UN NETWORKS
ಕೊಣಾಜೆ: ರಕ್ತದಾನದಂತಹ ಕಾರ್ಯಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಶಿಬಿರದ ಮೂಲಕ ಜೀವಗಳನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಮಾದರಿ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ಅಭಿಪ್ರಾಯಪಟ್ಟರು.
ಲಯನ್ಸ್‍ನ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಳೆದ ಹಲವಾರು ವರ್ಷಗಳ ಹಿಂದೆಯೇ ಮಂಗಳೂರು ವಿವಿ ಸಹಯೋಗದೊಂದಿಗೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೆವು. ರಕ್ತದಾನದಂತಹ ಕಾರ್ಯಕ್ರಮವು ಒಂದು ಮಾದರಿ ಕಾರ್ಯವಾಗಿದ್ದು ಪ್ರತಿಯೊಂದೆಡೆಯೂ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಎಲ್.ಧರ್ಮ ಅವರು ಮಾತನಾಡಿ, ರಕ್ತದಾನ ದಂತಹ ಕಾರ್ಯವು ದೇಶದೆಲ್ಲೆಡೆ ಸಾಮಾಜಿಕ ಕ್ರಾಂತಿಯ ರೂಪದಲ್ಲಿ ಮೂಡಿ ಬರಬೇಕು. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಜನರಿಗೆ ಈ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಹೆಚ್ಚೆಚ್ಚು ಕಾರ್ಯಕ್ರಮಗಳು ಹಮ್ಮಿಕೊಳ್ಳುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ತದಾನ ಶಿಬಿರದ ಸಂಯೋಜಕರಾದ ಉಮಿಯ ರಾಧಾಕೃಷ್ಣ ರೈ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಆರ್.ಶೆಟ್ಟಿ, ಮಂಗಳಗಂಗೋತ್ರಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ರಮೇಶ್ ಶೆಟ್ಟಿ, ವಸಂತ ಶೆಟ್ಟಿ, ಮುಡಿಪು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಜಯರಾಮ ಸಾಂತ, ಕೋಶಾಧಿಕಾರಿ ಶ್ರೀನಾಥ್ ಕೊಂಡೆ, ಸಂಯೋಜಕರಾದ ಸೌಮ್ಯಶೆಟ್ಟಿ, ಎ.ಜೆ.ಆಸ್ಪತ್ರೆ ಸಂಶೋಧನಾ ಕೇಂದ್ರದ ಗೋಪಾಲಕೃಷ್ಣ, ಲೋಕೇಶ್ ಉಳ್ಳಾಲ್, ರಘುರಾಮ ಕಾಜವ ಮೊದಲಾದವರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಚರಣ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ವಂದಿಸಿದರು.