UN NETWORKS
ಕೊಣಾಜೆ: ಲೈಂಗಿಕ ಅಲ್ಪಸಂಖ್ಯಾತರಿಗೂ ಸಮಾಜದಲ್ಲಿ ಸಮಾನ ಗೌರವ, ಶಿಕ್ಷಣ, ಮೀಸಲಾತಿಗಳು, ಸೌಲಭ್ಯಗಳು ದೊರೆಯಬೇಕಿದೆ. ಅವರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಕರ್ನಾಟಕ ರಾಜೋತ್ಸವ ಪುರಸ್ಕೃತೆ ಹಾಗೂ ಖ್ಯಾತ ಹೋರಾಟಗಾರ್ತಿ ಬೆಂಗಳೂರಿನ ಡಾ.ಅಕ್ಕಯಿ ಪದ್ಮಶಾಲಿ ಅವರು ಹೇಳಿದರು.
ಮುಖ್ಯವಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ, ಕೌಶಲ ತರಬೇತಿ, ಉದ್ಯೋಗ ಮೀಸಲಾತಿ ನೀಡುವಂತಹ ಪ್ರಯತ್ನಗಳು ಇನ್ನಾದರೂ ನಡೆದರೆ ಲೈಂಗಿಕ ಅಲ್ಪಸಂಖ್ಯಾತರು ಬೀದಿ ಬದಿಯಲ್ಲಿ ಬಿಕ್ಷೆ ಬೇಡುವ ಬದಲು ತಮ್ಮ ಸ್ವಂತ ಶಕ್ತಿಯಿಂದಲೇ ಮೇಲೆ ಸದೃಡ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಸ್ತತ ಕಾಲಘಟ್ಟದಲ್ಲಿ ಸರಕಾರ, ವಿಶ್ವವಿದ್ಯಾನಿಲಯಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಮೀಸಲಾತಿ ಒದಗಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಈಗಾಗಲೇ ಮೀಸಲಾತಿ ಕ್ರಮವನ್ನು ಅನುಸರಿಸುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಸಹಕಾರದೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ.ಅವರು, ಇಂದಿನ 21 ಶತಮಾನದಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರು ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇವರ ಮೇಲಾಗುತ್ತಿರು ದೌರ್ಜನ್ಯಗಳನ್ನು ತಡೆಗಟ್ಟಬೇಕಾದರೆ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಸಮಾಜ ಅವರನ್ನು ಸ್ವೀಕರಿಸಬೇಕಿದೆ. ಇಂತಹ ಸಮಸ್ಯೆಗಳ ನಡುವೆಯೂ ಕೆಲವೊದೆಡೆ ಲೈಂಗಿಕ ಅಲ್ಪಸಂಖ್ಯಾತರು ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಅನಿತಾ ರವಿಶಂಕರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಜಿದಾ ಬಾನು ಅವರು ಡಾ.ಅಕ್ಕಯಿ ಪದ್ಮಶಾಲಿಯವರನ್ನು ಪರಿಚಯಿಸಿದರು.ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಸ್ವಾಗತಿಸಿದರು. ಕಲಾ ವಿಭಾಗದ ಡೀನ್ ಪ್ರೊ.ಕಿಶೋರಿ ನಾಯಕ್ ವಂದಿಸಿದರು. ಅತಿಥಿ ಉಪನ್ಯಾಸಕಿ ಲಿಝ್ಬೆತ್ ಹಾಗೂ ವಿದ್ಯಾರ್ಥಿ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಡಾ.ಅಕ್ಕಯಿ ಪದ್ಮಶಾಲಿಯವರೊಂದಿಗೆ ವಿವಿ ಪ್ರಾದ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸಂವಾದ ನಡೆಸಿದರು.