Site icon Ullalavani

ಕೃಷಿ ಕಾರ್ಯದಲ್ಲಿ ಭಾಗಿಯಾದ ಕಾಲೇಜು ಪ್ರಾಂಶುಪಾಲರು

UN NETWORKS

ಉಳ್ಳಾಲ: ವಿದ್ಯಾರ್ಥಿಗಳನ್ನು ಗದ್ದೆ ಕಾರ್ಯದಲ್ಲಿ ತೊಡಗಿಸಿಕೊಂಡು ಕೃಷಿಕರಿಗೆ ಸ್ಫೂರ್ತಿಯನ್ನು ತುಂಬಿಸುವ ಕಾರ್ಯ ಜಿಲ್ಲೆಯಾದ್ಯಂತ ಆಗುತ್ತಲೇ ಇದೆ. ಆದರೆ ಇದೀಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೇತೃತ್ವದಲ್ಲಿ ಜಿಲ್ಲೆಯ 30 ಮಂದಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು ಬೆಳೆಸಿದ ಭತ್ತದ ಪೈರು ಕಟಾವಿನಲ್ಲಿ ಕೈಜೋಡಿಸುವ ಮೂಲಕ ಮಾದರಿಯಾದರು.

ಅಂಬಿಕಾರೋಡ್ ಬಾರ್ದೆ ಸುಮಾರು ಎರಡು ಎಕರೆ ಗದ್ದೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸೇರಿಕೊಂಡು ನಾಟಿ ಕಾರ್ಯ ನಡೆಸಿತ್ತು. ಒಂದು ಗದ್ದೆಯಲ್ಲಿ ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಕಾಲೇಜಿನ ಸುಮಾರು 40 ಮಂದಿ ವಿದ್ಯಾರ್ಥಿಗಳು ಮೂರು ತಿಂಗಳ ಹಿಂದೆ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು. ಅದರ ಭತ್ತದ ಪೈರಿನ ಕಟಾವಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಕೈಜೋಡಿಸಿದರು. ಬೆಳಿಗ್ಗೆ 8 ಗಂಟೆಯಿಂದ ಕಟಾವು ಕಾರ್ಯದಲ್ಲಿ ಭಾಗವಹಿಸಿದ ಸಂಘದ ಕಾರ್ಯಕರ್ತರು ಮಧ್ಯಾಹ್ನದವರೆಗೆ ಸುಡುಬಿಸಿಲಿನಲ್ಲಿ ಭಾಗವಹಿಸಿದರು.

ಹಲವರು ಕೃಷಿಕರ ಮಕ್ಕಳೇ ಆಗಿದ್ದಾರೆ. ಆದುದರಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ಅನುಭವವಿದೆ. ಕೃಷಿಕರು ಅನುಕೂಲವಾಗುವುದಾದಲ್ಲಿ ಮುಂದೆಯೂ ಹೆಚ್ಚಿನ ಮಂದಿಯನ್ನು ಸೇರಿಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದು ಭಾಗವಹಿಸಿದ ಪ್ರಾಂಶುಪಾಲರೆಲ್ಲರ ಅಭಿಪ್ರಾಯವಾಗಿದೆ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಎಲ್ವಿರಾ ಫಿಲೋಮಿನಾ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ ಉಪಾಧ್ಯಾಯ, ಉಪಾಧ್ಯಕ್ಷರುಗಳಾದ ಉಮೇಶ್ ಕರ್ಕೇರ, ಶರ್ಮಿಳಾ ರಾವ್, ಕಾರ್ಯದರ್ಶಿ ಯೂಸುಫ್ ಮುಂತಾದವರು ಉಪಸ್ಥಿತರಿದ್ದರು.

ಅರ್ಥಪೂರ್ಣವಾದ ಕಾರ್ಯಕ್ರಮ. ಕಾಸರಗೋಡು ಬಾಯಾರು ಕೃಷಿ ಕುಟುಂಬದಿಂದ ಬಂದವನು. ಕುಟುಂಬದ ಜೊತೆಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡುತ್ತಿದ್ದೆನು. ವೃತ್ತಿ ನಿಮಿತ್ತ ನಗರಕ್ಕೆ ಬಂದಾಗ ಕೃಷಿ ಕಾರ್ಯದಲ್ಲಿ ಭಾಗಿಯಾಗಲು ಆಸೆಯಿತ್ತು. ಪ್ರಾಚಾರ್ಯರ ಸಂಘದಿಂದ ಅದು ನೆರವೇರಿದೆ. ಮುಂದೆಯೂ ಅನ್ನದಾತನ ಜೊತೆಗೆ ಕೈಜೋಡಿಸುವ ಕಾರ್ಯ ಇನ್ನಷ್ಟು ಸಂಘ ಸಂಸ್ಥೆಗಳಿಂದ ಆಗಬೇಕಿದೆ. ಈ ಮೂಲಕ ಕೃಷಿಕರಿಗೆ, ನಾಗರಿಕರಿಗೆ ಕೃಷಿ ಬಗ್ಗೆ ಒಲವು ಹೆಚ್ಚಾಗುವುದು.
ಯೂಸುಫ್
ಪ್ರಾಂಶುಪಾಲರು
ಬದ್ರಿಯಾ ಕಾಲೇಜು ಮಂಗಳೂರು

ಕೂಲಿ ಕಾರ್ಮಿಕರ ಸಮಸ್ಯೆಯಿಂದ ಕೃಷಿಕರು ಹೈರಾಣಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಪ್ರಾಚಾರ್ಯರ ಸಂಘ ಅವರೊಂದಿಗೆ ಕೈಜೋಡಿಸಿದೆ. ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಸಂದೇಶ. ತಿನ್ನುವಂತಹ ಆಹಾರ ಬೆಳೆಸಲು ಎಷ್ಟು ಕಷ್ಟವಿದೆ ಅನ್ನುವುದು ಗೊತ್ತಾಗುತ್ತದೆ.
ವಿಷ್ಣುಮೂರ್ತಿ
ಪ್ರಾಂಶುಪಾಲರು
ಸರಕಾರಿ ಪದವಿಪೂರ್ವ ಕಾಲೇಜು ಮುಲ್ಕಿ

ಕೃಷಿಕರ ಕಷ್ಟಕಾರ್ಪಣ್ಯಗಳ ಅರಿವಿದೆ. ಇಂದಿನ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಮಾಹಿತಿಯಿಲ್ಲ. ಕನಿಷ್ಟ ಜ್ಞಾನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳಿಂದ ಆಗಬೇಕಿದೆ. ದೈಹಿಕ ಕ್ಷಮತೆ, ದೃಢತೆಯ ಜೊತೆಗೆ ಮಾನಸಿಕ ನೆಮ್ಮದಿ ಕೃಷಿ ಕೆಲಸದಿಂದ ಆಗುತ್ತದೆ.
ಉಮೇಶ್ ಕರ್ಕೇರ
ಪ್ರಾಂಶುಪಾಲರು
ಶ್ರೀ ನಾರಾಯಣ ಗುರು ಪದವಿಪೂರ್ವ ಕಾಲೇಜು ಕಾಟಿಪಳ್ಳ

ಕೃಷಿ ಕುಟುಂಬದಿಂದ ಬಂದಿರುವ ಪ್ರಾಂಶುಪಾಲರು ಉದ್ಯೋಗ ನಿಮಿತ್ತ ಎಲ್ಲರೂ ಕೃಷಿ ಚಟುವಟಿಕೆಯನ್ನು ಮರೆತಿದ್ದಾರೆ. ಕಾರ್ಯಕ್ರಮದಿಂದ ಅದನ್ನು ಪುನರ್ ನೆನಪಿಸುವಂತೆ ಆಗಿದೆ. ನಾವು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳು ಕೂಡಾ ತೊಡಗುತ್ತಾರೆ. ಈ ಮೂಲಕ ಕೃಷಿ ಕ್ರಾಂತಿ ಆಗಬೇಕು ಅನ್ನುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿದೆ.
ಯೂಸುಫ್
ಪ್ರಾಚಾರ್ಯರ ಸಂಘದ
ಕಾರ್ಯದರ್ಶಿ

ಜಿಲ್ಲೆಯಲ್ಲಿ ಬೇಸಾಯ ಕೂಲಿ ಕಾರ್ಮಿಕರ ಕೊರತೆಯಿಂದ ಕುಂಠಿತವಾಗಿದೆ. ಅನ್ನಕ್ಕೂ ತಾತ್ವಾರ ಉಂಟಾಗಿರುವುದರಿಂದ ಬೇರೆ ಕಡೆಯಿಂದ ಅಕ್ಕಿಯನ್ನು ತರಿಸಲಾಗುತ್ತಿದೆ. ಈ ನಡುವೆ ಬರಡಾಗಿರುವ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸುವ ಮೂಲಕ ಜಿಲ್ಲೆಯ ಕೃಷಿಕರಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಿದೆ. ಎಲ್ಲಾ ಸಂಘ ಸಂಸ್ಥೆಗಳು ಇಂತಹ ಕಾರ್ಯದಲ್ಲಿ ಕೈಜೋಡಿಸಿದಲ್ಲಿ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೃಷಿ ಪ್ರಧಾನವನ್ನಾಗಿ ರೂಪಿಸಬಹುದು.
ವಿನ್ಸೆಂಟ್ ಮಸ್ಕರೇನಸ್
ಭೌತಶಾಸ್ತ್ರ ಉಪನ್ಯಾಸಕರು
ಸರಕಾರಿ ಪದವಿಪೂರ್ವ ಕಾಲೇಜು
ಕೊಂಬೆಟ್ಟು ಪುತ್ತೂರು

ಮಕ್ಕಳು ಮುಂಣದೆ ಬರಬೇಕು ಅನ್ನುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಭತ್ತ ಬೆಳೆಯಲು ಎಷ್ಟು ಕಷ್ಟವಿದೆ ಅನ್ನುವುದು ಗೊತ್ತಾಗಿದೆ. ಅನ್ನ ಬಿಸಾಡುವ ಮೊದಲು ಆಲೋಚಿಸಬೇಕಿದೆ. ಜಿಲ್ಲೆಯ ಜನರಿಗೆ ಭತ್ತ ಇಲ್ಲಿಂದಲೇ ಸಿಗುವಂತಹ ಕೃಷಿ ಕ್ರಾಂತಿ ಆಗಲಿ.
ಶರ್ಮಿಳಾ ರಾವ್
ಪ್ರಾಂಶುಪಾಲರು
ಪಾಂಡ್ಯರಾಜ್ ಬಲ್ಲಾಳ್ ಪದವಿಪೂರ್ವ ಕಾಲೇಜು

Exit mobile version