Site icon Ullalavani

ಅನುದಾನದಲ್ಲಿ ತಾರತಮ್ಯ ಟೆಂಡರ್ ಕರೆಯುತ್ತಿಲ್ಲ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನದಲ್ಲಿ ತಾರತಮ್ಯ, ಟೆಂಡರ್ ಕರೆಯದೆ ಒಪ್ಪಂದ ಮತ್ತು ಸಿಆರ್ ಝೆಡ್ ಗೆ ಒಳಪಡುವ ಮನೆಗಳಿಗೆ ಡೋರ್ ನಂಬರ್ ನೀಡದೇ ಇರುವ ಕುರಿತು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರುಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

ಪ್ರತಿಪಕ್ಷ ನಾಯಕಿ ಮಹಾಲಕ್ಷ್ಮೀ ಮಾತನಾಡಿ ಉಳ್ಳಾಲ ನಗರಸಭೆಯಾದ್ಯಂತ ನಡೆದಿರುವ ಕಾಮಗಾರಿಗಳ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆದಿದೆ.ಆಡಳಿತದಲ್ಲಿರುವವರ ಕಡೆ ಹೆಚ್ಚಿನ ಒಲವು ತೋರಿಸಿ ಕಾಮಗಾರಿ ನಡೆದಿರುವುದು ಖಂಡನೀಯ ಎಂದು ಆರೋಪಿಸಿದ ಅವರಿಗೆ ಸದಸ್ಯರಾದ ಶಶಿಕಲಾ, ಪೊಡಿಮೋನು, ಹನೀಫ್ ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ದಿನೇಶ್ ರೈ, ಫಾರುಕ್ ಉಳ್ಳಾಲ್, ಬಾಝಿಲ್ ಡಿಸೋಜಾ ಅವರು ಉರೂಸಿನಿಂದಾಗಿ ಹಲವೆಡೆ ನಡೆಯಬೇಕಾದ ಕಾಮಗಾರಿ ವಿಳಂಬವಾಗಿದೆ.

ಎಲ್ಲಾ ಕಡೆ ಸಮಾನವಾಗಿ ಅನುದಾನವನ್ನು ನಗರಸಭೆ ಅಧಿಕೃತರು ಹಂಚಿದ್ದಾರೆ. ಅದರಲ್ಲಿ ರಾಜಕೀಯ ಮಾಡಿ, ಅಭಿವೃದ್ಧಿಯನ್ನು ಕುಂಠಿತಗೊಳಿಸಬಾರದು ಎಂದರು. ಇದಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಗಿರಿಜಾ ಬಾ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ ಅವರೂ ದನಿಗೂಡಿಸಿ ಏಕರೂಪದಲ್ಲಿ ಜನರಿಗೆ ಬೇಕಾದಂತಹ ರೀತಿಯಲ್ಲಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂದೆ ಅದೇ ರೀತಿ ಮುಂದುವರಿಸಲಿದ್ದೇವೆ ಎಂದರು.

ಸರಕಾರದ ಆದೇಶ ಎಂದು ಪರಿಗಣಿಸಿ :

ನಗರಸಭೆಯಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಣಯಗಳನ್ನು ಸಚಿವರ ಆದೇಶ ಎಂದು ಪರಿಗಣಿಸಬಾರದು. ಅದು ಸರಕಾರದ ಆದೇಶವಾಗಿದೆ. ಸಚಿವರ ಆದೇಶ ಎಂದು ಹೇಳಿ ತೆಗೆದುಕೊಂಡಿರುವ ನಿರ್ಣಯಗಳು ಮರುದಿನ ಬದಲಾಗುತ್ತದೆ. ಸಚಿವರು ಅಥವಾ ಶಾಸಕರು ನಗರಸಭೆಗಳಲ್ಲಿ ಸದಸ್ಯರೇ ಆಗಿರುತ್ತಾರೆ ಎಂದು ಫಾರುಕ್ .ಯು.ಹೆಚ್. ಹೇಳಿದರು. ಅದಕ್ಕೆ ಆಕ್ಷೇಪಿಸಿದ ಫಾರುಕ್ ಉಳ್ಳಾಲ ಅವರು ಸರಕಾರದ ಆದೇಶ ಹೌದು, ಆದರೆ ಅದನ್ನು ಕಾರ್ಯ ರೂಪಕ್ಕೆ ತರಲು ಸಚಿವರೇ ಪ್ರಯತ್ನದಿಂದ ಮಾತ್ರ ಸಾಧ್ಯ. ಅಲ್ಲದೇ ಸದಸ್ಯರಿಗೆ ನಿರ್ದೇಶನ ನೀಡುವವರು ಅವರೇ ಆಗಿದ್ದಾರೆ ಎಂದರು.

ಊಟದ ಬಿಲ್ ಪಾವತಿಸಬಾರದು :

ಇತ್ತೀಚೆಗೆ ನಗರಸಭೆ ಅಧ್ಯಕ್ಷರ ವಾರ್ಡಿನಲ್ಲಿ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಸಾರ್ವಜನಿಕರಿಗೆ ನೀಡಲಾದ ಊಟದ ವ್ಯವಸ್ಥೆಯ ರೂ.೨೮,೦೦೦ ದಷ್ಟು ಬಿಲ್ ಅನ್ನು ನಗರಸಭೆಯಿಂದ ಪಾವತಿಸಬೇಕು ಅನ್ನುವ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಇಂತಹ ಊಟದ ವ್ಯವಸ್ಥೆಗಳಿಗೆ ನಗರಸಭೆಯಿಂದ ಬಿಲ್ ಪಾವತಿಸಬಾರದು ಎಂಬ ಒಕ್ಕೊರಲ ಒತ್ತಾಯ ವ್ಯಕ್ತವಾಯಿತು.

ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ: ಉಳ್ಳಾಲ ನಗರಸಭೆ ಕಟ್ಟಡದ ಕಾಮಗಾರಿ ಮತ್ತು ಪೈಂಟಿಂಗ್ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರ ಒಟ್ಟು ಬಿಲ್ ರೂ.೨ ಲಕ್ಷ ಆಗಿದೆ. ಆದರೆ ಕಾಮಗಾರಿ ಸರಿಯಾಗಿಲ್ಲ ಎಂದು ಆರೋಪಿಸಿ ಅವರ ಬಿಲ್ ಅನ್ನು ರೂ. ೧,೫೦೦೦ಕ್ಕೆ ಕಡಿತಗೊಳಿಸಲಾಗಿದೆ. ಇದರಿಂದ ತಮ್ಮ ಅಸಲು ಹಣ ಬಾರದೇ ಇದ್ದಲ್ಲಿ ಆತ್ಮಹತ್ಯೆ ನಡೆಸುವ ಬೆದರಿಕೆಯನ್ನು ಗುತ್ತಿಗೆದಾರರು ಹಾಕಿದ್ದಾರೆ. ಈ ಬಗ್ಗೆ ಅಧ್ಯಕ್ಷರು ಗಮನಹರಿಸಬೇಕು ಎಂಬ ಒತ್ತಾಯ ಸದಸ್ಯರಿಂದ ಕೇಳಿಬಂತು.

ಟೆಂಡರ್ ಕರೆಯುವುದಿಲ್ಲ:

ಟೆಂಡರ್ ಕರೆಯದೆ ತಮ್ಮೊಳಗಿನ ಒಪ್ಪಂದದಲ್ಲಿ ನಗರಸಭೆ ಕಾಮಗಾರಿಯನ್ನು ವಹಿಸಲಾಗುತ್ತಿದೆ. ಇದು ಕಾನೂನು ವಿರುದ್ಧವಾಗಿದೆ. ಕಸ ವಿಲೇವಾರಿ ಗುತ್ತಿಗೆಯನ್ನು ನೀಡಿದಂತಹ ವ್ಯಕ್ತಿ ಈವರೆಗೆ ಉಳ್ಳಾಲಕ್ಕೆ ಬಂದಿಲ್ಲ. ಸರಿಯಾದ ವಿಲೇವಾರಿ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಇಂತಹವರಿಗೆ ಟೆಂಡರ್ ಕರೆಯದೆ ಗುತ್ತಿಗೆ ವಹಿಸಿರುವುದು ಕಾನೂನು ವಿರುದ್ಧವಾಗಿದೆ. ಸಿಆರ್ ಝೆಡ್ಗೆ ಒಳಪಡುವ ಪ್ರದೇಶಗಳಲ್ಲಿ ಬಡ ಮನೆಮಂದಿಗೆ ಮಾತ್ರ ಡೋರ್ ನಂಬರನ್ನು ನೀಡಲಾಗುತ್ತಿಲ್ಲ. ಫ್ಯಾಕ್ಟರಿ ಮೊದಲಾದ ಬಂಡವಾಳಶಾಹಿಗಳಿಗೆ ಬೃಹತ್ ಕಟ್ಟಡ ನಿರ್ಮಿಸಲು ಅನುಮತಿ ನೀಡುವುದು ಕಾನೂನು ಬಾಹಿರ.

ಸಿಆರ್ಝೆಡ್ ಅನುಮತಿಗೆ ಜಿಲ್ಲಾಧಿಕಾರಿಗಳನ್ನೇ ಅವಲಂಬಿಸದೆ, ನಗರಸಭೆಯೂ ನಿರ್ಣಯ ಕೈಗೊಳ್ಳುವಂತಿರಬೇಕು. ಕಾನೂನು ಬಾಹಿರ ಚಟುವಟಿಕೆ ಮತ್ತು ಅನುದಾನ ವಿತರಣೆಯಲ್ಲಿ ತಾರತಮ್ಯ ವಹಿಸಿರುವುದರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡುವ ಎಚ್ಚರಿಕೆಯನ್ನು ಪ್ರತಿಪಕ್ಷದ ಪೊಡಿಮೋನು ನೀಡಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ ಭಾಗವಹಿಸಿದ್ದರು.

Exit mobile version