UN NETWORKS
ದೇರಳಕಟ್ಟೆ: ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕೆರೆಯ ಬಾವಿಯ ನೀರಿನಲ್ಲಿ ತೈಲದ ಅಂಶ ಪತ್ತೆಯಾಗಿರುವುದಕ್ಕೆ ಪೂರಕವಾಗಿ ಹಲವು ಮಂದಿ ಸ್ಥಳೀಯ ಪೆಟ್ರೋಲ್ ಬಂಕ್‍ನಿಂದ ತೈಲ ಸೋರಿಕೆ ಆಗುತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 1.00ಗಂಟೆಗೆ ಪೋಲೀಸರ ಸಮ್ಮುಖದಲ್ಲಿ ಬಂಕ್‍ನಲ್ಲಿ ತೈಲ ಪರಿಶೀಲನೆ ನಡೆಸಿ ಮರುದಿನ ಶುಕ್ರವಾರ ಮಧ್ಯಾಹ್ನ ತನಕ ಪರಿಶೀಲಿಸಲಾಗಿದ್ದು ಬಳಿಕ ಅಳತೆ ಮಾಡಿದಾಗ ಎಳ್ಳಷ್ಟೂ ತೈಲದಲ್ಲಿ ವ್ಯತ್ಯಾಸ ಕಂಡುಬರದಿರುವುದರಿಂದ ಪೆಟ್ರೋಲ್ ಬಂಕ್ ಮಾಲೀಕರು ನಿರಾಳರಾಗಿದ್ದಾರೆ.
ಶುಕ್ರವಾರ ಇಂಡಿಯನ್ ಆಯಿಲ್ ಕಾರ್ಪೊರೇಶನ್‍ನ ಅಧಿಕಾರಿಗಳು, ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ಸತ್ತಾರ್, ಸದಸ್ಯ ರಝಾಕ್, ಸತೀಶ್, ಪಿಡಿಒ ನವೀನ್ ಹೆಗ್ಡೆ ಮತ್ತು ಪೊಲೀಸರ ಸಮ್ಮುಖದಲ್ಲಿ ಬಂಕ್‍ನಲ್ಲಿ ಪರಿಶೀಲನೆ ನಡೆಸಿದರು. ಪ್ರಕರಣದ ಜಟಿಲತೆಯಿಂದಾಗಿ ಬಾವಿಯ ನೀರಿನಲ್ಲಿ ತೈಲದ ಅಂಶ ಪತ್ತೆಯಾಗಿರುವುದಕ್ಕೆ ಬೇರೆ ಯಾವ ಕಾರಣ ಇರಬಹುದೆಂಬ ಕಾರಣ ಪತ್ತೆಹಚ್ಚಲು ಪರಿಸರ ಇಲಾಖೆಯ ಅಧಿಕಾರಿಗಳು ತೈಲದಂಶವಿರುವ ಬಾವಿಯ ನೀರನ್ನು ಪರೀಕ್ಷಿಸಲು ಕೊಂಡೊಯ್ದಿದ್ದಾರೆ. ಕಾನಕೆರೆಯ ನಾಲ್ಕು ಬಾವಿಯ ನೀರನ್ನು ತೆಗೆದು ಅದಕ್ಕೆ ಬೆಂಕಿ ಹಚ್ಚಿದರೆ ಆದು ಕೆಲವು ನಿಮಿಷ ಉರಿಯುತ್ತಿತ್ತು. ಪೆಟ್ರೋಲ್ ಬಂಕ್ ಸಮೀಪದ ಮನೆಯ ಬಹಳಷ್ಟು ಆಳದ ಬಾವಿಯಲ್ಲಿ ಅಂತಹ ನೀರು ಕಂಡುಬರಲು ಪೆಟ್ರೋಲ್ ಬಂಕ್ ಲೋಪವೇ ಕಾರಣ ಎಂದು ಸ್ಥಳೀಯರು ಭಾವಿಸಿದ್ದರು. ಹಾಗಾಗಿ ಬೆಳ್ಮ ಗ್ರಾಮ ಪಂಚಾಯಿತಿ ಸೂಚನೆ ಮೇರೆಗೆ ಗುರುವಾರ ಇಂಡಿಯನ್ ಆಯಿಲ್ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರು. ಸಾರ್ವಜನಿಕರ ಸಂಶಯ ನಿವಾರಣೆಗೆ ಒಂದು ದಿನ ಪೂರ್ತಿ ಪೆಟ್ರೋಲ್ ಬಂಕ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಪರಿಸರ ಇಲಾಖೆಯ ಅಧಿಕಾರಿ ಜಯಪ್ರಕಾಶ್ ನಾಯಕ್ ನೇತೃತ್ವದ ತಂಡ ಕಾನಕೆರೆಯ ಬಾವಿಗಳ ನೀರು ಪರಿಶೀಲನೆ ನಡೆಸಿದೆ. ಬಾವಿ ನೀರು ತೈಲ ಮಾದರಿಯಲ್ಲೇ ಇದ್ದು, ಬೆಂಕಿ ಹಾಕಿದಾಗ ಉರಿಯುತ್ತಿದ್ದವು. ವಾಸ್ತವ ಏನು ಎಂಬುದನ್ನು ಪರೀಕ್ಷಿಸಲು ನೀರನ್ನು ಎಂಆರ್ ಪಿಎಲ್‍ಗೆ ಹಾಗೂ ಪಂಚಾಯಿತಿ ಆಡಳಿತ ಮಂಗಳೂರು ವಿವಿಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಸಾರ್ವಜನಿಕರ ಸಂಶಯ ನಿವಾರಣೆಗೆ ಪರೀಕ್ಷಾ ವರದಿ ಬಳಿಕ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಪಂಚಾಯಿತಿ ಆಡಳಿತದಿಂದ ಸಿಕ್ಕಿದೆ.
ಬಾವಿಯ ನೀರಿನಲ್ಲಿ ತೈಲದ ಅಂಶ ಪತ್ತೆಯಾದ ಕುರಿತು ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತರಲಾಗಿದ್ದು ಅವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದು ಅದರಂತೆ ಪರಿಶೀಲನೆಗೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಅಧಿಕಾರಿಗಳಿಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ನೀರನ್ನು ಪರೀಕ್ಷಿಸಿದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ. ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಬಿ.ಎಂ. ಸತ್ತಾರ್
ಉಪಾಧ್ಯಕ್ಷರು