Site icon Ullalavani

ಹಿರಿಯ ವಿದ್ಯಾರ್ಥಿಗಳಿಂದ ಸಂಸ್ಥೆಯ ಬೆಳವಣಿಗೆ: ಡಾ.ವಿಕ್ರಮ್ ಶೆಟ್ಟಿ

UN NETWORKS

ಹರೇಕಳ: ಯಾವುದೇ ಒಂದು ಶಿಕ್ಷಣ ಸಂಸ್ಥೆ ಬೆಳವಣಿಗೆ ಕಾಣಬೇಕಾದರೆ ಹಿರಿಯ ವಿದ್ಯಾರ್ಥಿಗಳ ಸಹಕಾರ, ನಿರಂತರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮೂಳೆ ತಜ್ಞ ಡಾ.ವಿಕ್ರಮ್ ಶೆಟ್ಟಿ ಅಭಿಪ್ರಾಯಪಟ್ಟರು.

ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ನಡೆಯುವ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಭಾನುವಾರ ಶಾಲಾ ಮೈದಾನದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಂದು ಶಾಲೆಯಲ್ಲಿ ಕಲಿತು ಯಾವುದೇ ದೇಶದಲ್ಲಿದ್ದರೂ ಊರಿನ ಶಾಲೆ ಬಗ್ಗೆ ವಿಶೇಷ ಅಭಿಮಾನ ಇರುತ್ತದೆ. ಹಿರಿಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದಾಗ ಆಡಳಿತ ಮಂಡಳಿಗೂ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ಡಿ.ಪದ್ಮನಾಭ ಶೆಟ್ಟಿ ದೆಬ್ವೇಲಿ ಗುತ್ತುದೋಟ ಮಾತನಾಡಿ, ಕ್ರೀಡೆ ಎಂಬುದು ತಮಾಷೆಯ ವಿಚಾರವಲ್ಲ, ಯಾವುದೇ ಒಂದು ಆಟದಲ್ಲಿ ಸಕ್ರಿಯವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದರೆ ಉತ್ತಮ ಉದ್ಯೋಗ ತನ್ನಿಂತಾನೇ ಅರಸಿ ಬರುತ್ತದೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ ದೆಬ್ಬೇಲಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಸಂಚಾಲಕ ಪ್ರಹ್ಲಾದ್ ರೈ ಮುದಲೇಮಾರು, ಕ್ರೀಡಾ ಸಂಚಾಲಕ ಮುದಲೇಮಾರು ರೂಪರಾಜ್ ರೈ ಉಪಸ್ಥಿತರಿದ್ದರು.ಶಾಲಾ ಸಂಚಾಲಕ ಜಯರಾಮ ಆಳ್ವ ಮೋಟಾರ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಮೋಹನ್ ದಾಸ್ ಉಳಿದೊಟ್ಟು ವಂದಿಸಿದರು. ರಾಜೇಶ್ ಶೆಟ್ಟಿ ಪಜೀರ್ ಗುತ್ತು ಕಾರ್ಯಕ್ರಮ ನಿರೂಪಿಸಿದರು.

‘ಹಳೆ ವಿದ್ಯಾರ್ಥಿ ಸಂಘ ಆರಂಭಗೊಂಡು ಹತ್ತು ವರ್ಷಗಳಾಗಿವೆ, ಶಾಲೆಯಲ್ಲಿ ಕಲಿತವರು ಕೇವಲ ಕ್ರೀಡೆಯಲ್ಲಿ ಭಾಗವಹಿಸಿದರೆ ಸಾಲದು, ಬೆಂಬಲವೂ ನೀಡಬೇಕಿದೆ’
ಮನೋಜ್ ಕುಮಾರ್ ಹೆಗ್ಡೆ ದೆಬ್ಬೇಲಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ

Exit mobile version