UN NETWORKS
ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನ ಸಾಮಾನ್ಯರ ಹಿತಕಾಪಾಡುವ ಬದಲು ತನ್ನ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಕಾರ್ಮಿಕರ ಬಗ್ಗೆಯಾಗಲಿ ಜನ ಸಾಮಾನ್ಯರ ಪ್ರಶ್ನೆಗಳ ಕುರಿತು ಮುತುವರ್ಜಿ ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಜ.8,9 ರ ಅಖಿಲ ಭಾರತ ಮುಷ್ಕರಕ್ಕೆ ಸಿಐಟಿಯು ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಸಿಐಟಿಯು ಮುಖಂಡ ಕೃಷ್ಣಪ್ಪ ಸಾಲ್ಯಾನ್ ಹೇಳಿದ್ದಾರೆ.
ಸಿಐಟಿಯು ಉಳ್ಳಾಲ ವಲಯ ಮಟ್ಟದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೀಡಿಕಾರ್ಮಿಕರಿಗೆ ಕನಿಷ್ಠ ಮಜೂರಿ 40.00 ಏರಿಕೆಯಾಗಿದ್ದು ಎಂಟು ತಿಂಗಳು ಕಳೆದರು ಮಾಲೀಕರು ನೀಡದೇ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ. ಹಲವು ಹೋರಾಟ ಮಾಡಿ ಸರಕಾರದ ಗಮನ ಸೆಳೆದರು ಕಾರ್ಮಿಕ ಮಂತ್ರಿಗಳು ಕೂಡ ಗಮನ ಹರಿಸಿಲ್ಲ ಎ.2015 ರಿಂದ 2017 ರ ವರೆಗೆ ಮೂರು ವರ್ಷದ 12.75 ಪೈ ತುಟ್ಟಿ ಭತ್ತೆ ಕೂಡ ನೀಡಲಿಲ್ಲ. ವಾರಕ್ಕೆ 6 ದಿನ ಕೆಲಸ ಮಾಡಬೇಕಾಗಿದ್ದ ಮಾಲೀಕರು ಸರಿಯಾಗಿ ಕೆಲಸ ನೀಡುತ್ತಿಲ್ಲ. ಕಳಪೆ ಮಟ್ಟದ ಎಲೆ ವಿತರಿಸಿ ಬೀಡಿಕಾರ್ಮಿಕರನ್ನು ಸುಲಿಗೆ ಮಾಡುತ್ತಾರೆ.ಇದರಿಂದ ಬೀಡಿ ಕಾರ್ಮಿಕರ ಬದುಕು ದುಸ್ಥರವಾಗಿದೆ.ಕೇಂದ್ರ ಸರಕಾರ ದೂಮಪಾನದಿಂದ ಜನಸಾಮಾನ್ಯರ ಆರೋಗ್ಯದ ವಿಚಾರ ಮುಂದಿಟ್ಟುಕೊಂಡು ಕೋಟ್ಪಾ ಕಾನೂನು ಜಾರಿ ಮಾಡಿದೆ. ಇದರಿಂದ ಬೀಡಿ ಮಾಲೀಕರು , ಮಜೂರಿ ಮತ್ತು ಸವಲತ್ತು ನೀಡಲು ನಿರಾಕರಿಸುತ್ತಿದ್ದಾರೆ. ಮರಳು ಅಭಾವದಿಂದ ಕೂಲಿ ಕೆಲಸಗಳು ನಿಂತು ಹೋಗಿವೆ ಎಂದರು.
ಈ ಸಂದರ್ಭ ಮುಖಂಡರುಗಳಾದ ವಿಲಾಸಿನಿ ತೊಕ್ಕೊಟ್ಟು, ಜನಾರ್ದನ .ಕೆ, ರೋಹಿದಾಸ್ ತೊಕ್ಕೊಟ್ಟು, ಬಾಬು ಪಿಲಾರ್, ರಾಮಚಂದ್ರ ಪಜೀರು, ನವೀನ್ ಕುತ್ತಾರ್, ಇಬ್ರಾಹಿಂ ಮದಕ, ನಾರಾಯಣ ತಲಪಾಡಿ, ಶ್ರೀನಿವಾಸ ಉಳ್ಳಾಲಬೈಲ್, ಪುಷ್ಪ ಪಿಲಾರ್, ಬೇಬಿ ಪಿಲಾರ್ ಮುಂತಾದವರು ಉಪಸ್ಥಿತರಿದ್ದರು.