UN NETWORKS
ಹರೇಕಳ: ಶೈಕ್ಷಣಿಕ ಜೀವನದಲ್ಲೇ ಹಾಕುವ ಪರಿಶ್ರಮ ದೊಡ್ಡ ಮಟ್ಟದ ಸಾಧನೆ ಮಾಡುವ ಮೂಲಕ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.
ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಕನ್ನಡ ಶಾಲೆಗಳ ಮೇಲೆ ಕೀಳರಿಮೆ ಅನಗತ್ಯ, ಆಂಗ್ಲ ಮಾಧ್ಯಮಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಯಲ್ಲಿ ಕಲಿತವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಗ್ರಾಮೀಣ ಭಾಗದಿಂದ ವಾಹನದಲ್ಲಿ ದೂರದ ಆಂಗ್ಲಮಾಧ್ಯಮ ಶಾಲೆಗೆ ಹೋಗುವವರ ಬಗ್ಗೆ ಚಿಂತಿಸದೆ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕಿಂತ ಬೇರೆ ಉಡುಗೊರೆ ಬೇಕಿಲ್ಲ ಎಂದು ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿ, ಒಂದು ಸಮಯದಲ್ಲಿ ಅಮೆರಿಕಾದ ಮಕ್ಕಳು ಊಟ ಮಾಡದಿದ್ದರೆ ಭಾರತದ ಹಸಿದ ಮಕ್ಕಳು ನಿನ್ನನ್ನು ಎತ್ತಿಕೊಂಡು ಹೋಗ್ತವೆ ಎಂದು ಅಲ್ಲಿನ ತಾಯಂದಿರು ಹೇಳುತ್ತಿದ್ದರು. ಆದರೆ ಇಂದು ತನ್ನ ಮಕ್ಕಳು ಹೆಚ್ಚು ಕಲಿಯದಿದ್ದರೆ ಭಾರತದ ಬುದ್ಧಿವಂತ ಮಕ್ಕಳು ನಿನ್ನ ಕೆಲಸವನ್ನೇ ಎತ್ತಿಕೊಂಡು ಹೋಗ್ತವೆ ಎನ್ನುವಂತಾಗಿದೆ. ಇದು ಭಾರತದ ಬೆಳವಣಿಗೆ ತೋರಿಸುತ್ತದೆ ಎಂದು ಹೇಳಿದರು.ರಾಜ್ಯ ವಾಹನ ಮಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಶೇಖ, ಬೆಳ್ಮ ಗ್ರಾಮ ಪಂಚಾಯಿತಿ ಸದಸ್ಯ ಹಸೈನಾರ್ ಮುಖ್ಯ ಅತಿಥಿಗಳಾಗಿದ್ದರು. ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಪ್ರಹ್ಲಾದ್ ರೈ ಮುದಲೇಮಾರು, ಕಡೆಂಜ ಜನಜೀವನ್ ಶೆಟ್ಟಿ, ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎವುಜಿನ್ ರೋಜ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಐಡ ಅಂದ್ರಾದೆ, ಪ್ರಾಥಮಿಕ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನೌಫಲ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಪಿ.ಜಯರಾಮ ಆಳ್ವ ಪೋಡಾರ್ ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ವರದಿ ವಾಚಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ ದೆಬ್ಬೇಲಿ ಅತಿಥಿ ಪರಿಚಯ ನೀಡಿದರು. ಶಿಕ್ಷಕಿ ಲಕ್ಷ್ಮೀ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
`ನಮ್ಮಲ್ಲಿರುವ ಶಕ್ತಿ ಬಗ್ಗೆ ನಮಗೆ ಅರಿವಾಗಬೇಕಾದರೆ ಇನ್ನೊಬ್ಬರು ಮುಂದಕ್ಕೆ ದೂಡಬೇಕಾಗುತ್ತದೆ, ಆದರೆ ಇಂದು ಅಂತಹವರು ಯಾರೂ ಇಲ್ಲದ ಕಾರಣ ನಮ್ಮ ಅಭಿವೃದ್ಧಿಗೆ ನಾವೇ ಪ್ರಯತ್ನ ನಡೆಸಬೇಕು’
ಡಾ.ಎಂ.ಎಸ್.ಮೂಡಿತ್ತಾಯ, ನಿಟ್ಟೆ ವಿವಿ ಉಪಕುಲಪತಿ