UN NETWORKS
ಉಳ್ಳಾಲ: ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿವಿದ್ಯಾರ್ಥಿ ಕಾಲಘಟ್ಟದಲ್ಲಿಯೇ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಬದುಕಿನ ಪ್ರತಿಕ್ಷಣ ಸಂತಸವಾಗಿರಲು ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು. ಅದನ್ನು ತಲುಪಿದಾಗ ಬದುಕು ಸಾರ್ಥಕವಾಗುತ್ತದೆ. ಹಾಗೆಯೇ ಅದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಿದರೆ ಕೀರ್ತಿ ಸಂಪಾದಿಸಲು ಸಾಧ್ಯ ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಯು. ಟಿ. ಇಫ್ತಿಕರ್ ಅಲಿ ಮಾತನಾಡಿ ಪಾಂಡ್ಯರಾಜ ಕಾಲೇಜಿನಲ್ಲಿಈ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಜ್ಞಾನ ವಿಭಾಗದ ಒಬ್ಬ ವಿದ್ಯಾರ್ಥಿ ಎಂಜಿನಿಯರಿಂಗ್ ಅಥವಾ ಫಿಸಿಯೋಥೆರಪಿ ಶಿಕ್ಷಣ ಪಡೆಯುವುದಾದರೆ ಒಂದು ಸೀಟು ಸಂಪೂರ್ಣ ಉಚಿತವಾಗಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಪಿ.ಬಿ. ಚಾರಿಟೇಬಲ್ ಟ್ರಸ್ಟ್‍ನ ಮೆನೇಜಿಂಗ್ ಟ್ರಸ್ಟಿ ಡಾ. ಪ್ರಿಯಾ ಬಲ್ಲಾಳ್ ಕೆ. ಮಾತನಾಡಿ ನಮ್ಮ ಯಶಸ್ಸು ನಮ್ಮಲ್ಲಿರುವ ಆತ್ಮಸ್ಥೈರ್ಯ, ದೃಢ ನಂಬಿಕೆ ಹಾಗೂ ಜ್ಞಾನವನ್ನು ಅವಲಂಬಿಸಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಕಲಿಯುವ ದಿನಗಳಲ್ಲಿ ಕಠಿಣ ಶ್ರಮವಹಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಹೊರ ಹೋಗುವ ವಿದ್ಯಾರ್ಥಿ ಹಾಗೂ ಪ್ರತಿಭಾನ್ವಿತರನ್ನು ಗೌರವಿಸಲಾಯಿತು. ಫುಟ್ಬಾಲಿನಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾಗಿರುವ ಹಾಗೂ ರಾಷ್ಟ್ರಮಟ್ಟದಲ್ಲಿರಾಜ್ಯವನ್ನು ಪ್ರತಿನಿಧಿಸಿದ, ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸವ್ಯಸಾಚಿ ಪ್ರಶಸ್ತಿ ಸೇರಿದಂತೆ ಸಾಧನೆಗೈದ ಕಾಲೇಜಿನ ಏಳು ವಿದ್ಯಾರ್ಥಿಗಳು ಮತ್ತು ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ರಾಜ್ಯ ಫುಟ್ಬಾಲ್ ತಂಡದ ತರಬೇತುದಾರ ತಮಿನ್ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.ಕೆ. ಪಾಂಡ್ಯರಾಜ ಬಲ್ಲಾಳ್ ಕಾಲೇಜ್ ಆಫ್ ನರ್ಸಿಂಗ್‍ನ ಪ್ರಾಂಶುಪಾಲೆ ಕೈನಿ ಸಿಸಿಲಿಯಾ ಉಪಸ್ಥಿತರಿದ್ದರು. ಆತ್ಯುತ್ತಮ ಹೊರಹೋಗುವ ಪ್ರಶಸ್ತಿ ಪಡೆದ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಅಲ್ ಶಬಝ್ ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್ ವಾರ್ಷಿಕ ವರದಿ ಮಂಡಿಸಿದರು. ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನೀತಾ ನಾರಾಯಣ ಕಾಮತ್ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನಿಶ್ಮಾ ವಂದಿಸಿದರು.