UN NETWORKS
ತೊಕ್ಕೊಟ್ಟು: ಪರಿಸ್ಥಿತಿಯ ಲಾಭ ಪಡೆದು ಭಾವನಾತ್ಮಕವಾಗಿ ಜನ ಬೆಂಬಲ ಪಡೆದು ಆಕಸ್ಮಿಕವಾಗಿ ಎರಡು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಈ ಜಿಲ್ಲೆಗೆ ಜನಪರವಾದ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಆದರೆ ಈ ಜಿಲ್ಲೆಯ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಅವರು ಸಂಸದರಾಗಿದ್ದ ಸಂದರ್ಭ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಂಡಿದ್ದು ಬಿಟ್ಟರೆ ಆ ಬಳಿಕ ಆಯ್ಕೆಯಾದ ಸಂಸದರು ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೂಡಿದರೆ ಹೊರತು ಜನಪರವಾದ ಯಾವುದೇ ಯೋಜನೆ ಅನುಷ್ಠಾನಕ್ಕೆ ತರಲಿಲ್ಲ ಎಂದು ಯಾದವ ಶೆಟ್ಟಿ ಆರೋಪಿಸಿದರು.
ಸಂಸದರು ಈ ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ರಾಷ್ಟ್ರೀಯ ಹೆದ್ದಾರಿಗೆ ಕನಿಷ್ಠ ಡಾಮರೀಕರಣ ಮಾಡಲು ಸಾಧ್ಯವಾಗಿಲ್ಲ. ಎಷ್ಟು ವರ್ಷ ಆಯಿತು ಜನರನ್ನು ಮೋಸ ಮಾಡಲು ಆರಂಭಿಸಿ. ಮೊನ್ನೆ ಹೇಳ್ತೀರಿ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದೇನೆ. 27ಲಕ್ಷ ಕೋಟಿ ರೂ. ಬಜೆಟ್‍ನಲ್ಲಿ ಉದ್ಯೋಗ ಖಾತರಿ, ಎಸ್‍ಸಿ ಎಸ್‍ಟಿ, ಅಂಗನವಾಡಿ ಇಲಾಖೆ, ವಸತಿ ಸೇರಿದಂತೆ ಎಲ್ಲ ಯೋಜನೆ ಕಡಿಮೆ ಮಾಡಿದ್ದು ನಿಮ್ಮ ಸಾಧನೆ. ಬಂಡವಾಳಶಾಹಿಗಳ ಸುಮಾರು 3.49ಲಕ್ಷ ಕೋಟಿ ರೂ. ಕಾರ್ಪೊರೇಟ್ ಕಂಪೆನಿಗೆ ರಿಯಾಯಿತಿ 7.33ಲಕ್ಷ ಲಕ್ಷ ಕೋಟಿ ರೂ. ಸಾಲ ಮ್ನನಾ ಮಾಡಿರುವ ಬಿಜೆಪಿ ಸರಕಾರ ರೈತರ ಸಾಲ ಮನ್ನಾ ಮಾಡಲು ಮನಸ್ಸು ಮಾಡದೆ ರೈತರು ಉತ್ತಾದಿಸುವ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನೂ ಕೊಡದಿರುವುದು ನಿಮ್ಮ ಸಾಧನೆ ಎಂದರು.
ಕೇಂದ್ರ ಸರಕಾರ ಸ್ವಾಮಿನಾಥನ್ ವರದಿ ಜಾರಿಗೆ ತರದಿರುವುದರಿಂದ ರೈತರ ಬದುಕು ಹೈರಾಣಾಗುತ್ತಿದೆ. ರಸಗೊಬ್ಬರ ಬೆಲೆ ಹೆಚ್ಚಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಎಲ್ಲ ಭರವಸೆ ಮರೆತಿದೆ. ಭಾವನಾತ್ಮಕವಾಗಿ ಧಾರ್ಮಿಕ ವಿಷಯ ತಂದು ರಾಜಕೀಯ ಲಾಭ ಪಡೆದುಕೊಳ್ಳುವುದನ್ನೇ ಕಾಯಕವಾಗಿಸಿದ್ದೀರಿ ಎಂದು ನುಡಿದರು. ಶಾಸಕರಾಗಿ, ಸಚಿವರಾಗಿರುವ ಯು.ಟಿ. ಖಾದರ್ ಅವರು ತಲಪಾಡಿ, ಮಂಜನಾಡಿ, ಮುನ್ನೂರು, ಉಳ್ಳಾಲ ಮೊದಲಾದ ಭಾಗದಲ್ಲಿ ಲಕ್ಷಾಂತರ ಜನರು ಸ್ವಂತ ನಿವೇಶನ ಇಲ್ಲದೆ ಕಷ್ಟಪಡುತ್ತಿದ್ದುಗಮನಿಸಲ್ಲವೇ? ಅವರಿಗೆ ಸರಕಾರದ ಪರವಾಗಿ ನಿವೇಶನ ಕಲ್ಪಿಸಿಕೊಡಿ. ದೊಡ್ಡ ಕುಟುಂಬಗಳು ಸ್ವಂತ ಸೂರಿಲ್ಲದೆ ನಿತ್ಯದ ಬದುಕು ನರಕಯಾತನೆ ಅನುಭವಿಸುತ್ತಿದೆ. ಹಾಗಾಗಿ ಸರಕಾರ ನೂರು ಎಕರೆ ಅಥವಾ ಇನ್ನೂರು ಎಕರೆ ಸ್ತಳ ಅಥವಾ ಫ್ಲ್ಯಾಟ್ ಕಟ್ಟಿಯಾದರೂ ಕೊಟ್ಟು ಅವರನ್ನು ಬಾಡಿಗೆ ಮುಕ್ತ ಮನೆಯಲ್ಲಿ ಜೀವನ ಸಾಗಿಸಲು ಅವಕಾಶ ಕೊಡಿ. ಕಟ್ಟಡ ಕಾರ್ಮಿಕರ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಜಂಜಾಟದ ಬದುಕು ಸಾಗಿಸುವಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಧ್ಯಮ ವರ್ಗದ ಜನರ ಕಷ್ಟ ಕೇಳುವ ನಾಯಕರೇ ಇಲ್ಲದಾಗಿದ್ದಾರೆ. ಅದಕ್ಕಾಗಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಅಗತ್ಯ ಇದೆ.
ಸಾವಿರಾರು ಕೋಟಿ ರೂ. ತೆರಿಗೆ ಹಣ ಲೂಟಿ ಮಾಡಿ ಹೋಗಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಡ ಜನರ ಸಮಸ್ಯೆ ಪರಿಹಾರಕ್ಕೆ ದುಡ್ಡಿಲ್ಲ. ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ರತಿಮೆ ಮಾಡುವ ಮೋದಿ ಬದುಕನ್ನೇ ಕಳೆದುಕೊಂಡ ಕೇರಳದ ಲಕ್ಷಾಂತರ ಜನರಿಗೆ ಕೇವಲ ಐನೂರು ಕೋಟಿ ರೂ. ಕೊಟ್ಟಿದ್ದಾರೆ. ಜನರ ಭಾವನೆ ಕಷ್ಟ ಸಮಸ್ಯೆ ಅರ್ಥಮಾಡಿಕೊಳ್ಳುವ ಪಕ್ಷವೊಂದಿದ್ದರೆ ಅದು ಕೇವಲ ಸಿಪಿಎಂ ಮಾತ್ರ. ಉದ್ಯೋಗ ಖಾತರಿ ಯೋಜನೆ ಮುನ್ನೂರು ಗ್ರಾಮದಲ್ಲಿ ಯಶಸ್ವಿಯಾಗುವುದಾದರೆ ಇತರ ಗ್ರಾಮದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ. ಉಸ್ತುವಾರಿ ಸಚಿವರೇ ನಮ್ಮದೇ ಜಿಲ್ಲೆಯ ಇತರ ಭಾಗದಲ್ಲಿ ನಡೆಯುವ ಯಶಸ್ವಿ ಕಾರ್ಯಕ್ರಮ ಮಂಗಳೂರು ಕ್ಷೇತ್ರದ ಇತರ ಭಾಗದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಉಳ್ಳಾಲ, ತಲಪಾಡಿ, ತೊಕ್ಕೊಟ್ಟು ಭಾಗದಲ್ಲಿ ಯಾಕೆ ಸರಕಾರಿ ಬಸ್, ಸರಕಾರಿ ಕಾಲೇಜು ಭಾಗ್ಯ ಇನ್ನೂ ಇಲ್ಲ. ಹಾಗಾಗಿ ಅದಕ್ಕೆ ಪರಿಹಾರ ಕಲ್ಪಿಸುವಂತೆ ಸಿಪಿಎಂ ಸದಾ ಹೋರಾಟ ನಡೆಸಲಿದೆ. ತುಳು ಭಾಷೆಯನ್ನು ಸಂವಿಧಾದಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಹೋರಾಟ ನಡೆಸುತ್ತಾ ಬಂದಿದ್ದರೂ ನಮ್ಮ ಜಿಲ್ಲೆಯ ಶಾಸಕರು, ಸಂಸದರು ಇದುವರೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಬೀಡಿ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ತುಟ್ಟಿಭತ್ಯೆ, ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಕೊಡುತ್ತಿಲ್ಲ. ಇಂತಹ ಬಹಳಷ್ಟು ಸಮಸ್ಯೆಗಳು ನಮ್ಮ ಮುಂದೆ ಇದ್ದು ಜನರ ಪರವಾಗಿ ಹೋರಾಟ ಮಾಡಿದ ಪಕ್ಷವೊಂದಿದ್ದರೆ ಅದು ಸಿಪಿಎಂ ಮಾತ್ರ.
ವಲಯ ಸಮಿತಿ ಸದಸ್ಯರಾದ ಮಹಾಬಲ ದೆಪ್ಪೆಲಿಮಾರ್, ರೋಹಿದಾಸ್ ತೊಕ್ಕೊಟ್ಟು, ವಿಲಾಸಿನಿ ತೊಕ್ಕೊಟ್ಟು, ಚಂದ್ರಹಾಸ ಪಿಲಾರ್, ಸುಂದರ ಕುಂಪಲ, ಸಂಕಪ್ಪ ಕರ್ಕೇರ ಅಸೈಗೋಳಿ, ಹೊನ್ನಪ್ಪ ಪಾವೂರು, ನರಾಯಣ ತಲಪಾಡಿ, ಅಶ್ರಫ್ ಕೆ.ಸಿ. ರೋಡ್, ಜನಾರ್ದನ್ ಕೆ, ಸಂಜೀವ ಪಿಲಾರ್ ಹಾಗೂ ಗಂಗಯ್ಯ ಪಿಲಾರ್ ಉಪಸ್ಥಿತರಿದ್ದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ. ಕೃಷ್ಣಪ್ಪ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಯು. ಜಯಂತ್ ನಾೈಕ್ ವಂದಿಸಿದರು.