UN NETWORKS
ಉಳ್ಳಾಲ: ಬಾವಿ ನೀರಿನಲ್ಲಿ ತೈಲಾಂಶ ಪತ್ತೆಯಾದ ದೇರಳಕಟ್ಟೆಯ ಕಾನೆಕೆರೆ ಪ್ರದೇಶಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.
ಇದೇ ವೇಳೆ ಮಾಧ್ಯಮದ ಜತೆಗೆ ಮಾತನಾಡಿದ ಸಚಿವರು, ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿ, ನೀರಿನಲ್ಲಿರುವ ತೈಲಾಂಶ ಪತ್ತೆಗಾಗಿ ಎನ್. ಐ.ಟಿ.ಕೆ, ಎಂಆರ್ ಪಿಎಲ್ ಮುಖಾಂತರ ಉತ್ತಮ ಏಜೆನ್ಸಿಯನ್ನು ಸಂಪರ್ಕಿಸಿ ಅತ್ಯುತ್ತಮ ತಜ್ಞರಿಗೆ ಪರೀಕ್ಷೆಗೆ ಕಳುಹಿಸಲು ಸೂಚಿಸಲಾಗಿದೆ. ತೈಲಾಂಶ ಪತ್ತೆಯಾದ ಮೂರು ಬಾವಿಗಳ ನೀರು ಸಂಪೂರ್ಣ ಹೊರತೆಗೆದು ಸ್ವಚ್ಛಗೊಳಿಸಿ, ಮರು ಶೇಖರಣೆಯಾಗುವ ನೀರಿನಲ್ಲಿ ತೈಲದ ಅಂಶ ಇರುತ್ತದೋ ಅನ್ನುವುದನ್ನು ಪತ್ತೆಹಚ್ಚಬೇಕಾಗಿದೆ. ನಂತರ ನೀರು ಪರೀಕ್ಷಿಸಿದಾಗ ವಿಚಾರ ಗೊತ್ತಾಗುತ್ತದೆ. ಸ್ಥಳೀಯರಿಗೆ ಕುಡಿಯುವ ನೀರಿನ ಕೊರತೆಯಾಗದ ಹಾಗೆ ಗ್ರಾಮ ಪಂಚಾಯಿತಿ ವಿಶೇಷವಾಗಿ ಒಂದು ಗಂಟೆ ನೀರು ಪೂರೈಸುತ್ತಿದೆ. ಜಿಲ್ಲಾ ಪಂಚಾಯಿತಿ ಅಭಿಯಂತರರಿಗೂ ಸ್ಥಳದಲ್ಲಿ ಕೊಳವೆಬಾವಿ ನಿರ್ಮಾಣಕ್ಕೆ ಜಾಗ ನೋಡುವಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ತ್ಯಾಜ್ಯ ನೀರಿನ ಸಮಸ್ಯೆಯೂ ಅಧಿಕವಾಗಿದ್ದು, ಈ ಕುರಿತ ವರದಿಯನ್ನು ಪಂಚಾಯಿತಿ ಆಡಳಿತ ಜಿಲ್ಲಾಧಿಕಾರಿಗೆ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಸೊಳ್ಳೆ ಸಮಸ್ಯೆಯೂ ಅಧಿಕವಾಗಿರುವುದರಿಂದ ಆರೋಗ್ಯ ಕಾಪಾಡುವ ಸಲುವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ನೆಟ್ ಅನ್ನು ಒದಗಿಸಲಾಗುವುದು. ಪ್ರದೇಶದಲ್ಲಿ ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ಅನುಷ್ಠಾನಕ್ಕೆ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ ಜೊತೆಗೆ ಮಾತುಕತೆ ನಡೆಸಿ, ಸರಕಾರದಿಂದ ಸಿಗುವ ರೂ.20 ಲಕ್ಷ ಅನುದಾನದಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ಹೆಚ್ಚು ವೆಚ್ಛ ತಗಲಿದಲ್ಲಿ ಕಟ್ಟಡ ಮಾಲೀಕರು ಭರಿಸುವಂತೆ ತಿಳಿಸಿದರು.
ಸ್ಥಳದಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಫ ಹರೇಕಳ, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ , ಜೆಡಿಎಸ್ ಮುಖಂಡ ಅಝೀಝ್ ಮಲಾರ್, ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್, ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.