Site icon Ullalavani

ಕೊಣಾಜೆ : ಜೆಸಿಐನಿಂದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ

UN NETWORKS

ಕೊಣಾಜೆ: ಮಂಗಳಗಂಗೋತ್ರಿ ಜ್ಯೂನಿಯರ್ ಚೇಂಬರ್ ಇಂಟರ್‍ನ್ಯಾಷನಲ್ ಕೊಣಾಜೆ ಘಟಕ `ಮಂಗಳೂರು ಹಿರಿಯ ನಾಗರಿಕರ ಸಂಘ , ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಜಂಟಿ ಸಹಭಾಗಿತ್ವದಲ್ಲಿ `ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೋಂದಾವಣಿ ಹಾಗೂ ವಿತರಣೆ’ ಕಾರ್ಯಕ್ರಮ ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಉದ್ಯಮಿ ಸೀತಾ ಆರ್. ಪಾವಸ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ `ಹಿರಿಯ ನಾಗರಿಕರನ್ನು ಗುರುತಿಸುವ ಹಾಗೂ ಅವರಿಗೆ ಪ್ರಯೋಜನಗಳನ್ನು ತಲುಪಿಸುವ ಕಾರ್ಯಕ್ರಮ ಯಶಸ್ವಿಯಾಗಲಿ. ಇಂತಹ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೇಸಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಂಸ್ಥೆಗಳ ಕರ್ಯ ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ ಜೆಸಿಐ ಮಂಗಳಗಂಗೋತ್ರಿ ಘಟಕದ ಅಧ್ಯಕ್ಷ ಡಾ. ಪ್ರಶಾಂತ ನಾಯ್ಕ ಮಾತನಾಡಿ `ಹಿರಿಯ ನಾಗರಿಕರು ಸಮಾಜದ ಅತ್ಯಮೂಲ್ಯವಾದ ಆಸ್ತಿ. ಅವರ ಜೀವನಾನುಭವಗಳು ಕಿರಿಯರ ಉಜ್ವಲ ಭವಿಷ್ಯಕ್ಕೆ ದಾರಿದೀಪ. ಹಿರಿಯ ನಾಗರಿಕರಿಗಾಗಿ ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳಿಂದ ಹಲವು ವಿಶೇಷ ಯೋಜನೆಗಳು ಮತ್ತು ಸವಲತ್ತುಗಳು ಇವೆ. ಮಾಹಿತಿ ಕೊರತೆಯಿಂದಾಗಿ ಆ ಪ್ರಯೋಜನಗಳು ಅನೇಕ ಜನರಿಗೆ ತಲಪುವುದಿಲ್ಲಎಂದು ನುಡಿದರು.

ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೋಂದಾವಣೆ ಹಾಗೂ ವಿತರಣೆ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಿ ಪ್ರಾಯೋಜಿತ ಉಳಿತಾಯ ಯೋಜನೆ, ಸಾರಿಗೆ, ಆರೋಗ್ಯ, ಕುಟುಂಬ ಕಲ್ಯಾಣ, ದೂರ ಸಂಪರ್ಕ, ರೈಲ್ವೇ ಇಲಾಖೆ, ವಿಮಾನಯಾನ, ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆ ಹೀಗೆ ಹತ್ತು ಹಲವು ಪ್ರಯೋಜನೆಗಳನ್ನು ಪಡೆಯಲು ಅನುಕೂಲವಾಗುವಂತಹ ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತಹ ಕಾರ್ಯವಾಗಬೇಕು. ಆ ಹಿನ್ನೆಲೆಯಲ್ಲಿ ಜೇಸಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಎಂದು ನುಡಿದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಹಿರಿಯ ನಾಗರಿಕರಿಗಾಗಿ ಹಲವು ಸರಕಾರಿ ಪ್ರಾಯೋಜಿತ ಯೋಜನೆಗಳ ಪ್ರಯೋಜನ ಪಡೆಯಲು ಸಹಾಯಕವಾಗುವ ಇಂತಹ ಅಮೂಲ್ಯವಾದ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘಿಸಿ ದೇಶದ ಏಳಿಗೆಗೆ ಹಿರಿಯ ನಾಗರಿಕರ ಕೊಡುಗೆ ಅನನ್ಯವಾದದ್ದು, ಅವರನ್ನು ಗುರುತಿಸುವುದು ಮತ್ತು ಗೌರವಿಸುವುದು ಸ್ವಸ್ಥ ಸಮಾಜದಲ್ಲಿ ಯುವಜನತೆಯ ಪಾತ್ರ ಬಹು ಮುಖ್ಯವಾದದ್ದು’ ಎಂದು ನುಡಿದರು.

ಸ್ಥಾಪಕ ಅಧ್ಯಕ್ಷ ಜೇಸಿ ತ್ಯಾಗಂ ಹರೇಕಳ, ಗೌರವ ಅಧ್ಯಕ್ಷ ಆನಂದ ಅಸೈಗೋಳಿ ಹಾಗೂ ಹರೀಶ್ ಪೂಜಾರಿ ಉಪಸ್ಥಿತರಿದ್ದರು. ಜೇಸಿ ಮಂಗಳಗಂಗೋತ್ರಿ ಘಟಕದ ನಿಕಟಪೂರ್ವ ಅಧ್ಯಕ್ಷ ಜೇಸಿ ಬಾದ್‍ಷಾ ಸಂಬಾರತೋಟ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಯೋಜನಾ ನಿರ್ದೇಶಕ ರತ್ನಕುಮಾರ್ ಜೇಸಿ ವಾಣಿಯನ್ನು ವಾಚಿಸಿದರು. ಕಾರ್ಯದರ್ಶಿ ಕಮಲಾಕ್ಷ ಡಿ. ಶೆಟ್ಟಿಗಾರ್ ವಂದಿಸಿದರು. ಜೊತೆ ಕಾರ್ಯದರ್ಶಿ ಹಾಗೂ ಸಂಯೋಜಕಿ ಗೀತಾ ಸಾಲ್ದಾನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಸುಮಾರು 120 ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.

Exit mobile version