UN NETWORKS
ದೇರಳಕಟ್ಟೆ: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಹಾಯ ಮಾಡುವುದಕ್ಕಿಂತಲೂ ಅವರನ್ನು ಸಾಮಾನ್ಯರಂತೆ ಸಮಾಜದಲ್ಲಿ ತೊಡಗೊಸಿಕೊಳ್ಳುವುದರಿಂದ ಅವರಿಗೆ ಎಲ್ಲರಂತೆ ಸುಂದರವಾದ ಒಂದು ಬದುಕು ಕಲ್ಪಿಸಿಕೊಡಲು ಸಾಧ್ಯವಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್. ವಿಶಾಲ್ ಹೆಗ್ಡೆ ಹೇಳಿದರು.
ಸರಕಾರಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತಾಗಿ ವಿಶೇಷ ಕಾಳಜಿ ವಹಿಸಿದೆ. ಇರುವ ಸಂಪನ್ಮೂಲದಲ್ಲಿ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತಾಗಿ ಪೋಷಕರಿಗೆ ತಿಳುವಳಿಕೆ ಮೂಡಿಸುವ ದೃಷ್ಟಿಯಿಂದ ಈ ದಿನ ಅವರಿಗೆ ವಿಶೇಷವಾಗಿರಲಿದೆ ಎಂದು ಹೇಳಿದರು.ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಕೆ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ವಿಶ್ವ ಸಂಸ್ಥೆಯ ಈ ಸಾಲಿನ ಆಶಯದಂತೆ ವಿಶೇಷ ಅಗತ್ಯವುಳ್ಳ ಮಕ್ಕಳ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದ್ದು ಅದರಂತೆ ಅವರಿಗೆ ಎದುರಾಗುವ ಕೀಳರಿಮೆ ಹೋಗಲಾಡಿಸಲು ಅವರನ್ನು ವಿಕಲಚೇತನರು, ವಿಶೇಷ ಚೇತನರು ಎನ್ನುವುದಕ್ಕಿಂತ ದಿವ್ಯಾಂಗಿಗಳು ಎಂದು ಉಲ್ಲೇಖಿಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ ಎಂದರು.
ದಿವ್ಯಾಂಗಿಗಳ ಬದುಕು ಕೇವಲ ಮಾಸಾಶನಕ್ಕೆ ಸೀಮಿತವಾಗಬಾರದು. ಅವರಿಗೆ ಅರ್ಹವಾಗಿ ಸಿಗಬೇಕಾದ ಇತರ ಸೌಲಭ್ಯಗಳು ದೊರಕುವಂತಾಗಬೇಕು. ಆ ಮೂಲಕ ಅವರ ಜೀವನ ಉಜ್ವಲಗೊಳಿಸಲು ಸಾಧ್ಯ ಎಂದು ನುಡಿದರು. ಬಹಳಷ್ಟು ಮಕ್ಕಳಿಗೆ ಕಿವಿ ಕೇಳದಿರುವುದರಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಹಲವು ಪೋಷಕರಿಗೆ ತಿಳಿದಿಲ್ಲ. ಎರಡೂವರೆ ವರ್ಷದಲ್ಲಿ ಮಗು ಮಾತನಾಡಲು ಆರಂಭಿಸುವುದು. ಮಾತನಾಡುತ್ತಿಲ್ಲ ಎಂದು ದೇವರ ಮೊರೆ ಹೋಗುವುದು, ನಾಲಗೆಗೆ ಏನಾದರೂ ಮುಟ್ಟಿಸುವುದಕ್ಕಿಂತ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದು ಚಿಕಿತ್ಸೆಗೆ ಮುಂದಾಗುವುದು ಸೂಕ್ತ ಎಂದು ನುಡಿದರು.
ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಡೀನ್ ಪ್ರೊ. ಡಾ.ಯು.ಎಸ್. ಕೃಷ್ಣ ನಾಯಕ್, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹೀರೇಮಠ, ಮಕ್ಕಳ ದಂತ ವಿಭಾಗ ಮುಖ್ಯಸ್ಥೆ ಡಾ. ಅಮಿತಾ ಹೆಗ್ಡೆ, ಡಾ. ಅಮರಶ್ರೀ, ಕ್ಷೇಮ ವೈಸ್ ಡೀನ್ ಡಾ. ಅಮೃತ ಮಿರಾಜ್ಕರ್ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಕೆ.ಎಂ. ಕೆ. ಮಂಜನಾಡಿ, ಸಮನ್ವಯ ಅಧಿಕಾರಿ ಡಾ. ಪ್ರಶಾಂತ್ ಕೆ.ಎಸ್. ಸ್ವಾಗತಿಸಿದರು.