Site icon Ullalavani

ಉಳ್ಳಾಲ ಬೀಚಿನಲ್ಲಿ ಮಾರಾಮಾರಿ: ಮೂವರು ಆಸ್ಪತ್ರೆಗೆ ದಾಖಲು

ಉಳ್ಳಾಲ ನ್ಯೂಸ್ ಡೆಸ್ಕ್
ಉಳ್ಳಾಲ: ಸಮುದ್ರಕ್ಕೆ ಇಳಿದ ಇಬ್ಬರನ್ನು ತಡೆದ ಹಿನ್ನೆಲೆಯಲ್ಲಿ ಇತ್ತಂಡಗಳ ನಡುವೆ ವಾಗ್ವಾದ ಸಂಭವಿಸಿ ಹೊಡೆದಾಟ ನಡೆದು, ಉಳ್ಳಾಲ ಪೊಲೀಸರು ಲಘು ಲಾಠಿ ಚಾಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದ ಘಟನೆ ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ನಡೆದಿದೆ.


ದೇರಳಕಟ್ಟೆ ನಿವಾಸಿಗಳಾದ ಅಲ್ಫಾಝ್, ನೌಷಾದ್ , ಸಿನಾನ್ ಸಹಿತ ಐವರ ತಂಡ ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದರು. ಅಲ್ಲಿ ಭಾನುವಾರ ಸಂಜೆಯ ಸಮಯವಾಗಿದ್ದರಿಂದಾಗಿ ಹೆಚ್ಚಿನ ಜನರು ಸೇರಿದ್ದರು. ಇದೇ ವೇಳೆ ಸ್ಥಳದಲ್ಲಿ ಆಟವಾಡುತ್ತಿದ್ದ ಗುಂಪೊಂದರ ಚೆಂಡು ಸಮುದ್ರಕ್ಕೆ ಬಿದ್ದಿತ್ತು. ಅದನ್ನು ನೋಡಿದ ಅಲ್ಫಾಝ್ ಜತೆಗಿದ್ದ ಇಬ್ಬರು ಚೆಂಡು ತರಲು ಸಮುದ್ರದ ನೀರಿಗೆ ಇಳಿದಿದ್ದರು. ಇದನ್ನು ಆಕ್ಷೇಪಿಸಿದ ಸ್ಥಳದಲ್ಲಿದ್ದ ತಂಡ ಸಮುದ್ರ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದರು. ಇದೇ ವಿಚಾರದಲ್ಲಿ ಇತ್ತಂಡಗಳ ಮಧ್ಯೆ ವಾಗ್ವಾದ ನಡೆಯಿತು. ಇದರಿಂದ ಇನ್ನಷ್ಟು ಜನರು ಸ್ಥಳದಲ್ಲಿ ಜಮಾಯಿಸಿದ್ದು, ಇತ್ತಂಡಗಳ ನಡುವೆ ಹೊಡೆದಾಟ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರಿಗೆ ಹೊಡೆದಾಟವನ್ನು ತಡೆಯಲು ಅಸಾಧ್ಯವಾಯಿತು. ಮತ್ತೆ ಉಳ್ಳಾಲ ಠಾಣೆಯಿಂದ ಆಗಮಿಸಿದ ಹೆಚ್ಚುವರಿ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಪೂರ್ವದೇಷ: ಶನಿವಾರ ರಾತ್ರಿ ವೇಳೆ ಮುಕ್ಕಚ್ಚೇರಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಸ್ಲಿಂ ಯುವತಿಯರಿಗೆ ಮೊಗವೀರಪಟ್ನ ನಿವಾಸಿಯ ರಿಕ್ಷಾ ತಾಗಿತ್ತು. ಇದರಿಂದ ಯುವತಿಯರು ಗಾಯಗೊಂಡಿದ್ದರು. ಇದರಿಂದ ರೊಚ್ಚಿಗೆದ್ದ ಮುಕ್ಕಚ್ಚೇರಿ ನಿವಾಸಿಗಳು ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲೂ ದೂರು ದಾಖಲಾಗಿತ್ತು. ಇದೇ ವಿಚಾರದ ಪೂರ್ವದ್ವೇಷದಿಂದ ತಂಡ ಹಲ್ಲೆ ನಡೆಸಿರುವ ಶಂಕೆಯನ್ನು ಗಾಯಾಳುಗಳ ಕಡೆಯ ವ್ಯಕ್ತಿಯೋರ್ವರು ತಿಳಿಸಿದ್ದಾರೆ.
ಜೀವರಕ್ಷಕರಿಗೆ ಕೆಟ್ಟ ಹೆಸರು : ಉಳ್ಳಾಲ ಬೀಚ್‌ನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಹೊಡೆದವರು ಜೀವರಕ್ಷಕ ಈಜುಗಾರರು ಎಂಬ ಸುದ್ಧಿ ಹರಡಿತ್ತು. ಆದರೆ ಜೀವರಕ್ಷಕರಾಗಿ ಅನೇಕ ಪ್ರಾಣಗಳನ್ನು ಉಳಿಸಿರುವ ಸ್ಥಳೀಯರು ಈ ಹೊಡೆದಾಟದಲ್ಲಿ ಭಾಗವಹಿಸಿಲ್ಲ ಎಂದಿರುವ ಜೀವರಕ್ಷಕ ಈಜುಗಾರರ ಸಂಘದ ಹಿರಿಯರಲ್ಲಿ ಓರ್ವರಾದ ಪ್ರವೀಣ್ ಉಳ್ಳಾಲ ಭಾನುವಾರ ಸಾವಿರಕ್ಕೂ ಹೆಚ್ಚು ಜನರು ಬೀಚ್‌ಗೆ ಆಗಮಿಸಿದ್ದು, ಹೊಡೆದಾಟ ನಡೆದ ಸ್ಥಳದಲ್ಲಿ ನಮ್ಮ ಸದಸ್ಯರು ಇರಲಿಲ್ಲ. ಬೇರೆ ಬೇರೆ ಕಡೆಯಿಂದ ಈ ಪ್ರದೇಶಕ್ಕೆ ಬರುತ್ತಾರೆ, ಭಾನುವಾರದಂದು ಇಲ್ಲಿ ಹೆಚ್ಚು ಪೊಲೀಸ್ ಭದ್ರತೆ ಅಗತ್ಯ ಎಂದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version