UN NETWORKS
ಉಳ್ಳಾಲ: ದೇರಳಕಟ್ಟೆ ಕಾನೆಕೆರೆ ಮೂರು ಬಾವಿಗಳಲ್ಲಿ ಪತ್ತೆಯಾದ ತೈಲಾಂಶ ಪ್ರಕರಣ ಇನ್ನಷ್ಟು ಕಗ್ಗಂಟಾಗಿದೆ. ಗುರುವಾರ ಮೂರು ಬಾವಿಗಳ ನೀರನ್ನು ಸಂಪೂರ್ಣ ಹೊರತೆಗೆದರೂ ಮತ್ತೆ ಬಾವಿಯಲ್ಲಿನ ಒರತೆಯಲ್ಲಿ ಅಧಿಕ ಪ್ರಮಾಣದಲ್ಲಿ ತೈಲಾಂಶ (ಪೆಟ್ರೋಲ್ ) ಪತ್ತೆಯಾಗಿದೆ. ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ ನೀರು ಸಂಪೂರ್ಣ ಹೊರತೆಗೆದು ಗ್ರಾಮಕರಣಿಕರು ಬಾವಿ ನೀರು ಜನ ಉಪಯೋಗಿಸದಂತೆ ಮೊಹರು ಹಾಕಿದ್ದಾರೆ.
ಪರಿಸರ ಇಲಾಖೆಯ ಅಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮತ್ತೆ ಪತ್ತೆಯಾದ ಹೊಸ ಒರತೆ ನೀರಿನ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಆ ಬಳಿಕ ಗ್ರಾಮಕರಣಿಕ ಪೂರ್ಣಚಂದ್ರ ತೇಜಸ್ವಿ ಕಂದಾಯ ಇಲಾಖೆ ಆದೇಶದಂತೆ ಮೂರು ಬಾವಿಗಳನ್ನು ತಾರ್ಪಾಲು ಮುಖೇನ ಕಟ್ಟಿ ಮೊಹರು ಹಾಕಿ ಸ್ಥಳೀಯರಿಗೆ ಉಪಯೋಗಿಸದಂತೆ ನಿಷೇಧಿಸಿದ್ದಾರೆ. ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯರುಗಳಾದ ರಝಾಕ್, ಸತೀಶ್ , ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
`ಅಧಿಕ ಪೆಟ್ರೋಲಿಯಂ ರಾಸಾಯನಿಕ
ಇರುವ ವರದಿ ಬಂದಿತ್ತು’ : ಪರಿಸರ ಇಲಾಖೆ
ಬಾವಿಗಳಲ್ಲಿ ಪತ್ತೆಯಾದ ತೈಲಾಂಶದ ನೀರು ಪರಿಶೀಲಿಸಿದ ವರದಿಯಲ್ಲಿ ಅಧಿಕ ಪೆಟ್ರೋಲಿಯಂ ರಾಸಾಯನಿಕ ಇರುವ ಕುರಿತು ವರದಿ ಬಂದಿದೆ. ಇದೀಗ ಮತ್ತೆ ಪತ್ತೆಯಾಗಿರುವ ಹೊಸ ಒರತೆಯ ನೀರನ್ನು ಸಂಗ್ರಹಿಸಲಾಗಿದೆ. ಅದನ್ನು ಜಿಲ್ಲಾ ಆರೋಗ್ಯ ಇಲಾಖೆ, ಎಂಆರ್ ಪಿಎಲ್ ಅವರಿಗೆ ನೀಡಲಾಗಿದೆ. ಮತ್ತೆ ಅದನ್ನು ಪರಿಶೀಲಿಸಿ ವರದಿಯನ್ನು ಸಂಗ್ರಹಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿರುವ ಬೈಕಂಪಾಡಿ ಪರಿಸರ ಇಲಾಖೆಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಪ್ರತಿಕ್ರಿಯಿಸಿದ್ದಾರೆ.
ಭೂವಿಜ್ಞಾನ ಇಲಾಖೆ ಭೇಟಿ
ತೈಲಾಂಶ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಮೂರು ಬಾವಿಗಳ ಮೇಲೆ ದೇರಳಕಟ್ಟೆ ಜಂಕ್ಷನ್ನಿನಲ್ಲಿರುವ ಪೆಟ್ರೋಲ್ ಬಂಕ್ ಅನ್ನು ಒಂದು ದಿನದ ಕಾಲ ವ್ಯವಹಾರ ಸ್ಥಗಿತಗೊಳಿಸಿ ಬಂದ್ ನಡೆಸಲಾಗಿತ್ತು. ಈ ವೇಳೆ ಓಐಸಿಎಲ್ ಅಧಿಕಾರಿಗಳು ತೈಲದ ಅಳತೆಯನ್ನು ನಡೆಸಿ, ಬಂಕ್‍ನ ಟ್ಯಾಂಕುಗಳಲ್ಲಿ ಯಾವುದೇ ರೀತಿಯ ಸೋರಿಕೆ ಇಲ್ಲದಿರುವ ವರದಿಯನ್ನು ನೀಡಿದ್ದಾರೆ. ಇದರಿಂದ ಬಂಕ್ ಸಮಸ್ಯೆ ಇತ್ಯರ್ಥವಾಗಿತ್ತು. ಆದರೆ ಮತ್ತೆ ಬಾವಿ ನೀರಿನಲ್ಲಿನ ಹೊಸ ಒರತೆಯಲ್ಲಿಯೂ ಪೆಟ್ರೋಲಿಯಂ ರಾಸಾಯನಿಕ ಪತ್ತೆಯಾಗಿರುವುದು ಸ್ಥಳೀಯ ಬೆಳ್ಮ ಗ್ರಾಮ ಪಂಚಾಯಿತಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಭೂವಿಜ್ಞಾನ ಇಲಾಖೆಯವರು ಭೇಟಿ ನೀಡಿ , ಸೂಕ್ತ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿ, ತೈಲದ ಮೂಲ ಪತ್ತೆಹಚ್ಚಲಿರುವ ಭರವಸೆ ಇದೆ ಎಂದು ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ.