UN NETWORKS
ಉಳ್ಳಾಲ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಬುಧವಾರ ಏಕತಾ ಓಟವು ತೊಕ್ಕೊಟ್ಟು ಬಸ್ ನಿಲ್ದಾಣದಿಂದ ಉಳ್ಳಾಲದ ವೀರರಾಣಿ ಅಬ್ಬಕ್ಕ ಸರ್ಕಲ್‍ವರೆಗೆ ನಡೆಯಿತು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪಾತ್ರ ಮಹತ್ವಪೂರ್ಣವಾದುದು. ಪ್ರಧಾನಿ ನರೇಂದ್ರ ಮೋದಿಯವರು ಪಟೇಲ್ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ಏಕತಾ ಓಟದ ನೇತೃತ್ವವನ್ನು ವಹಿಸಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕಠಿಣ ನಿರ್ಧಾರವು ಇಂದು ನಮ್ಮ ದೇಶವನ್ನು ಅಖಂಡವಾಗಿ ಉಳಿಯುವಂತೆ ಮಾಡಿದೆ. ಇಂತಹ ಮಹಾನ್ ಸಾಧಕನ ಬೃಹತ್ ಪ್ರತಿಮೆಯು ಕೂಡಾ ಮೋದಿಯವರ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಏಕತಾ ಓಟಕ್ಕೆ ತೊಕ್ಕೊಟ್ಟುವಿನಲ್ಲಿ ಬೆಂಬಲವಾಗಿ ನೂರಾರು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಸೀತಾರಾಂ ಬಂಗೇರ, ಮೋಹನ್ ರಾಜ್, ಮನೋಜ್ ಆಚಾರ್ಯ, ಜೀವನ್ ತೊಕ್ಕೊಟ್ಟು, ಚಂದ್ರಹಾಸ್ ಅಡ್ಯಂತಾಯ, ನವೀನ್ ಪಾದಲ್ಪಾಡಿ, ಧನಲಕ್ಷ್ಮೀ ಗಟ್ಟಿ, ಯಶವಂತ್ ಅಮೀನ್, ಲಲಿತಾ ಸುಂದರ್, ರವಿಶಂಕರ್ ಸೋಮೇಶ್ವರ, ಯಶವಂತ ದೇರಾಜೆ, ಹರಿಯಪ್ಪ ಸಾಲ್ಯಾನ್, ಹೇಮಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತೊಕ್ಕೊಟ್ಟುವಿನಿಂದ ಆರಂಭವಾದ ಏಕತಾ ಓಟವು ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್ ವರೆಗೆ ನಡೆಯಿತು. ಬಳಿಕ ರಾಣಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.