Site icon Ullalavani

ಪ್ರಾರ್ಥನಾ ಸಭಾಂಗಣದಲ್ಲಿ ಹಲ್ಲೆ

UN NETWORKS

ತೊಕ್ಕೊಟ್ಟು: ಪ್ರಾರ್ಥನಾ ಸಭಾಂಗಣದಲ್ಲಿ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿ ಚಿನ್ನ ದರೋಡೆಗೈದಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಮತ್ತು ವಸತಿ ಸಂಕೀರ್ಣದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಕ್ಕೊಟ್ಟು ಜಂಕ್ಷನ್ ನಿವಾಸಿ ಗಂಗಾಧರ್ (66) ಹಲ್ಲೆಗೊಳಗಾದವರು. ಇವರ ಬಳಿಯಿದ್ದ 3 ಪವನ್ ತೂಕದ ಚಿನ್ನದ ಸರ ಕಳವುಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜ.16ರಂದು ಪ್ರಾರ್ಥನಾ ಮಂದಿರ ಇರುವ ಕಟ್ಟಡ ಸಮೀಪವೇ ಗಂಗಾಧರ್ ಅವರ ಮನೆ ಇದೆ. ಇವರ ಮನೆಯ ಗೇಟಿನ ಎದುರುಗಡೆ ಸಂಜೆ ವೇಳೆ ಪ್ರಾರ್ಥನಾ ಮಂದಿರದಿಂದ ಟ್ಯೂಬ್ ಲೈಟ್ ಅನ್ನು ಎಸೆಯಲಾಗಿತ್ತು. ಇದನ್ನು ಪ್ರಶ್ನಿಸಲು ಗಂಗಾಧರ್ ಅವರು ಪ್ರಾರ್ಥನಾ ಮಂದಿರದ ಒಳಗಡೆ ತೆರಳಿದ್ದರು. ಈ ವೇಳೆ ಶೇಖ್ ಬಶೀರ್, ನಾಸಿರ್, ಇಸ್ಮಾಯಿಲ್ ಸಹಿತ 10 ಮಂದಿಯ ತಂಡ ಗಂಗಾಧರ್ ಅವರ ಮೇಲೆ ಏಕಾಏಕಿ ನೆಲ ಒರೆಸುವ ಸಾಮಗ್ರಿ, ರಾಡು, ಹಾಗೂ ಕೈಗಳಿಂದ ಎದೆ, ಸೊಂಟ ಹಾಗೂ ಕಣ್ಣಿನ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಗಂಗಾಧರ್ ಅವರನ್ನು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೂರು ಸ್ಟಿಚ್ ಹಾಕಲಾಗಿದೆ ಎಂದು ಪುತ್ರ ತಿಳಿಸಿದ್ದಾರೆ.

ಪ್ರಾರ್ಥನಾ ಮಂದಿರದಲ್ಲಿ ಬಾಂಗ್ ವಿರುದ್ಧ ದೂರು: ಕಟ್ಟಡಕ್ಕೆ ಸಂಬಂಧಿಸಿದ ಪ್ರಾರ್ಥನಾ ಮಂದಿರವಾಗಿದ್ದರೂ, ಅಲ್ಲಿ ಬೆಳಗ್ಗಿನ ಸಮಯದಲ್ಲಿ ಆಝಾನ್ (ಬಾಂಗ್) ಅನ್ನು ಧ್ವನಿವರ್ಧಕದ ಮೂಲಕ ನೀಡುತ್ತಿದ್ದಾರೆ. ಮಸೀದಿಗಳಲ್ಲಿ ನಡೆಸುವ ವಿಧಾನವನ್ನು ಪ್ರಾರ್ಥನಾ ಸಭಾಂಗಣದಲ್ಲಿ ನಡೆಸುವುದು ಸರಿಯಲ್ಲ. ಅದು ಕಾನೂನು ವಿರೋಧವಾಗಿದೆ. ಈ ಕುರಿತು ಗಂಗಾಧರ್ ಅವರು ಪ್ರಾರ್ಥನಾ ಸಭಾಂಗಣದ ಸಮಿತಿಯ ಗಮನಕ್ಕೆ ತಂದಿದ್ದರು. ಆದರೂ ಧ್ವನಿವರ್ಧಕ ಬಳಕೆ ಮುಂದುವರಿಸಿದಾಗ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿತ್ತು ಎಂದು ಗಂಗಾಧರ್ ಕುಟುಂಬ ಮೂಲಗಳು ತಿಳಿಸಿದೆ.

ಗಂಗಾಧರ್ ವಿರುದ್ಧ ಪ್ರತಿದೂರು
ಗಂಗಾಧರ್ ಪ್ರಾರ್ಥನಾ ಮಂದಿರಕ್ಕೆ ಏಕಾಏಕಿ ಅಕ್ರಮವಾಗಿ ನುಗ್ಗಿ ಅಸಭ್ಯ ರೀತಿಯಲ್ಲಿ ವರ್ತಿಸಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿಯ ಪ್ರಾರ್ಥನಾ ಮಂದಿರ ಸಂಬಂಧಪಟ್ಟವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ 295 ಎ ಧಾರ್ಮಿಕ ಭಾವನೆಗೆ ಧಕ್ಕೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ವಾಣಿಜ್ಯ ಕಟ್ಟಡದವರಿಂದ ಏನೇ ತಪ್ಪಾಗಿದ್ದರೂ ಪೊಲೀಸ್ ಠಾಣೆಗೆ ತಿಳಿಸಬೇಕಿತ್ತು. ಏಕಾ ಏಕಿ ಅವರೇ ಹೋಗಿ ವಿಚಾರಿಸಲು ಮುಂದಾಗಿದ್ದಾರೆ. ನಾವು ಕ್ಲಪ್ತ ಸಮಯಕ್ಕೆ ಅಲ್ಲಿಗೆ ತೆರಳಿ ಗಂಗಾಧರ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಎರಡೂ ಕಡೆಯ ದೂರುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version