಕೆಲ್ಲಾ ಪೈಂಟ್ ಮೆತ್ತಿಕೊಂಡಿತು.ಅದರಿಂದ ಕೆರಳಿದ ಪ್ರಯಾಣಿಕರು ಕೊಣಾಜೆ ಠಾಣೆ ಬಳಿ ಬಸ್ ತಲುಪಿದಾಗ ಸಂಚಾರ ತಡೆದು ಬಸ್ ನ್ನು ಪೊಲೀಸ್ ವಶಕ್ಕೆ ಒಪ್ಪಿಸಿದರು.

 

Exit mobile version