UN NETWORKS
ಬೀರಿ: ಹಿಂದೂಗಳು ಮನಸ್ಸು ಮಾಡಿ, ರೊಚ್ಚಿಗೆದ್ದದ್ದೇ ಆದಲ್ಲಿ ಆರಾಧ್ಯ ಶ್ರೀರಾಮನನ್ನು ತುಚ್ಛವಾಗಿ ನಿಂದಿಸಿರುವ ಭಗವಾನ್‍ನನ್ನು ಚಡ್ಡಿ ಬಿಚ್ಚಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿಸುವ ಕ್ಷಣಗಣನೆ ಆರಂಭವಾಗಿದೆ ಎಂದು ಹಿಂದು ಜಾಗರಣಾ ವೇದಿಕೆ ವಿಟ್ಲ ಪ್ರಖಂಡ ಕಾರ್ಯದರ್ಶಿ ಗಣರಾಜ್ ಭಟ್ ಕೆದಿಲ ಹೇಳಿದ್ದಾರೆ.
ಅವರು ಕೋಟೆಕಾರು ಬೀರಿಯಲ್ಲಿ ಶುಕ್ರವಾರ ಹಿಂದು ಹಿತರಕ್ಷಣಾ ವೇದಿಕೆ ಉಳ್ಳಾಲ ಹಮ್ಮಿಕೊಂಡ ಹಿಂದೂ ಸಮಾಜದ ಆದರ್ಶ ಪುರುಷ ಶ್ರೀರಾಮ ಪ್ರಭು ಮತ್ತು ಹಿಂದೂ ದೇವತೆಗಳನ್ನು ಅವಹೇಳನ ಮಾಡಿ, ತುಚ್ಛವಾಗಿ ನಿಂದಿಸಿ ಸ್ವಯಂ ಘೋಷಿತ ವಿಚಾರವಾಧಿಗಳ ಹಾಗೂ ಇದನ್ನು ಪ್ರೇರೇಪಿಸುವ ರಾಜ್ಯ ಸರಕಾರದ ವಿರುದ್ಧ ಹಮ್ಮಿಕೊಂಡ ಜನಾಕ್ರೋಶ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂಗಳ ರಕ್ಷಣೆಯ ರಕ್ಷೆಯೇ ರಾಮನಾಮ. ಆದರೂ ಹಿಂದೂಗಳ ಆಚಾರ-ವಿಚಾರಗಳಲ್ಲಿ ಭಾಗಿಯಾಗದ ಸದಾ ಬಾರಿನಲ್ಲಿ ಕುಳಿತು, ಹೆಣ್ಮಕ್ಕಳ ಸಹವಾಸದಲ್ಲಿರುವ ಇರುವ ಭಗವಾನನಿಗೆ ಶ್ರೀ ರಾಮನ ಹೆಸರನ್ನು ಹೇಳುವ ನೈತಿಕತೆಯೇ ಇಲ್ಲ. ಮಾಧ್ಯಮ ಸಂವಾದದಲ್ಲಿ ಹೇಳಿದ್ದನ್ನೇ ಹೇಳುವಂತಹ ಭಗವಾನ್ ಹಿಂದೆ ಹಣದ ಕೈವಾಡವಿದೆ. ಮಿಷನರಿಗಳ ಕೋಟಿ ಹಣದ ಆಸೆಗೆ ಹಿಂದೂ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತನಾಗಿದ್ದಾನೆ. ದುಷ್ಟನಾಯಿಗಳು ಬೀದಿನಾಯಿಯನ್ನು ಪೋಷಿಸುವಂತಹ ಸನ್ನಿವೇಶ ಇದಾಗಿದೆ.
ಹುಟ್ಟೂ ಇಲ್ಲ ಸಾವೂ ಇಲ್ಲದಂತಹ ಚಿರಂಜೀವಿ ರಾಷ್ಟ್ರ ಭಾರತ. ದೇಶಕ್ಕೆ ಇತರೆ ದೇಶದವರು ಒದ್ದ ಕತೆಗಳ ಪಟ್ಟಿಯೇ ಇದೆ. ಆದರೆ ದೇಶ ಒದ್ದ ಹೊಡೆತ ತಿಂದ ರಾಷ್ಟ್ರಗಳು ಸತ್ತೇ ಹೋಗಿವೆ. ಇದರಿಂದಾಗಿ ಡಕಾಯಿತರೇ ದೇಶದೊಂದಿಗೆ ಲೀನವಾದರು. ಸಾಧ್ಯವಾದಷ್ಟು ಸೊತ್ತುಗಳನ್ನು ಕಳವುಗೈದರು. ಇದೀಗ ಭಾರತದಲ್ಲಿದ್ದುಕೊಂಡು ಭಾರತೀಯರಂತೆ ವರ್ತಿಸಿ ದೇಶವನ್ನು ಕೊಳ್ಳೆ ಹೊಡೆಯುವಂತಹ ಪ್ರಯತ್ನ ಮುಂದುವರಿಯುತ್ತಿದೆ. ಸಮಾಜದಲ್ಲಿ ಸತ್ಯ ಹೇಳಿದರೆ ಕೋಮುವಾದ, ಹಿಂದುತ್ವ ಮಾತನಾಡಿದರೆ ಕೇಸರೀಕರಣವಾಗುತ್ತದೆ. ಬುದ್ಧಿಜೀವಿಗಳು ಸೇರಿಕೊಂಡು ಇಂದು ಶ್ರೀರಾಮನನ್ನು ದುರ್ಬಲಗೊಳಿಸುತ್ತಾರೆ, ನಾಳೆ ದೇವತೆಗಳನ್ನೇ ದುರ್ಬಲಗೊಳಿಸಲು ಹೇಸುವುದಿಲ್ಲ. ಹಲವು ಮೌಢ್ಯಾಚರಣೆಗಳು ಇರುವ ಇನ್ನೊಂದು ಸಮುದಾಯದ ಬಗ್ಗೆ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತುವವರಿಲ್ಲ. ಆದರೆ ಅದೇ ಸಮುದಾಯದ ಹೆಣ್ಮಕ್ಕಳಿಗೆ ಹಲವು ಕಟ್ಟುಪಾಡುಗಳಿದ್ದರೂ, ಹಿಂದೂಗಳ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಹೋಗಲು ಬಿಡುವಂತೆ ಒತ್ತಾಯಿಸಿ ನಡೆಸಿದ ಮಾನವ ಸಂಕೋಲೆಯಲ್ಲಿ ಭಾಗವಹಿಸಿರುವುದು ದುರಾದೃಷ್ಟಕರ. ಹಿಂದೂಗಳನ್ನು ಅವಮಾನಿಸುತ್ತಲೇ ಬಂದಿರುವ, ದೇಶದ್ರೋಹದ ಮಾತುಗಳನ್ನು ಆಡುತ್ತಿರುವ ಭಗವಾನ್ ರಕ್ಷಣೆಗೆ ರಾಜ್ಯ ಸರಕಾರ ಲಕ್ಷಾಂತರ ಖರ್ಚು ಮಾಡುತ್ತಲೇ ಬಂದಿದೆ. ರಾಜಕೀಯ ಲಾಭವನ್ನು ಸಾಧಿಸಲು ಪ್ರತಿಭಟನೆಯಲ್ಲ. ರಾಜಕೀಯದ ಪುಢಾರಿಗಳನ್ನು ಹಿಂದೂ ಸಮಾಜ ನಂಬುವುದಿಲ್ಲ. ಸಮಾಜವನ್ನು ವಿವಿಧ ರೀತಿಯಲ್ಲಿ ದುರ್ಬಲಗೊಳಿಸಲು ಹೊರಟವರ ವಿರುದ್ಧ ಜಾಗೃತಿಯ ಪ್ರತಿಭಟನೆ ಇದಾಗಿದೆ. ಒಂದು ದಿನವೂ ದೇವಸ್ಥಾನಕ್ಕೆ ಹೋಗದೆ, ಸದಾ ಪಬ್ ನಲ್ಲೇ ಕಾಲಕಳೆಯುತ್ತಿದ್ದ ಇಬ್ಬರು ಮಹಿಳೆಯರನ್ನು ಛೂಬಿಟ್ಟು ಶಬರಿಮಲೆಯ ಪಾವಿತ್ರ್ಯತೆಗೆ ಧಕ್ಕೆ ತರುವ ಪಿಣರಾಯಿ ವಿಜಯನ್ ಸರಕಾರದ ಹಿಂದಿದೆ ಹಿಂದೂ ವಿರೋಧಿ ಷಡ್ಯಂತ್ರ. ಅಯೋಧ್ಯೆಯಲ್ಲಿನ ಶ್ರೀ ರಾಮ ಜನ್ಮಭೂಮಿಯಲ್ಲಿದ್ದ ಅಕ್ರಮ ಕಟ್ಟಡವನ್ನು ಒಡೆಯುವ ತಾಕತ್ತು ಹಿಂದೂ ಸಮಾಜದಲ್ಲಿತ್ತು. ಅಲ್ಲೇ ದೇವಸ್ಥಾನವನ್ನು ಕಟ್ಟಲು ಅಸಾಧ್ಯವಲ್ಲ ಎಂದರು.
ಇದೇ ಸಂದರ್ಭ ಸಾಹಿತಿ ಭಗವಾನ್ ಮತ್ತು ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕೃತಿಯನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಹಿಸಿ ಪ್ರತಿಭಟಿಸಲಾಯಿತು. ಈ ಸಂದರ್ಭ ಬೀರಿ ಜಂಕ್ಷನ್ನಿನಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಬಂದ್ ನಡೆಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಈ ಸಂದರ್ಭ ಆರ್‍ಎಸ್‍ಎಸ್‍ನ ಜಿಲ್ಲಾ ಸಹ ಕಾರ್ಯವಾಹ ನಾಗೇಶ್ ಕುಂಪಲ, ಜಿಲ್ಲಾ ಕಾರ್ಯವಾಹ ಪ್ರವೀಣ್ ತಲಪಾಡಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಉಳ್ಳಾಲ ತಾಲೂಕು ವ್ಯವಸ್ಥಾ ಪ್ರಮುಖ್ ಅರ್ಜುನ್ ಮಾಡೂರು, ಬೌದಿಕ್ ಪ್ರಮುಖ್ ಸಾಗರ್ ಮಾಡೂರು, ತಾಲೂಕು ಪ್ರಚಾರ ಪ್ರಮುಖ್ ಆಶೀಕ್ ಮಾಡೂರು, ತಾಲೂಕು ಸಂಪರ್ಕ ಪ್ರಮುಖ್ ವಿಶ್ವನಾಥ್ ಕೊಲ್ಯ, ಮಂಡಲ ಕಾರ್ಯವಾಹ ಗಣೇಶ್ ನಡಾರು, ಸಹ ಕಾರ್ಯವಾಹ ರಾಜೇಶ್ ಪಾನೀರು ಮುಂತಾದವರು ಉಪಸ್ಥಿತರಿದ್ದರು.