Site icon Ullalavani

ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಕಾರ್ಯ ನಡೆಯಬೇಕಿದೆ : ಡಿ.ವಿರೇಂದ್ರ ಹೆಗ್ಗಡೆ

UN NETWORKS

ದುಬಾಯಿ: ತುಳು ಭಾಷೆ, ಸಂಸ್ಕೃತಿಗೆ ಸಾವಿರ ವರ್ಷದ ಇತಿಹಾಸವಿದ್ದು ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕಳೆದ ಬಾರಿ ಧರ್ಮಸ್ಥಳಕ್ಕೆ ಆಗಮಿಸಿದ್ದ ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದು, ಇದೀಗ ಎರಡನೇ ಬಾರಿಗೆ ವಿದೇಶದ ಮಣ್ಣಿನಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದ ಮೂಲಕ ಕೇಂದ್ರ ಸರಕಾರಕ್ಕೆ ಇನ್ನೊಮ್ಮೆ ಮನವಿ ಮಾಡುತ್ತಿದ್ದು, ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಮೂಲಕ ವಿಶ್ವದ ಮಾನ್ಯತೆ ನೀಡುವ ಕಾರ್ಯ ಆಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ವಿರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಕಡಲಂಚಿನ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟಗಳ ಸಹಕಾರದೊಂದಿಗೆ ಶುಕ್ರವಾರ ದುಬಾಯಿಯ ಅಲ್ ನಾಸರ್ ಲೀಸರ್‍ಲ್ಯಾಂಡ್‍ನ ಐಸಿರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಕಾಲ ನಡೆಯಲಿರುವ ವಿಶ್ವ ತುಳು ಸಮ್ಮೇಳನ ದುಬಾಯಿ-2018ಗೆ ಚಾಲನೆ ನೀಡಿ ಮಾತನಾಡಿದರು.

ತುಳುನಾಡಿನ ವಿಶೇಷತೆ ಎಂದರೆ ಯಾವುದೇ ಪ್ರದೇಶಕ್ಕೆ ನಮ್ಮವರು ಹೋದರೆ ಅಲ್ಲಿನ ಸಂಸ್ಕೃತಿ,ಆಚಾರ ವಿಚಾರಗಳನ್ನು ಆಳವಡಿಸಿಕೊಂಡುಬಾಳುತ್ತಾರೆ. ಇಂತಹ ದೊಡ್ಡ ಗುಣ ತುಳುವರಲ್ಲಿದ್ದು ಅದನ್ನು ಉಳಿಸಿಕೊಂಡು ಹೋಗುವ ಕಾರ್ಯ ಮಾಡಬೇಕು. ಮುಖ್ಯವಾಗಿ ತುಳುನಾಡು ಬಂಗಾರ ಭೂಮಿಯಾಗಿದ್ದು, ಇಲ್ಲಿ ಬಡತನವಿಲ್ಲ ಮತ್ತು ಅಪವಾದವಿಲ್ಲ.ಈ ನಿಟ್ಟಿನಲ್ಲಿ ನಮ್ಮ ಜನರು ದೇಶ ವಿದೇಶಕ್ಕೆ ಹೋದರೂ ತುಳುನಾಡಿನ ಶ್ರೀಮಂತಿಕೆಯನ್ನು ಉಳಿಸಿಕೊಂಡು ಹೋಗುವ ಕಾರ್ಯ ಮಾಡಬೇಕು ಎಂದರು.

ವಿಶ್ವತುಳು ಸಮ್ಮೇಳನದಿಂದ ಸಂಬಂಧ ವೃದ್ಧಿ :
ಕಾರ್ಯಕ್ರಮದಲ್ಲಿ ದುಬಾಯಿಯ ರಾಜಮನೆತನ ಶೇಖ್ ನಹ್ಯಾನ್ ಮುಬಾರಕ್ ಅಲ್ ನಹ್ಯಾನ್ ಮಾತನಾಡಿ ಬಹುಸಂಸ್ಕೃತಿಯ ರಾಷ್ಟ್ರವಾಗಿರುವ ಭಾರತದಲ್ಲಿ ಎಲ್ಲಾ ಧರ್ಮದವರಿಗೆ ಆದ್ಯತೆ ನೀಡುತ್ತಿದ್ದು, ಅದರಲ್ಲೂ ಯುಎಇಗೆ ತುಳು ಭಾಷಿಕರ ಕೊಡುಗೆ ಅಪಾರ. ವಿಶ್ವತುಳು ಸಮ್ಮೇಳನವನ್ನು ದುಬಾಯಿಯಲ್ಲಿ ಆಯೋಜನೆ ಮಾಡುವ ಮೂಲಕ ಭಾರತ ಮತ್ತು ಯುಎಇ ಸಂಬಂಧ ಇನ್ನಷ್ಟು ವೃದ್ಧಿಯಾಗಿದೆ ಎಂದರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ರೆ| ಪೀಟರ್ ಪೌಲ್ ಸಲ್ದಾನ ಮಾತನಾಡಿ ತುಳು ಭಾಷೆ ಬಂಧುತ್ವದ ಜೀವನ ನಡೆಸಲು ಸಹಕಾರಿಯಾಗಿದೆ ತುಳು ನೇರ ಮನಸ್ಸಿಗೆ ಮುಟ್ಟುವ ಭಾಷೆಯಾಗಿದ್ದು, ಮಾನವ ಧರ್ಮವನ್ನು ಒಂದುಗೂಡಿಸಲು ತುಳು ಸಂಸ್ಕೃತಿ ಸಹಕಾರಿಯಾಗಿದೆ ಎಂದರು.

ದ.ಕ.ಜಿಲ್ಲಾ ಉಸ್ತುವಾರಿ ಮತ್ತು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‍ಮಾತನಾಡಿ ವಿಶ್ವತುಳು ಸಮ್ಮೇಳನದ ಮೂಲಕ ತುಳು ಭಾಷೆಗೆ ಇನ್ನಷ್ಟು ಶಕ್ತ ಬಂದಿದ್ದು, ತುಳು ಸಮ್ಮೇಳನದಮಾದರಿಯಲ್ಲಿ ಕಂಬಳವನ್ನು ಆಯೋಜಿಸುವ ಕಾರ್ಯ ಆಗಬೇಕು ಎಂದ ಅವರು ಕಂಬಳದಂತೆ ಕೋಳಿ ಅಂಕವನ್ನು ತುಳುನಾಡಿನಲ್ಲಿ ನಡೆಸುವ ನಿಟ್ಟನಲ್ಲಿ ರಾಜ್ಯ ಸರಕಾರದ ಮೂಲಕ ನಿಯಮ ಜಾರಿಗೆ ಪ್ರಯತ್ನಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‍ಎಂಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ವಹಿಸಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ| ಜಯಮಾಲಬಳ್ಳಾರಿ ಕ್ರೈಸ್ತ ಧರ್ಮಕೇಂದ್ರದ ಧರ್ಮಾಧ್ಯಕ್ಷ ವಂದನೀಯ ಹೆನ್ರಿ ಡಿ.ಸೋಜ, ಸಿಎಸ್‍ಐ ಮಂಗಳೂರು ಪ್ರೊಟೆಸ್ಟೆಂಟ್ ಧರ್ಮಗುರು ವಂದನೀಯ ಎಬಿಜನೇರ್ ಜತ್ತನ್ನ,ಮಾಧ್ಯಮ ಕಮ್ಯುನಿಕೇಷನ್ ಮಂಗಳೂರಿನ ನಿರ್ದೇಶಕ ಅಬ್ದುಲ್ ಸಲಾಂ ಪುತ್ತಿಗೆ, ಕೇಂದ್ರಸರಕಾರದ ಮಾಜಿ ಸಚಿವ ವೀರಪ್ಪ ಮೊೈಲಿ, ಉದ್ಯಮಿ ಹಾಗೂ ಮಾನವತಾ ಹಿತೈಷಿ ರೊನಾಲ್ಡ್ ಕೊಲಾಸೋ ಬೆಂಗಳೂರು, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್,ಬಸವಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ,ಆಳ್ವಾಸ್ ಎಜ್ಯುಕೇಶನ್ ಪೌಂಡೇಷನ್‍ನ ಅಧ್ಯಕ್ಷ ಡಾ| ಮೋಹನ್ ಆಳ್ವ, ಸಂಗೀತ ನಿರ್ದೇಶಕ ಗುರು ಕಿರಣ್, ಉದ್ಯಮಿ ಸುಜಾತ್ ಶೆಟ್ಟಿ, ಮಂಗಳೂರು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ,ಕಡಲಾಯೆರೆದ ತುಳುವೆರ್ ದುಬಾಯಿಯ ಶೋಧನ್ ಪ್ರಸಾದ್ ಉಪಸ್ಥಿತರಿದ್ದರು.

ವಿಶ್ವ ತುಳು ಸಮ್ಮೇಳನದ ಸಂಘಟಕ ಹಾಗೂ ಕಡಲಾಯೆರೆ ದ ತುಳುವೆರ್ ದುಬಾಯಿಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ , ನವ ನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಹರಿದು ಬಂದ ಜನಸಾಗರ: ಕಾರ್ಯಕ್ರಮ ನಡೆಯುವ ಐಸಿರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ದೇಶ ವಿದೇಶಗಳಿಂದ ಆಗಮಿಸಿದ ತುಳುವರೊಂದಿಗೆ ಯುಎಇ ಸೇರಿದಂತೆ ಗಲ್ ರಾಷ್ಟ್ರಗಳಲ್ಲಿವಾಸಿಸುತ್ತಿರುವ ತುಳುವರದಂಡೇ ಆಗಮಿಸಿತ್ತು.ಕಾಯಕ್ರಮಕ್ಕೆ 10ದಿರಮ್ ಟಿಕೆಟ್ ನದಿ ಪಡಿಸಿದ್ದು ಕ್ರೀಡಾಂಗಣದಲ್ಲಿ ಜನಸಾಗರ ಹೆಚ್ಚಾಗಿ ಸುಮಾರು ಸಾವಿರಕ್ಕೂ ಹೆಚ್ಚು ಜನರು ಕ್ರೀಡಾಂಗಣದ ಹೊರಗಡೆ ಸಮ್ಮೇಳನದ ಒಳಗಡೆ ತೆರಳಲು ಕಾಯುತ್ತಿರುವುದು ಕಂಡು ಬಂತು. ಸಮ್ಮೇಳನ ಡೆಯುವ ಕ್ರೀಡಾಂಗಣದಲ್ಲಿ ತುಳು ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿತ್ತು.

ಮುಗಿಲು ಮುಟ್ಟಿದ ಕರತಾಡನ : ದುಬಾಯಿ ಶೇಖ್ ನಹ್ಯಾನ್ ಮುಬಾರಕ್ ಅಲ್ ನಹ್ಯಾನ್ ತುಳು ಬಾಷೆಯ ಕುರಿತು ಅಭಿಮಾನದಲ್ಲಿ ಮಾತನಾಡುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟತ್ತು ಸುಮಾರು 15 ನಿಮಿಷಗಳ ಕಾಲ ಮಾತನಾಡಿದ ಸಂದರ್ಭದಲ್ಲಿ ಪ್ರತೀ ಮಾತಿಗೂ ಕರತಾಡನ ಮುಗಿಲು ಮುಟ್ಟಿತ್ತು.

Exit mobile version