Site icon Ullalavani

ದುಬಾಯಿ: ವಿಶ್ವ ತುಳು ಸಮ್ಮೇಳನ ಸಮಾಪನ

UN NETWORKS

ದುಬಾಯಿ : ತುಳುವರು ಇರುವಲ್ಲಿ ಊರಿನ ಕೀರ್ತಿ ಹೆಚ್ಚಳವಾಗುತ್ತಲೇ‌ ಇರುತ್ತದೆ. ವಿದೇಶದಲ್ಲಿ ನಡೆದ ಸಮ್ಮೇಳನ ಸಾರ್ಥಕವಾಗಬೇಕಾದರೆ ಮನೆಯಲ್ಲಿ‌ ತುಳು ‌ಭಾಷೆ‌ ಮಾತನಾಡುವ ಶಪಥ ಅಗತ್ಯ ಎಂದು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಡಲಂಚಿನ ತುಳುವೆರ್, ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ‌ಭಾರತ ತುಳು‌ ಒಕ್ಕೂಟ ಇವುಗಳ ಸಹಕಾರದಲ್ಲಿ ದುಬಾಯಿಯ ದುಬಾಯಿಯ ಅಲ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಸಭಾಂಗಣದಲ್ಲಿ‌ ಎರಡು ದಿನ ‌ನಡೆದ ವಿಶ್ವ ತುಳು ಸಮ್ಮೇಳನ-2018ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮಾನವನ ಅಭಿವೃದ್ಧಿ ಗಾಳಿಪಟದಂತೆ, ಎಷ್ಟೇ ಎತ್ತರ ಹೋದರೂ ಮೂಲಸ್ಥಾನ ನೂಲಿನಲ್ಲಿರುತ್ತದೆ. ಅದರಂತೆ ನಾವು‌‌ ಎಲ್ಲೇ ಎಷ್ಟು ಎತ್ತರಕ್ಕೆ ಹೋದರೂ ತುಳು ಅಭಿಮಾನ‌ ಹೊಂದಿರಬೇಕು ಎಂದು ಹೇಳಿದರು.

ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಕ್ರಿಯೆ, ಪ್ರೀತಿ, ವಿಶ್ವಾಸಕ್ಕೊಂದು ಹೆಸರೇ ತುಳು. ಈ ಭಾಷೆಯಲ್ಲಿ ಆಧ್ಯಾತ್ಮದ ತಿರುಳು ಇದೆ. ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯಬೇಕಿದೆ ಎಂದರು.ಮಾಣಿಲ ‌‌ಮಠದ ಶ್ರೀ ಮೋಹನ್ ದಾಸ್ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ನಡೆಸುತ್ತಿದ್ದ ದೈವ, ದೇವರ ಸೇವೆ ಇಂದು ವೈಭವೀಕರಣದಿಂದ ಮೂಲ ನೆಲೆ ‌ಕಳೆದುಕೊಳ್ಳುತ್ತಿದೆ. ಈ ಬಗ್ಗೆ ಅರಿತು ಮೂಲ ಆಚಾರದೊಂದಿಗೆ ಭಾಷೆ, ಧರ್ಮ ಉಳಿಸುವ ಕೆಲಸ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಗೌರವ ಸಲ್ಲಿಸಲಾಯಿತು.

ಪದ್ಮಶ್ರೀ ಪುರಸ್ಕೃತ ಬಿ.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೊಟೆಸ್ಟೆಂಟ್ ಧರ್ಮಗುರು ಎಬಿಜೆನೆರ್ ಜತ್ತನ್ನ, ಮಾಧ್ಯಮ ಕಮ್ಯುನಿಕೇಷನ್ ‌ನಿರ್ದೇಶಕ ಅಬ್ದುಲ್ ಸಲಾಂ ‌ಪುತ್ತಿಗೆ, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಮುಖ್ಯ ಅತಿಥಿಗಳಾಗಿದ್ದರು‌. ತುಳು‌ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತರಿದ್ದರು.ಸರ್ವೋತ್ತಮ ಶೆಟ್ಟಿ ಸ್ವಾಗತಿಸಿದರು.

‘ವಿದೇಶದಲ್ಲಿ ತುಳು ಸಮ್ಮೇಳನ ಯಶಸ್ವಿಯಾಗಿದ್ದು ಮಹತ್ತರ ಬದಲಾವಣೆ ಆಗಬೇಕು. ನಾವು ಉತ್ತಮ ವಸ್ತ್ರ‌ ಧರಿಸುತ್ತಾರೆ, ಅದೇ ರೀತಿ ಮನಸ್ಸೂ ಉತ್ತಮವಾಗಿ ಮನದಾಳದಲ್ಲಿ ತುಳು ಪ್ರೀತಿ ಬರಬೇಕು. ಸಮ್ಮೇಳನಕ್ಕೆ ಆಶ್ರಯ ನೀಡಿದ ದೊರೆಗೂ ದೇವನು ಆಶೀರ್ವದಿಸಲಿ’
ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀ. ಕ್ಷೇತ್ರ ಧರ್ಮಸ್ಥಳ.

‘ನಮ್ಮ ಮೇಲೆ ಕಲ್ಲು ಎಸೆದರೂ ಅದನ್ನು ಹಿಡಿದು ಮನೆ ಕಟ್ಟಿ ಅನ್ನ ಹಾಕುವ ಸಾಮರ್ಥ್ಯ ತುಳುವರಿಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಅವಕಾಶ ಸಿಗುತ್ತದೆ, ಅದನ್ನು ಕಳೆದುಕೊಳ್ಳದೆ ಬಳಸಿಕೊಂಡು ಯಶಸ್ಸು ಕಾಣಬೇಕಿದೆ’
ಸುನಿಲ್ ಶೆಟ್ಟಿ, ಬಾಲಿವುಡ್ ನಟ

ಊರುದ ಮೀನ್, ಬಪ್ಪನಾಡುದ ದೇವಿನ ಆಶೀರ್ವಾದ : ನಟ ಸುನಿಲ್
‘ ಊರುದ ಮೀನ್, ಬಪ್ಪನಾಡುದ ದೇವಿನ ಆಶೀರ್ವಾದನೇ ಜೀವದ ಸೀಕ್ರೆಟ್’ ಎಂದು ನಟ ಸುನಿಲ್ ಶೆಟ್ಟಿ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸಿದರು. ಪ್ರತಿ ವರ್ಷವೂ ಊರಿಗೆ ಕುಟುಂಬದ ಭೂತ, ದೇವರ ಪೂಜೆಗಳಿಗೆ ಹೋಗದೇ ಇರುವುದಿಲ್ಲ. ಅವಕಾಶ ಸಿಕ್ಕಿದನ್ನು ಉಪಯೋಗಿಸು, ಅನ್ನುವ ತಂದೆಯ ಮಾತಿಗೆ ಕೊಟ್ಟ ಗೌರವದಿಂದ ಬೆಳೆದು ನಿಂತಿದ್ದೇನೆ. ಪತ್ನಿಗಿಂತಲೂ ತಾಯಿ ಮಾಡುವ ತುಳುನಾಡಿನ ಮರುವಾಯಿ, ಕೋರಿ ಸುಕ್ಕ ‘ ಅಚ್ಚುಮೆಚ್ಚು ಎಂದು ಹೇಳಿದರು.

ಪ್ರಧಾನಿ ಮೋದಿ ಜೊತೆಗೆ ಡಾ. ಹೆಗ್ಗಡೆ ಮತ್ತು ನಾನು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಮಾತುಕತೆ ನಡೆಸುತ್ತೇವೆ. ದುಬೈ ನಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಹಾಗೂ ಇಲ್ಲಿನ ಸುಲ್ತಾನ್ ಅವರು ತುಳು ಭಾಷಿಗರ ಮತ್ತು ತುಳುನಾಡಿನ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪ್ರಧಾನಿ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ. ಶೀಘ್ರವೇ ಮಾನ್ಯತೆ ಸಿಗುವ ವಿಶ್ವಾಸವಿದೆ.

ಬಿ.ಆರ್ ಶೆಟ್ಟಿ
ಉದ್ಯಮಿ

ನಿರಾಸೆ
ದುಬೈ, ಅಬುದಾಬಿ ಮೊದಲಾದ ಕಡೆಗಳಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಂದ ತುಳುಜನರಿಗೆ ನಿರಾಸೆ ಉಂಟಾಯಿತು. ದೀರ್ಘಕಾಲ ಸಭಾ ಕಾರ್ಯಕ್ರಮ ನಡೆಯುವಾಗ ತಡರಾತ್ರಿಯಾಗಿತ್ತು. ಪ್ರೇಕ್ಷಕರು ಕಾರ್ಯಕ್ರಮಕ್ಕಾಗಿ ಕಾದರೂ ತಡವಾಗಿದ್ದರಿಂದ ವಾಪಸ್ಸಾಗಿದ್ದಾರೆ. ಸಭಾಂಗಣದಲ್ಲಿ ನಿಗದಿತ ಜನ ಸೇರುವ ನಿಯಮ ಇರುವುದರಿಂದ ಇನ್ನೂ ಹಲವು ಕಲಾ ರಸಿಕರು, ತುಳು ಜನರು ಒಳಬರಲಾರದೆ ನಿರಾಸೆಗೊಂಡರು.

Exit mobile version