Site icon Ullalavani

ಮುಡಿಪು: ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

UN NETWORKS

ಮುಡಿಪು: ಯಾವುದೇ ಮೂಲಸೌಲಭ್ಯಗಳ ಕೊರತೆ ಇಲ್ಲದೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಹೊಂದಿರುವ ಕುರ್ನಾಡು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಈ ನಾಡಿನ ಈ ದೇಶದ ಸಂಪತ್ತಾಗಿ ಬೆಳೆಯಬೇಕು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಹೇಳಿದರು.

ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ ವಿದ್ಯಾರ್ಥಿ ಜೀವನ ಎಲ್ಲ ದಿನಗಳಲ್ಲೂ ಸಿಗುವುದಿಲ್ಲ. ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ. ಹಾಗೆಯೇ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದು ಕನ್ನಡ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೂಡಾ ಉತ್ತಮ ಫಲಿತಾಂಶ ದಾಖಲಿಸುವಂತಾಗಬೇಕು ಎಂದು ಹೇಳಿದರು.

ಕುರ್ನಾಡು ಕಾಲೇಜಿಗೆ ಈ ಭಾಗದ ಶಾಸಕರು, ಸಚಿವರು ಆಗಿರುವ ಯು.ಟಿ. ಖಾದರ್ ಬಹಳಷ್ಟು ಅಭಿವೃದ್ಧಿ ಯೋಜನೆ ನೀಡಿದ ಕಾರಣದಿಂದ ಬಹಳಷ್ಟು ಪ್ರಗತಿ ಸಾಸಲು ಸಾಧ್ಯವಾಗಿದೆ. ಪ್ರತಿಭೆ ಅನಾವರಣಗೊಳ್ಳಲು ವೇದಿಕೆಯಾಗಿರುವ ಪ್ರತಿಭಾ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು. ಅದು ಭವಿಷ್ಯದಲ್ಲಿ ನಮ್ಮನ್ನು ಸದಾ ಚುರುಕಾಗಿರುವಂತೆ ಮಾಡುತ್ತದೆ ಎಂದು ನುಡಿದರು.ಕುರ್ನಾಡು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ ಮಾತನಾಡಿ ಸರಕಾರಿ ಕಾಲೇಜುಗಳಿಗೆ ಕಡಿಮೆ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದು ಸಾಮಾನ್ಯವಾಗಿದ್ದು, ಕುರ್ನಾಡು ಪದವಿಪೂರ್ವ ಕಾಲೇಜು ಖಾಸಗಿ ಕಾಲೇಜುಗಳಿಗೆ ಮಿಗಿಲಾದ ಸಾಧನೆಗೈದಿರುವುದು ಅಭಿನಂದಮಾರ್ಹ ಎಂದು ನುಡಿದರು.

ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ ಮಾತನಾಡಿ ಕಾಲೇಜಿನ ಅಭಿವೃದ್ಧಿಗೆ ಸತತ ಪ್ರಯತ್ನ ನಡೆಯುತ್ತಿದ್ದು ಪ್ರೌಢ ಶಿಕ್ಷಣ, ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಒಂದೇ ಸೂರಿನಡಿಯಲ್ಲಿ ಕಲಿಯಲು ಅವಕಾಶ ಸಿಕ್ಕಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ನುಡಿದರು.ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮ್ಮರ್ ಪಜೀರು, ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಅಬ್ದುಲ್ ಜಲೀಲ್ ಮೋಂಟುಗೋಳಿ, ನಿವೃತ್ತ ದೈಹಿಕ ಶಿಕ್ಷಕ ಶೀನ ಶೆಟ್ಟಿ, ಮೂಸಕುಂಞ ಸಾಂಬಾರತೋಟ, ಸೂಪಿಕುಂಞ, ಇಬ್ರಾಹಿಂ ನಡುಪದವು, ಜಗದೀಶ್ ಭಟ್ಜ, ಜಗದೀಶ್ ಪಲಾಯಿ ಹಾಗೂ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಬಸವರಾಜ ಪಲ್ಲಕ್ಕಿ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಶ್ಪಕ್ ಅಹ್ಮದ್ ಮ್ಯಾಗೇರಿ ಪದವಿಪೂರ್ವ ಕಾಜೇಜು ಹಾಗೂ ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರೇಮ್ ಪ್ರಭಾ ಪ್ರೌಢಶಾಲಾ ವಾರ್ಷಿಕ ವರದಿ ಮಂಡಿಸಿದರು.

2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿಯ ಪ್ರತಿಭಾನ್ವಿತರನ್ನು ಶಿಕ್ಷಕಿ ಶೈಬಿ ಮ್ಯಾಪ್ತಿ ವೀಣಾ ಹಾಗೂ ಸುದರ್ಶನ್ ಪರಿಚಯಿಸಿದರು. ಬಳಿಕ ಪ್ರೌಢ ಶಾಲೆ ಹಾಗೂ ಕಾಲೇಜಿನ ಪ್ರತಿಭಾನ್ವಿತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಅರವಿಂದ್ ವಂದಿಸಿದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಂಬಾಪ್ರಸಾದ್ ಎನ್. ಕಾರ್ಯಕ್ರಮ ನಿರೂಪಿಸಿದರು.

Exit mobile version