Site icon Ullalavani

ಉಳ್ಳಾಲ: ಸಮುದ್ರಪಾಲಾಗುತ್ತಿದ್ದ ಮೂವರ ರಕ್ಷಿಸಿದ ಜೀವರಕ್ಷಕರು

ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಮೊಗವೀರಪಟ್ಣ ಬೀಚ್‌ನಲ್ಲಿ ಭಾನುವಾರ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಮೂಲದ ಬಾಲಕ ಸಹಿತ ಮೂವರನ್ನು ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಆದರೆ ಕಳೆದ ಭಾನುವಾರದ ಘಟನೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತಮ್ಮ ಸದಸ್ಯರು ಬರುವವರೆಗೆ ಜೀವರಕ್ಷಣೆ ಮಾಡುವುದು ಬೇಡ ಎನ್ನುವುದರ ನಿರ್ಣಯದ ನಡುವೆಯೇ ಮಾನವೀಯತೆಯ ಆಧಾರದಲ್ಲಿ ಮೂವರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.


ಸಮುದ್ರಪಾಲಾಗುತ್ತಿದ್ದ ಬೆಂಗಳೂರು ನಂದಿನಿ ಲೇಔಟ್ ನಿವಾಸಿಗಳಾದ ಸೈಯ್ಯದ್ ಅಸ್ಲಾಂ(೮ವರ್ಷ), ಆತನ ತಂದೆ ಸೈಯ್ಯದ್ ಇಬ್ರಾಹಿಂ, ಮತ್ತು ಚಿಕ್ಕಪ್ಪ ಫಿರೋಜ್ ಎಂಬವರಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಉಳ್ಳಾಲ ದರ್ಗಾ ವೀಕ್ಷಿಸಲು ಆಗಮಿಸಿದ್ದ ಸೈಯ್ಯದ್ ಇಬ್ರಾಹಿಂ ಅವರ ಕುಟುಂಬದ ಸದಸ್ಯರು ಭಾನುವಾರ ಬೆಳಗ್ಗೆ ಉಳ್ಳಾಲ ಬೀಚ್‌ಗೆ ಆಗಮಿಸಿದ್ದರು. ತಂಡದಲ್ಲಿದ್ದ ಮಕ್ಕಳು ನೀರಿನ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ಬಾಲಕ ಅಸ್ಲಾಂ ಸಮುದ್ರದ ದೊಡ್ಡ ಅಲೆಗೆ ಸಿಲುಕಿ ಸಮುದ್ರ ಪಾಲಾದ ಬಾಲಕನನ್ನು ರಕ್ಷಿಸಲು ತೆರಳಿದ ಬಾಲಕನ ತಂದೆ ಇಬ್ರಾಹಿಂ ಮತ್ತು ಚಿಕ್ಕಪ್ಪ ಫಿರೋಜ್ ಸಮುದ್ರ ಪಾಲಾಗುತ್ತಿದ್ದಾಗ ಮೀನುಗಾರಿಕೆಯಲ್ಲಿ ತೊಡಗಿದ್ದ ಶಿವಾಜೀ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಇವರನ್ನು ರಕ್ಷಿಸಿದ್ದಾರೆ
ರಕ್ಷಣೆ ನಡೆಸಿದ ತಂಡದಲ್ಲಿ ಸಂಪತ್ ಅಮೀನ್, ದೀಕ್ಷಿತ್ ಕರ್ಕೇರ, ಮೋಹನ್ ಕೋಟ್ಯಾನ್, ಕುನಾಲ್ ಅಮೀನ್, ನಿರಂಜನ್ ಪುತ್ರನ್, ನಿತಿನ್ ಪುತ್ರನ್ ಇದ್ದು, ಎಲ್ಲರಲ್ಲೂ ರಕ್ಷಣೆ ಮಾಡಿದ ಖುಷಿ ಒಂದೆಡೆಯಾದರೆ, ಇನ್ನೊಂದೆಡೆ ಕಳೆದ ವಾರ ಮೇ ೧೦ರ ಭಾನುವಾರ ಸಮುದ್ರದಲ್ಲಿ ಇಳಿದಿದ್ದ ತಂಡಕ್ಕೆ ಎಚ್ಚರಿಕೆ ನೀಡಿದ ವಿಚಾರದಲ್ಲಿ ಗಲಾಟೆ ನಡೆದು ತಮ್ಮ ತಂಡದ ಸದಸ್ಯರ ವಿರುದ್ಧ ಕೊಲೆ ಯತ್ನ ಕೇಸು ಜೈಲು ಪಾಲಾದ ವಿಚಾರದಲ್ಲಿ ಖೇದ ಇತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸದಸ್ಯ ಸಂಪತ್ ಅಮೀನ್ ನಾವು ಮಗುವಿಗಾಗಿ ಮೂವರ ಪ್ರಾಣ ಉಳಿಸಿದೆವು. ಜೀವ ರಕ್ಷಣೆ ಮಾಡುವ ಸಂದರ್ಭದಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೆ ಗಲಾಟೆ ಮಾಡುತ್ತಾರೆ. ಇಂತಹ ಘಟನೆಯಿಂದ ನಮ್ಮ ಮೂವರು ಸದಸ್ಯರು ಜೈಲು ಪಾಲಾಗಿರುವುದು ಖೇದಕರ ಎಂದರು.
ಇನ್ನೊವರ ಸದಸ್ಯ ಗುರುಪ್ರಸಾದ್ ಮಾತನಾಡಿ ನಾವು ಜೀವರಕ್ಷಣೆ ಮಾಡುವ ಹಿಂದೆ ಸರಿಯಲು ಸಂಘ ನಿರ್ಧರಿಸಿದೆ. ನಮ್ಮ ಸದಸ್ಯರು ಬಿಡುಗಡೆಯಾಗುವವರೆಗೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡುವುದಿಲ್ಲ. ಮತ್ತು ಜೀವ ರಕ್ಷಣೆ ಮಾಡಲು ಮುಂದೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೂ ಸಹಕಾರ ನೀಡುವುದನ್ನು ನಿಲ್ಲಿಸಲಾಗುವುದು. ಇಂದು ನಡೆದ ಘಟನೆಯಲ್ಲಿ ಮಗುವಿನಿಂದಾಗಿ ಇನ್ನಿಬ್ಬರ ಪ್ರಾಣ ಉಳಿದಿದೆ. ನಮ್ಮ ಸದಸ್ಯರು ಮಾನವೀಯತೆ ಮೆರೆದಿದ್ದಾರೆ ಎಂದರು.

Exit mobile version