Site icon Ullalavani

ಪುಸ್ತಕ ಓದುವಿಕೆಯಲ್ಲಿ ಭವಿಷ್ಯ ನಿರ್ಮಾಣ: ಲೋಕೇಶ್

UN NETWORKS

ತೊಕ್ಕೊಟ್ಟು: ದೇಶದ ಭವಿಷ್ಯ ಯುವಸಮುದಾಯ ಹಾಗೂ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ಶಾಲಾ ಜೀವನದಲ್ಲಿ ಸಿಗುವಂತಹ ಅವಕಾಶ ಬಳಸಿ ದೇಶದ ಭವಿಷ್ಯ ರೂಪಿಸುವ ಕನಸು ಕಾಣಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದ್ದು ಅದಕ್ಕಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್-ಗೈಡ್ಸ್ ದ.ಕ.ಜಿಲ್ಲಾ ಸಂಸ್ಥೆ ಮಂಗಳೂರು, ಉಳ್ಳಾಲ ಸ್ಥಳೀಯ ಸಂಸ್ಥೆ ಮತ್ತು ಸಂತ ಸೆಬಾಸ್ಟಿಯನ್ ಸಮೂಹ ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಶಿಕ್ಷಣ ಸಂಸ್ಥೆ ಹಾಗೂ ಹೋಲಿ ಏಂಜಲ್ಸ್ ಶಾಲೆಯಲ್ಲಿ ನಡೆದ ಮೂರು ದಿನಗಳ ಸ್ಕೌಟ್ಸ್-ಗೈಡ್ಸ್ ಮೇಳ-2018ರ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ನಾವು ಭಾಗವಹಿಸುವ ಚಟುವಟಿಕೆ, ಕಲಿಕೆ ಬಹುಕಾಲ ಉಳಿಯುತ್ತದೆ. ಆ ನಿಟ್ಟಿನಲ್ಲಿ ಈ ಹಂತದಲ್ಲಿ ಸಿಗುವ ಅವಕಾಶ ಉತ್ತಮವಾಗಿ ಬಳಸಿಕೊಳ್ಳಬೇಕು. ದೇಶಪ್ರೇಮ ಎಂಬುದು ನಮ್ಮಲ್ಲಿ ಸದಾ ಇರಬೇಕು ಎಂದು ಹೇಳಿದರು.

ಜಿಲ್ಲಾ ಸ್ಕೌಟ್ಸ್ ಆಯುಕ್ತ ರಾಮಶೇಷ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಕ್ಕಳು ಎಂದಿಗೂ ನಿರಾಶರಾಗಬಾರದು. ಸಮಾಜದಲ್ಲಿ ಮಾರ್ಗದರ್ಶನ ನೀಡುವ ಪ್ರಯತ್ನ ಅಗತ್ಯ, ಬೆನ್ನ ಹಿಂದೆ ಚೂರಿ ಹಾಕುವ ಕೆಟ್ಟ ಜನರೂ ಇದ್ದು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ್ಮಶಕ್ತಿಯಿಂದ ಮುನ್ನುಗ್ಗಬೇಕು ಎಂದು ತಿಳಿಸಿದರು.ಉಳ್ಳಾಲ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಜಿ.ಕಜೆ, ಜಿಲ್ಲಾ ತರಬೇತಿ ಆಯುಕ್ತ ಪ್ರತಿಂ ಕುಮಾರ್, ಜತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಸಂತ ಸೆಬಾಸ್ಟಿಯನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರೈಮಂಡ್ ಡಿಸೋಜ, ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಜೋಸ್ಲಿನ್, ಶಿಕ್ಷಣ ಪ್ರೇಮಿ ಬಿ.ಎ.ಖಾದರ್ ದೇರಳಕಟ್ಟೆ, ಶಿಬಿರ ಸಹನಿರ್ದೇಶಕಿ ಚಂದ್ರಕಲಾ, ಕಾರ್ಯದರ್ಶಿ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಶಿಬಿರ ನಿರ್ದೇಶಕ ತ್ಯಾಗಂ ಹರೇಕಳ ಕಾರ್ಯಕ್ರಮದ ವಿವರ ನೀಡಿದರು. ಸ್ಥಳೀಯ ಸಂಸ್ಥೆ ಜತೆಕಾರ್ಯದರ್ಶಿ ಪ್ರತೀಪ್ ಎ.ಆರ್. ವಂದಿಸಿದರು. ಕ್ಲೇರ ವೇಗಸ್ ಕಾರ್ಯಕ್ರಮ ನಿರೂಪಿಸಿದರು.

Exit mobile version