Site icon Ullalavani

ಸಮಾಜದಲ್ಲಿ ಅಹಿತಕರ ಘಟನೆಗಳು ದುರದೃಷ್ಟಕರ: ರಿಯಾಝ್ ಫೈಝಿ

UN NETWORKS

ಫಜೀರು: ಯಾವುದೇ ಧರ್ಮದಲ್ಲೂ ಅತ್ಯಾಚಾರ, ಕೋಮುವಾದ ಪ್ರೋತ್ಸಾಹ ನೀಡಿಲ್ಲ. ಯಾವುದೇ ಧರ್ಮಗುರುಗಳೂ ಅಂತಹ ವಿಚಾರವನ್ನೂ ಭೋದಿಸಿಲ್ಲ. ಆದರೂ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಮಲಾರ್ ಜುಮಾ ಮಸೀದಿ ಖತೀಬ್ ಎಂ.ಎ.ರಿಯಾಝ್ ಫೈಝಿ ಅಭಿಪ್ರಾಯಪಟ್ಟರು.

ಫಜೀರ್ ಮೆರ್ಸಿಯಮ್ಮನವರ ಧರ್ಮಕೇಂದ್ರದ ವತಿಯಿಂದ ಮಂಗಳವಾರ ಚರ್ಚ್ ಮೈದಾನದಲ್ಲಿ ನಡೆದ `ಬಂಧುತ್ವ ಕ್ರಿಸ್ಮಸ್’ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೋಮು ಗಲಭೆ, ಅತ್ಯಾಚಾರ, ಅನಾಚಾರ ನಡೆದಾಗ ಅದನ್ನು ಧರ್ಮದ ಆಧಾರದಲ್ಲಿ ನೋಡಬಾರದು. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರು ಧರ್ಮಹೀನರಾಗಿದ್ದಾರೆ. ತಪ್ಪು ಕೃತ್ಯದಲ್ಲಿ ಭಾಗಿಯಾದವರಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರುವ ಪ್ರಯತ್ನದ ಮೂಲಕ ಧರ್ಮದ ಪಾವಿತ್ರ್ಯತೆ ಕಾಪಾಡಬೇಕು ಎಂದು ಹೇಳಿದರು.

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ್ ಪೂಜಾರಿ ಮಾತನಾಡಿ, ಶಾಂತಿ, ಪ್ರೀತಿ, ಸಹನೆಯನ್ನು ಭೋದಿಸಿದ, ಶಿಲುಬೆಗೇರುವ ಸಂದರ್ಭದಲ್ಲೂ ದುಷ್ಟರಿಗೆ ಕ್ಷಮೆ ಬೇಡಿದ ಏಸು ಕ್ರಿಸ್ತರ ಸಂದೇಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸಿ ಶಾಂತಿಯುತ ಸಮಾಜ ನಿರ್ಮಿಸಬೇಕಿದೆ ಎಂದು ಹೇಳಿದರು.

ಮೆರ್ಸಿಯಮ್ಮನವರ ಧರ್ಮಕೇಂದ್ರದ ಧರ್ಮಗುರು ಫಾ.ಸುನಿಲ್ ಜೋಸೆಫ್ ವೇಗಸ್ ಅಧ್ಯಕ್ಷತೆ ವಹಿಸಿ, ಕ್ರಿಸ್ಮಸ್ ಎಂದರೆ ಭ್ರಾತೃತ್ವ ಎಂದಾಗಿದೆ. ಸಮಾಜವನ್ನು ಸರಿಪಡಿಸುವ ಏಕೈಕ ದಾರಿ ಸೌಹಾರ್ದತೆಯಾಗಿದೆ. ಮನುಷ್ಯತ್ವ ಕಳೆದು ಹೋಗಿರುವ ಇಂದಿನ ದಿನಗಳಲ್ಲಿ ಹಬ್ಬದ ಅದ್ದೂರಿತನದೊಂದಿಗೆ ಸಿದ್ಧಾಂತವನ್ನೂ ಪ್ರತಿಪಾದಿಸಬೇಕಾಗಿದೆ ಎಂದರು. ಫಾ.ಅಸಿಸಿ ಡಿ.ಅಲ್ಮೆಡ ಪಡುಕೋಣೆ, ಮೆರ್ಸಿ ಕಾನ್ವೆಂಟ್ ಇದರ ಸಿಸ್ಟರ್ ವಿಜಯ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಜಾನ್ ವಿಕ್ಟರ್ ಮೆಂಡೋನ್ಸ, ಸಾಂಸ್ಕೃತಿಕ ಮತ್ತು ಯುವಜನ ಹಿತಸಮಿತಿ ಸಂಚಾಲಕ ಸಂತೋಷ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು.ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ ಸ್ವಾಗತಿಸಿದರು. ಕೆಥೋಲಿಕ್ ಸಭಾ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಹೀನಾ ಲೀಶಾ ಫೆರವೋ ಹಾಗೂ ನಿಶಾ ಡಿಸೋಜ ವಿವಿಧ ಸ್ವರ್ಧೆಗಳ ಬಹುಮಾನ ವಿಜೇತರ ಹೆಸರು ವಾಚಿಸಿದರು. ಕಾರ್ಯದರ್ಶಿ ಜೋಸ್ನ ಡಿಸೋಜ ವಂದಿಸಿದರು. ಪ್ರೀತಂ ನೊರೊನ್ಹ ಕಾರ್ಯಕ್ರಮ ನಿರೂಪಿಸಿದರು.

`ಧರ್ಮಗುರುಗಳಿಂದ ಅಸಾಧ್ಯವಾಗಿರುವ ಸೌಹಾರ್ದತೆ ಒಂದು ಮಗುವಿನಲ್ಲಿ ಸಾಧ್ಯ, ಯಾಕೆಂದರೆ ಬಸ್ಸಿನಲ್ಲಿ ಕರೆದುಕೊಂಡು ಬಂದರೆ ಯಾರೂ ಅದರ ಧರ್ಮ ನೋಡುವುದಿಲ್ಲ. ಧರ್ಮಗುರುಗಳ ಸೌಹಾರ್ದ ಸಂದೇಶ ಎಲ್ಲರೂ ಪಾಲಿಸಿದ್ದರೆ ಭೂಮಿ ಸ್ವರ್ಗಲೋಕವಾಗುತ್ತಿತ್ತು’
ಫಾ.ಅಸಿಸಿ ಡಿ.ಅಲ್ಮೆಡ ಪಡುಕೋಣ, ಧರ್ಮಗುರು

Exit mobile version