Site icon Ullalavani

ಒಳ್ಳೆಯ ಕೆಲಸ ಮಾಡಿ ಸಮಾಜವನ್ನು ಉಳಿಸುವ ಕೆಲಸ ಆಗಬೇಕು: ಕೃಷ್ಣಗಟ್ಟಿ

UN NETWORKS

ಉಳ್ಳಾಲ: ಒಳ್ಳೆಯ ಕೆಲಸ ಮಾಡುವ ಮೂಲಕ ನಮ್ಮ ಸಮಾಜವನ್ನು ಒಟ್ಟು ಮಾಡುವ ಕೆಲಸ ಆಗಬೇಕು. ಸೌಹಾರ್ದತೆಯ ಬೇರು ಬೆಳೆಸಬೇಕು ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರು ಹೇಳಿದರು. ಪೊಸಕುರಲ್ ಬಳಗದ ವತಿಯಿಂದ ಬಿಲ್ಲವ ಸೇವಾ ಸಮಾಜ ಕೊಲ್ಯ, ಸದ್ಬಾವನಾ ವೇದಿಕೆ ಉಳ್ಳಾಲ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ನಾರಾಯಣ ಗುರು ಮಂದಿರದಲ್ಲಿ ಮಂಗಳವಾರ ನಡೆದ ಸೌಹಾರ್ದ ದೀಪಾವಳಿ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಳ್ಳಾಲದಲ್ಲಿ ಸುದ್ದಿವಾಹಿನಿಯೊಂದು ಆರಂಭವಾಗಿ 16ವರ್ಷ ಉರುಳಿದೆ. ಪೊಸಕುರಲ್ ಕಳೆದ ಐದು ವರ್ಷಗಳಿಂದ ಬೇರೆ ಬೇರೆ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಸೌಹಾರ್ದ ಇಫ್ತಾರ್, ದೀಪಾವಳಿ, ಕ್ರಿಸ್‍ಮಸ್ ಹಬ್ಬವನ್ನು ನಡೆಸುತ್ತಾ ಬಂದಿದೆ. ಈ ಬಾರಿ ಕೂಡಾ ಇಫ್ತಾರ್ ಕೂಟ ನಡೆಸಿದ್ದಾರೆ. ಉತ್ತಮ ಕೆಲಸ ಮಾಡಿ ನಮ್ಮ ಸಮಾಜವನ್ನು ಉಳಿಸಬೇಕು. ಸೌಹಾರ್ದತೆ ಬೆಳೆಸಬೇಕು ಜತೆಗೆ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು.

ಆಶೀರ್ವಚನ ನೀಡಿದ ಪೆರ್ಮನ್ನೂರು ಚರ್ಚ್‍ನ ಧರ್ಮಗುರು ಡಾ. ಜೆ.ಬಿ. ಸಲ್ದಾನ ಸಮಾಜ ಮುಂದುವರಿಯಲು ನಮ್ಮಲ್ಲಿ ಮುಗ್ಧ ಮನೋಭಾವ ಇರಬೇಕು. ಅಂತರಾಳದಲ್ಲಿ ದೀಪ ಬೆಳಗಿಸಿ ಕತ್ತಳನ್ನು ಹೊರಹಾಕಲು ಪ್ರಯತ್ನಿಸಬೇಕು ಎಂದರು. ಸಹಾಯಕ ಧರ್ಮಗುರು ಸ್ಟ್ಯಾನಿ ಪಿಂಟೋ ಮಾತನಾಡಿ, ಮೂರು ಧರ್ಮಗಳು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು ಗೌರವ. ಅಜ್ಞಾನ ಎಂಬ ಕತ್ತಲನ್ನು ಕಳೆದು ಸುಜ್ಞಾನದ ಬೆಳಕನ್ನು ಪಡೆಯುವುದೇ ದೀಪಾವಳಿ. ಇದು ಅಸತ್ಯದಿಂದ ಸತ್ಯದೆಡೆಗೆ ಕೊಂಡೊಯ್ಯುವ ಹಬ್ಬವಾಗಿದೆ. ಬೆಳಕಿಗೆ ಅಂತರ, ಬೇಧ ಇರುವುದಿಲ್ಲ. ನಮ್ಮಲ್ಲೂ ಅದೇ ರೀತಿ ಬೇಧ ಇರಬಾರದು ಎಂದರು.

ಹುಟ್ಟುವಾಗ ಮನುಷ್ಯರಾಗಿರುತ್ತಾರೆ. ಬದುಕುವಾಗ ಮನುಷ್ಯರಾಗಿ ಬದುಕಬೇಕು. ನಮಗೆ ಜಾತಿ ಧರ್ಮ ಬೇಕಾದುದಲ್ಲ. ಬೇಕಾದುದು ಮನುಷ್ಯತ್ವ ಎಂದು ಸದ್ಬಾವನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.ನಿವೃತ್ತ ಶಿಕ್ಷಕ ವಾಸುದೇವ ಉಳ್ಳಾಲ್ ಮಾತನಾಡಿ, ದೀಪಾವಳಿ ವರ್ಷವಿಡೀ ಆಚರಿಸುವ ಹಬ್ಬ. ಕೇವಲ ಇದರಲ್ಲಿ ಸೌಹಾರ್ದತೆ ಕಲ್ಪಿಸುವುದಲ್ಲ.ಮೊದಲು ನಾವು ನೆರೆಹೊರೆಯವರನ್ನು ಪ್ರೀತಿಸಬೇಕು. ನಂತರ, ನಮ್ಮ ನಾಡನ್ನು, ನಮ್ಮ ದೇಶವನ್ನು ಪ್ರೀತಿಸುವ ಮೂಲಕ ಸೌಹಾರ್ದತೆಗೆ ಅವಕಾಶ ಮಾಡಿಕೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತೀ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ಸದ್ಬಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಆನಂದ ಎಸ್. ಕೊಂಡಾಣ, ಕೊಲ್ಯ ರೋಟರಿ ಸಮುದಾಯದಳದ ಅಧ್ಯಕ್ಷ ಸುಧಾ ಸುರೇಶ್ ಹಾಗೂ ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್‍ನ ಅಧ್ಯಕ್ಷ ಅಬ್ದುಲ್ ಕರೀಂ ಉಪಸ್ಥಿತರಿದ್ದರು. ಪೊಸಕುರಲ್ ದೃಶ್ಯಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೋನ್ಸೆ ಪುಷ್ಕಳ್ ಕುಮಾರ್ ಪ್ರಾರ್ಥನೆ ಮಾಡಿದರು. ತ್ಯಾಗಂ ಹರೇಕಳ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ವಿವಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version