UN NETWORKS
ಮಂಗಳೂರು : ಅನುದಾನಿತ ಶಾಲಾ ಶಿಕ್ಷಕರ ವಿಧ್ಯಾರ್ಥಿಗಳ ಹಾಗೂ ಶಾಲೆಗಳಿಗೆ ಸಂಬಂಧಿಸಿರುವ ತಾರತಮ್ಯಗಳ ಬಗ್ಗೆ ವಿಧಾನ ಸಭೆಯ ಬೆಳಗಾವಿ ಅಧಿವೇಶನದ ಮೊದಲು ಸಮಾಧಾನಕರ ಘೋಷಣೆಯಾಗದಿದ್ದರೆ ರಾಜ್ಯದ ಎಲ್ಲಾ ಅನುದಾನಿತ ಶಾಲೆಗಳನ್ನು ಮುಚ್ಚಿ ಅನುದಾನಿತ ಶಿಕ್ಷಕರು ಬೆಳಗಾವಿ ಛಲೋ ನಡೆಸಿ ಅಧಿವೇಶನದ ಸಮಯದಲ್ಲಿ ಸಾಮೂಹಿಕ ಮುಷ್ಕರ ಹೂಡಲಾಗುವುದು ಎಂಬ ತೀರ್ಮಾನವನ್ನು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ| ಕೆ.ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕಾಲ್ಪನಿಕ ವೇತನ , ಎನ್‍ಪಿಎಸ್, ಮಕ್ಕಳಿಗೆ ಕರ್ನಾಟಕ ದರ್ಶನ, ಸಮವಸ್ತ್ರ, ಶೂ ಭಾಗ್ಯ, ಕನ್ನಡ ಮುಂಭಡ್ತಿ, ಜ್ಯೋತಿ ಸಂಜೀವಿನಿ, ಖಾಲಿಹುದ್ದೆಗಳ ಭರ್ತಿ, ಮುಖ್ಯೋಪಾಧ್ಯಾಯರಿಗೆ, 20, 25, 30 ವರ್ಷಗಳ ಭಡ್ತಿ, ಶಾಲಾನುದಾನದ ಮುಂದುವರಿಕೆ, ಹೆಚ್ಚುವರಿ ಶಿಕ್ಷಕರನ್ನು ಅನುದಾನಿತ ಶಾಲೆಗೆ ಮೊದಲ ಆದ್ಯತೆಯಲ್ಲಿ ನೇಮಿಸುವುದು ನಂತರ ಹುದ್ದೆ ಸಮೇತ ಸರಕಾರಿ ಶಾಲೆಗಳಿಗೆ ನೇಮಕ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ರಾಜಗೋಪಾಲ್ , ಉಪಾಧ್ಯಕ್ಷ ಮುತ್ತಯ್ಯ ಹೂಗಾರ್ ಮೊದಲಾದವರು ಉಪಸ್ಥಿತರಿದ್ದರು.