Site icon Ullalavani

ಸಮುದಾಯ ಭವನಗಳು ಸಮಾಜದ ಸಂಪತ್ತಾಗಿದೆ: ಸಚಿವ ಯು.ಟಿ. ಖಾದರ್

UN NETWORKS

ಕೊಣಾಜೆ: ಸಮುದಾಯ ಭವನಗಳು ಸಮಾಜದ ಸಂಪತ್ತಾಗಿದ್ದು ಯುವಪೀಳಿಗೆಗೆ ನೀಡುವ ದೊಡ್ಡ ಕೊಡುಗೆಯಾಗಿದೆ. ಯಾವುದೇ ಸಮಾಜ ಭವನ ನಿರ್ಮಾಣಕ್ಕೆ ಮುಂದಾದಾಗ ಸರ್ಕಾರ ಮುಂದೆ ನಿಂತು ಸಂಪೂರ್ಣ ಸಹಕಾರ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ 38ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹಿರಿಯರನ್ನು ಕಣ್ಣೀರು ಹಾಕಿಸಿದ ಯಾರೂ ಉದ್ಧಾರ ಆಗಿಲ್ಲ. ಯುವಪೀಳಿಗೆ ಹಿರಿಯರಿಂದ ಆಸ್ತಿ, ಅಂತಸ್ತಿಗಿಂತ ಅನುಭವ ಪಡೆದು ಮುನ್ನಡೆದಾಗ ದೇಶ, ಸಮಾಜದ ಸಂಪತ್ತಾಗಲು ಸಾಧ್ಯ. ಹೆತ್ತವರು ಸರ್ಕಾರದ ಮೇಲೆ ವಿಶ್ವಾಸ ಇಡುವ ಜೊತೆ ತಮ್ಮ ಮಕ್ಕಳ ಮೇಲೆ ಹೆಚ್ಚು ವಿಶ್ವಾಸ ಇಟ್ಟು ಶಿಕ್ಷಣ ನೀಡಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ `ಸಮಾಜ ಏನಾಗಬೇಕು ಎನ್ನುವ ಸ್ಪಷ್ಟ ನಿರ್ಧಾರ ನಮಗಿರವೇಕು, ಮಂದಿರ, ಭವನ ನಿರ್ಮಾಣ, ಕಾರ್ಯಕ್ರಮಗಳು ಒಂದು ಭಾಗ ಮಾತ್ರ, ಸಮುದಾಯದ ಮಕ್ಕಳು ಅಭಿವೃದ್ಧಿಯಾಗಬೇಕಾದರೆ ಉತ್ತಮ ಶಿಕ್ಷಣ ನೀಡುವುದೊಂದೇ ದಾರಿ ಎಂದರು.ಸಾಮಾಜಿಕ ತುಳಿತಕ್ಕೊಳಗಾಗಿದ್ದ ಅದೆಷ್ಟೋ ಸಮುದಾಯ ಮುಖ್ಯವಾಹಿನಿಗೆ ಬಂದಿದ್ದರೂ ಇಂದಿಗೂ ಕೆಲವು ಕಡೆಗಳಲ್ಲಿ ಅಸ್ಪೃಶ್ಯತೆ ನೆಲೆ ನಿಂತಿರುವುದು ದುರಂತ. ರಾಜ್ಯದಲ್ಲಿ ಈಡಿಗ ಸಮುದಾಯ ಐದನೇ ಸ್ಥಾನದಲ್ಲಿದ್ದರೂ ಅರ್ಹವಾಗಿ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಜನಾ ಸಂಕೀರ್ತನಕಾರ ದೂಮಪ್ಪ ಪೂಜಾರಿ ಜೋಗಿಬೆಟ್ಟು ಹಾಗೂ ಬಾಲನಟಿ ಸಪ್ತಾ ಎಸ್. ಪಾವೂರು ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಪುತ್ತೂರು ಬಿರ್ವೆರ್ ಕುಡ್ಲ ಅಧ್ಯಕ್ಷ ಶೈಲೇಶ್ ಬಿರ್ವ, ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಆಂಚನ್, ಸ್ಥಳದಾನಿ ಉಮೇಶ್ ಕರ್ಕೇರ ಪಾಂಡೇಶ್ವರ, ಮಹಿಳಾ ಘಟಕ ಅಧ್ಯಕ್ಷೆ ಬಬಿತಾ ಪೂಜಾರಿ ಉಪಸ್ಥಿತರಿದ್ದರು.ರವೀಂದ್ರ ಬಂಗೇರ ಸ್ವಾಗತಿಸಿದರು. ಸುಭಾಷ್ ಧರ್ಮನಗರ ಮತ್ತು ಪ್ರವೀಣ್ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಅಜಿತ್ ಪೂಜಾರಿ ಹಾಗೂ ಸುರೇಖ ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Exit mobile version