Site icon Ullalavani

ನಕ್ಸಲ್ ಪೀಡಿತ ಪ್ರದೇಶದಲ್ಲಿ ದ.ಕ ಜಿಲ್ಲಾ ಪತ್ರಕರ್ತರ ಸಂಘದಿಂದ ಗ್ರಾಮವಾಸ್ತವ್ಯ..!

UN NETWORKS

ಮಂಗಳೂರು: ಅದು ದ.ಕ ಜಿಲ್ಲೆಯ ಕಟ್ಟಕಡೆಯ ಕುಗ್ರಾಮ. ಈ ಮಧ್ಯೆ ನಕ್ಸಲ್ ಪೀಡಿತ ಪ್ರದೇಶ ಅನ್ನೋ ಹಣೆಪಟ್ಟಿ ಹೊಂದಿರೋ ಹಿಂದುಳಿದ ಪ್ರದೇಶ. ಹೀಗಾಗಿಯೇ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರೋ ಒಂದು ಪುಟ್ಟ ಹಳ್ಳಿ. ಆದ್ರೆ ಇಂದು ಮಾತ್ರ ಆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಹಾದಿಯಾಗಿ ಜಿಲ್ಲೆಯ ಎಲ್ಲಾ ಅಧಿಕಾರಿಗಳ ದಂಡೇ ಆಗಮಿಸುತ್ತು. ಇದಕ್ಕೆ ಕಾರಣವಾಗಿದ್ದು ರಾಜ್ಯದಲ್ಲೇ ಮೊದಲ ಬಾರಿಗೆ ದ.ಕ ಜಿಲ್ಲೆಯ ಪತ್ರಕರ್ತರು ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮ.

ಕುತ್ಲೂರು..ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಟ್ಟಕಡೆಯ ಗ್ರಾಮ. ದ.ಕ ಜಿಲ್ಲೆ ಅಭಿವೃದ್ದಿ ಹೊಂದುತ್ತಿದ್ದರೂ ಈ ಕುತ್ಲೂರು ಅನ್ನೋ ಗ್ರಾಮಕ್ಕೆ ಇಂದಿಗೂ ಅದೆಷ್ಟೋ ಸರ್ಕಾರಿ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಗ್ರಾಮ ಇಂದಿಗೂ ಕುಗ್ರಾಮವಾಗಿಯೇ ಇದೆ. ಈ ಮಧ್ಯೆ ಸುಮಾರು 15-20 ವರ್ಷಗಳ ಹಿಂದೆ ಇಲ್ಲಿ ನಕ್ಸಲರು ಕಾಣಿಸಿಕೊಂಡು ಹಲವು ವರ್ಷಗಳ ಕಾಲ ಅವ್ರ ಚಟುವಟಿಕೆ ತೋರಿಸಿದ್ದ ಕಾರಣ ಕುತ್ಲೂರು ಇಂದಿಗೂ ನಕ್ಸಲ್ ಪೀಡಿತ ಪ್ರದೇಶದ ಹಣೆಪಟ್ಟಿ ಕಟ್ಟಿಕೊಂಡಿದೆ. ಆದ್ರೆ ಇಂದು ಮಾತ್ರ ಆ ಗ್ರಾಮದಲ್ಲಿ ಹಬ್ಬದ ವಾತಾವರಣವಿತ್ತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಜಿಲ್ಲೆಯ ಅಧಿಕಾರಿಗಳ ದಂಡೇ ಬೆಳಿಗ್ಗಿನಿಂದ ತಡರಾತ್ರಿಯವರೆಗೂ ಕುತ್ಲೂರು ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಅಷ್ಟೇ ಅಲ್ಲದೇ ಇಲ್ಲಿನ ಜನ್ರ ಸಮಸ್ಯೆ ಆಲಿಸೋಕೆ ಇಡೀ ಸರ್ಕಾರವೇ ಆ ಗ್ರಾಮಕ್ಕೆ ಬಂದಿತ್ತು. ಅಸಲಿಗೆ ಇದಕ್ಕೆ ಕಾರಣವಾಗಿದ್ದು ದ.ಕ ಜಿಲ್ಲಾ ಪತ್ರಕರ್ತರ ಸಂಘ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ…ಹೌದು..ಕೇವಲ ಸುದ್ದಿಗಳನ್ನಷ್ಟೇ ಮಾಡೋ ಪತ್ರಕರ್ತರ ದಂಡು ಇದೇ ಮೊದಲ ಬಾರಿಗೆ ಜನ್ರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಆಡಳಿತ ವ್ಯವಸ್ಥೆಯನ್ನ ಕರೆತಂದು ಪರಿಹಾರ ನೀಡೋ ಕೆಲಸಕ್ಕೆ ಮುಂದಾಗಿತ್ತು. ಹೀಗಾಗಿ ಬೆಳಿಗ್ಗೆ ಕುತ್ಲೂರು ಸರ್ಕಾರಿ ಶಾಲಾ ಆವರಣದಲ್ಲಿ ಆರಂಭವಾದ ಕಾರ್ಯಕ್ರಮ ಬರೋಬ್ಬರಿ ಮಧ್ಯರಾತ್ರಿ 12 ಗಂಟೆವರೆಗೂ ನಡೆದು ಬಳಿಕ ಪತ್ರಕರ್ತರು ಗ್ರಾಮದಲ್ಲೇ ವಾಸ್ತವ್ಯ ಹೂಡೋ ಮೂಲಕ ಮುಕ್ತಾಯವಾಯ್ತು. ಅಲ್ಲದೇ ಕುತ್ಲೂರು ಗ್ರಾಮದ ಜನ್ರು ಕೂಡ ಪತ್ರಕರ್ತರ ಗ್ರಾಮವಾಸ್ತವ್ಯದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನ ಜಿಲ್ಲಾಡಳಿತಕ್ಕೆ ಹೇಳಿದ್ರು, ಪರಿಣಾಮ ಬರೋಬ್ಬರಿ 72 ಅರ್ಜಿಗಳು ಜಿಲ್ಲಾಡಳಿತಕ್ಕೆ ಬಂದಿದ್ದು, ನೋಡಲ್ ಅಧಿಕಾರಿ ನೇಮಿಸೋ ಮೂಲಕ ಜಿಲ್ಲಾಡಳಿತ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದೆ.

ಇನ್ನು ಬೆಳಿಗ್ಗೆ ಆರಂಭವಾದ ಕಾರ್ಯಕ್ರಮ ರಾತ್ರಿ ವಾಸ್ತವ್ಯದವರೆಗೂ ಮುಂದುವರೆಯಿತು. ಇನ್ನು ನಕ್ಸಲ್ ಪೀಡಿತವಾಗಿರೋ ಪ್ರದೇಶವಾಗಿರೋ ಕಾರಣದಿಂದ ದ.ಕ ಜಿಲ್ಲಾ ಪೊಲೀಸ್ ಇಲಾಖೆ ಭಾರೀ ಭದ್ರೆತೆ ಏರ್ಪಡಿಸಿತ್ತು. ಅಲ್ಲದೇ ಎಎನ್ಎಫ್ ಕುತ್ಲೂರು ಭಾಗ ಕಾಡಿನಲ್ಲಿ ಕೂಂಬಿಂಗ್ ಕೂಡ ನಡೆಸಿತ್ತು. ಈ ಮಧ್ಯೆ ಪತ್ರಕರ್ತರ ಕಾರ್ಯಕ್ರಮದ ನಡೆದ ಶಾಲೆ ಮತ್ತು ವಾಶ್ತವ್ಯ ಹೂಡಿದ ಮನೆಗಳಿಗೆ ಭಾರೀ ಭದ್ರೆತೆ ಏರ್ಪಡಿಸಲಾಗಿತ್ತು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೂಡ ಗ್ರಾಮವಾಸ್ತವ್ಯದಲ್ಲಿ ಪಾಲ್ಗೊಂಡು ಗ್ರಾಮದ ಜನ್ರ ನೋವು ಆಲಿಸಿದ್ರು. ಈ ವೇಳೆ ಗ್ರಾಮಸ್ಥರು ಮನೆಗೆ ವಿದ್ಯುತ್ ಒದಗಿಸೋ ಬಗ್ಗೆ, ಹಕ್ಕು ಪತ್ರ ಇಲ್ಲದಿರೋದು, ಕಸ್ತೂರಿ ರಂಗನ್ ಆತಂಕ, ಯೋಜನೆಗಳು ತಲುಪದೇ ಇರೋದು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನ ಸಚಿವ್ರ ಗಮನಕ್ಕೆ ತಂದ್ರು. ಈ ವೇಳೆ ಸ್ಥಳದಲ್ಲೇ ಇದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಅವುಗಳನ್ನ ಬಗೆಹರಿಸೋವಂತೆ ಪಂಚಾಯತಿ ಕಟ್ಟೆಯಲ್ಲಿ ಕೂತ ಸಚಿವ ಖಾದರ್ ಖಡಕ್ ಸೂಚನೆ ನೀಡಿದ್ರು. ಈ ಮಧ್ಯೆ ಇಡೀ ಗ್ರಾಮವನ್ನ ಮತ್ತೆ ಜಂಟಿ ಸರ್ವೇ ನಡೆಸಿ ಹಕ್ಕು ಪತ್ರ ಇಲ್ಲದವ್ರಿಗೆ ಹಕ್ಕು ಪತ್ರ ವಿತರಿಸೋಕೆ ಮುಂದಾಗಿ ಅಂತ ಪುತ್ತೂರು ಉಪವಿಭಾಗಾಧಿಕಾರಿಗೆ ಸಚಿವ ಖಾದರ್ ಸೂಚನೆ ನೀಢಿದ್ರು. ಅಲ್ಲದೇ ಸರ್ಕಾರಿ ಬಸ್ಸು, ಶಾಲೆಗಳ ಅಭಿವೃದ್ದಿ ಸಂಬಂಧಪಟ್ಟಂತೆ ಅಲ್ಲಿನ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ತಿಳಿಸಿದ್ರು. ಇನ್ನು ರಾತ್ರಿ ಕುತ್ಲೂರು ಪಂಚಾಯತ್ ಉಪಾಧ್ಯಕ್ಷೆಯ ಮನೆಯಲ್ಲಿ ಪತ್ರಕರ್ತರು ವಾಸ್ತವ್ಯ ಹೂಡಿದ್ರು. ಈ ವೇಳೆ ಕುತ್ಲೂರಿನ ಇತಿಹಾಸ, ನಕ್ಸಲ್ ನಂಟಿನ ಬಗ್ಗೆ ಸುಧೀರ್ಘ ಸಂವಾದ ನಡೆಸಿದ್ರು. ಅಲ್ಲದೇ ತುಳುನಾಡ ಪಾಡ್ದನ ಹಾಡುಗಳನ್ನ ಗ್ರಾಮದ ಹಿರಿಯರು ಹಾಡೋ ಮೂಲಕ ಅರ್ಥಪೂರ್ಣ ಗ್ರಾಮ ವಾಸ್ತವ್ಯ ನಡೀತು. ಇನ್ನು ಪತ್ರಕರ್ತರ ಸಂಘ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಸ್ತಿರೋ ಇಂಥದ್ದೊಂದು ಕಾರ್ಯಕ್ರಮದ ಬಗ್ಗೆ ಸಚಿವ ಖಾದರ್ ಮತ್ತು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ರು. ಕೇವಲ ಸುದ್ದಿಗಳನ್ನ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಬಿಸಿ ಮುಟ್ಟಿಸ್ತಿದ್ದ ಪತ್ರಕರ್ತವರ್ಗ ಇಂದು ಕುತ್ಲೂರು ಗ್ರಾಮದಲ್ಲೇ ಬೀಡುಬಿಟ್ಟು ಜನ್ರ ಪರ ಧ್ವನಿಯೆತ್ತಿದೆ.

ದ.ಕ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘವೂ ಸಾಥ್ ನೀಢಿದೆ. ಪರಿಣಾಮ ಅಧಿಕಾರಿ ವರ್ಗ ಜನ್ರ ನೋವು ಆಲಿಸಿ ಎಲ್ಲಾ ಅರ್ಜಿಗಳನ್ನ ಪರಿಶೀಲಿಸಿ ಪರಿಹಾರ ನೀಡಲು ನೋಡಲ್ ಅಧಿಕಾರಿಯನ್ನೇ ನೇಮಿಸಿದೆ. ಒಟ್ನಲ್ಲಿ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರೋ ಜಿಲ್ಲೆಯ ಪತ್ರಕರ್ತರ ಕಾರ್ಯ ಸದ್ಯ ಭಾರೀ ಪ್ರಶಂಸೆಗೆ ಕಾರಣವಾಗಿದೆ.

Exit mobile version