UN NETWORKS
ಕೊಣಾಜೆ : ಗ್ರಾಮೀಣ ಜನರ ಬದುಕು, ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಯುವಜನ ಸಮುದಾಯ ಅರಿಯುವಂತಹ ಪ್ರಯತ್ನ ಮಾಡಬೇಕಿದೆ. ನಮ್ಮ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಆಚರಣೆ, ಪದ್ದತಿ, ಸಂಪ್ರದಾಯಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಕೊಣಾಜೆಯ ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘವು ಸಮಾಜದಲ್ಲಿ ಹಲವಾರು ಧಾರ್ಮಿಕ, ಶೈಕ್ಷಣಿಕ, ಬಡವರಿಗೆ ನೆರವು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ವಿಧಾನಪರಿಷತ್‍ನ ಪ್ರತಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರು, ನಾರಾಯಣ ಗುರುವರ್ಯರು ಆಶೀರ್ವಾದದಂತೆ ನಾವು ಗಟ್ಟಿ ನಿರ್ಧಾರ, ದೃಢವಾದ ಸಂಕಲ್ಪದೊಂದಿಗೆ ಜಾತಿ ಬೇದಭಾವವಿಲ್ಲದ ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ. ಅಲ್ಲದೆ ಇಂದು ನಾವು ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತೆ ಮಾಡಿ ತಮ್ಮ ಸ್ವಂತ ಶಕ್ತಿಯಲ್ಲಿ ಪ್ರತಿಯೊಬ್ಬರು ಅಭಿವೃದ್ಧಿಯಾಗುವ ಯೋಜನೆಗಳನ್ನು ರೂಪಿಸಬೇಕಿದೆ. ಅಲ್ಲದೆ ಸಂಘಟನೆಗಳು ಆಯಾ ವ್ಯಾಪ್ತಿಯಲ್ಲಿ ಜನರ, ಶಿಕ್ಷಣ ವಂಚಿತರ ಹೀಗೆ ಮೊದಲಾದ ಸಮಸ್ಯೆಗಳ ಬಗ್ಗೆ ಸಮೀಕ್ಷೆಗಳನ್ನು ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಯು.ಟಿ,ಖಾದರ್, ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ವಿನುತ ಸಾಲ್ಯಾನ್, ಮುದರ ಪೂಜಾರಿ ಭಂಡಾರಮನೆ, ಕುಮಾರಿ ಸಪ್ತ ಎಸ್,. ಪಾವೂರು, ಕುಮಾರಿ ಧನ್ಯಶ್ರೀ, ಕುಮಾರಿ ರಿಕ್ತ ಕಿರಣ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ನೋಟರಿ ವಕೀಲರಾದ ಪದ್ಮರಾಜ್ ಆರ್, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮೋನು, ಕೊಣಾಜೆ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ದೇವಣ್ಣ ಶೆಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ಅರ್ಚಕರಾದ ದೇವಪ್ಪ ಸಾಂತಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದಲ್ ರಹಿಮಾನ್ ಕೋಡಿಜಾಲ್, ಸಮಾಜಸೇವಕ ಪ್ರಸಾದ್ ರೈ ಕಲ್ಲಿಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಎಸ್ ಪೂಜಾರಿ, ವಿಶ್ವನಾಥ ಶೆಟ್ಟಿ ವಗ್ಗ, ಚೀರುಂಭ ಭಗವತಿ ಕ್ಷೇತ್ರದ ಚಂದ್ರಹಾಸ್ ಉಳ್ಳಾಲ್, ರಾಘವ ಪೂಜಾರಿ, ಸುದರ್ಶನ ಭಟ್ ಕೊಣಾಜೆ, ಸುಶೀಲ ದಡಸ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ರಾಮಕೃಷ್ಣ ಸನಿಲ್, ಲೋಕೇಶ್ ಅಮೀನ್, ಗೋಪಾಲ ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಅಧ್ಯಕ್ಷರಾದ ಹರೀಶ್ ಪೂಜಾರಿ ಕೊಣಾಜೆ ಸ್ವಾಗತಿಸಿದರು. ಗೋಪಾಲ್ ಕೋಟ್ಯಾನ್ ವಂದಿಸಿದರು. ಸುರೇಖ ಹರೀಶ್ ಪೂಜಾರಿ ಹಾಗೂ ರವೀಂದ್ರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕಂಡೊಡೊಂಜಿ ದಿನತ್ತ ಗಮ್ಮತ್ ಕಾರ್ಯಕ್ರಮದ ಅಂಗವಾಗಿ ಕೆಸರು ಗದ್ದೆಯಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಬಡವರ ಮನೆ ನಿರ್ಮಾಣಕ್ಕೆ ತಲಾ 3 ಲಕ್ಷ ಕೊಡಬೇಕಿದೆ
ಈಗಾಗಲೇ ಸರ್ಕಾರವು ಬಡವರ ನಿರ್ಮಾಣಕ್ಕೆ 1 ಲಕ್ಷದ 30 ಸಾವಿರ ನೀಡುತ್ತಿದೆ. ಆದರೆ ಸುಸಜ್ಜಿತವಾದ ಭದ್ರವಾದ ಮನೆ ನಿರ್ಮಾಣವಾಗಬೇಕಾದರೆ 3 ಲಕ್ಷ ರೂ.ವಾದರೂ ಅಗತ್ಯವಿದೆ. ಆದುದರಿಂದ ವಸತಿ ಸಚಿವರಾದ ಯು.ಟಿ.ಖಾದರ್ ಅವರು ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಯು.ಟಿ.ಖಾದರ್ ಅವರಲ್ಲಿ ವಿನಂತಿ ಮಾಡಿಕೊಂಡರು.