UN NETWORKS
ಕೊಣಾಜೆ: ಆಧುನಿಕತೆ ಪ್ರಭಾವದಿಂದ ಸಂಪರ್ಕ ಬೆಳೆದು ಕಲೆಗಳು ಮಿಶ್ರಣವಾಗುತ್ತಿದೆ. ರಿಯಾಲಿಟಿ ಷೋ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪ್ರಭಾವ ದಿಂದ ಕಲೆಗಳ ಮೂಲವನ್ನು ಕಳೆದುಕೊಳ್ಳುತ್ತಿದ್ದೇವೆ. ಇವೆಲ್ಲದರ ನಡುವೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಕಮ್ಮಟದ ಅದರ ಸೂಕ್ಷ್ಮಗಳನ್ನು ಅರಿತು ಸತ್ವವನ್ನು ವಿಸ್ತರಿಸುವ ಕಾರ್ಯ ಆಗಬೇಕಿದೆ ಎಂದು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಬೆಳೆದು ನಿಂತ ಪ್ರತಿಯೊಂದು ಕಲೆಯಲ್ಲಿಯೂ ಕಾಲಬಾಧೆಗೊಳಗಾದ ದೋಷಗಳು ಇದ್ದೇ ಇರುತ್ತದೆ. ಸಮರ್ಥ ಕ್ಷೇತ್ರದಲ್ಲಿ ಪ್ರವೃತ್ತಿ ಗೆ ವಿರುದ್ಧವಾದ ಕೃತಿಗಳು ಇರುತ್ತದೆ. ಬ್ಲೈಂಡ್ ಸ್ಪಾಟ್‍ಗಳನ್ನು ಶಾಸ್ತ್ರೀಯ ಅನ್ನುತ್ತಾ ಒಪ್ಪಿಕೊಳ್ಳುವ ಕಾರ್ಯಗಳು ಮುಂದುವರಿಯುವರಿಯಬಾರದು. ತಜ್ಞರು ಸರಿಯಾದುದನ್ನು ಕಾಲಕಾಲಕ್ದಕೆ ತಿದ್ದುವ ಜವಾಬ್ದಾರಿಯನ್ನು ಹೊರಬೇಕು ಎಂದರು.
ಕಮ್ಮಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ. ಅವರು, ಯಕ್ಷಗಾನವನ್ನು ಶೈಕ್ಷಣಿಕವಾಗಿ ಬೆಳೆಸಬೇಕೆಂದು, ಅದಕ್ಕೆ ಅನುಗುಣವಾಗಿ ಕೇಂದ್ರ ಹಿರಿಯ ಕಲಾವಿದರನ್ನು, ಕ್ಷೇತ್ರದ ತಂತ್ರಜ್ಞರನ್ನು ಒಟ್ಟುಗೂಡಿಸಿ ನಡೆಸಿದ ಈ ಹಿಮ್ಮೇಳ ಕಮ್ಮಟ ಮಹತ್ವದ್ದು ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಬೆಂಗಳೂರು ಇದರ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಅಧ್ಯಕ್ಷತೆಯನ್ನು ವಹಿಸಿ ಯಕ್ಷಗಾನದ ಹಿಮ್ಮೇಳವನ್ನು ಕುರಿತು ವಿಶೇಷ ಚರ್ಚೆಗಳು ನಡೆದು ಸೂಕ್ತವಾದ ಶಿಸ್ತು ಬರಬೇಕು. ಈ ಕುರಿತು ಚಿಂತನೆಗಳು ಹೆಚ್ಚಬೇಕು ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ಕಮ್ಮಟದ ನಿರ್ದೇಶಕ ಬೊಟ್ಟಿಕೆರೆ ಪುರುಪೋತ್ತಮ ಪೂಂಜ, ಕಲಾಗಂಗೋತ್ರಿ ಉಚ್ಚಿಲ ಇದರ ಅಧ್ಯಕ್ಷರಾದ ಯು.ಸತೀಶ್ ಕಾರಂತ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಾಗತಿಸಿ ಸುನೀಲ್ ಪಲ್ಲಮಜಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಮ್ಮಟದಲ್ಲಿ ಕಲಾವಿದರ ಸಮಾಗಮ
ಕಮ್ಮಟದಲ್ಲಿ ಯಕ್ಷಗಾನದ ಹಿರಿಯ ವಿದ್ವಾಂಸರು ಮತ್ತು ಪ್ರಸಿದ್ಧ ಹಿಮ್ಮೇಳ ಕಲಾವಿದರ ಉಪಸ್ಥಿತಿ ಗಮನ ಸೆಳೆಯಿತು. ಡಾ. ಶಿಮಂತೂರು ನಾರಾಯಣ ಶೆಟ್ಟಿ, ಬಲಿಪ ನಾರಾಯಣ ಭಾಗವತ, ಕೆ.ಎಂ ರಾಘವ ನಂಬಿಯಾರ್, ಸೂರಿಕುಮೇರು ಗೋವಿಂದ ಭಟ್, ಕುರಿಯ, ಸದಾನಂದ ಐತಾಳ್, ಕರ್ಗಲ್ಲು, ಪದ್ಯಾಣ ಶಂಕರನಾರಾಯಣ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಲೀಲಾವತಿ ಬೈಪಾಡಿತ್ತಾಯ, ಜಬ್ಬಾರ್ ಸಮೊ, ಪಟ್ಲ ಸತೀಶ್, ರವಿಚಂದ್ರ ಕನ್ನಡಿಕಟ್ಟೆ ಮೊದಲಾದ 150 ಕ್ಕೂ ಅಧಿಕ ಹಿರಿ ಕಿರಿಯ ಕಲಾವಿದರು ಕಮ್ಮಟದಲ್ಲಿ ಭಾಗವಹಿಸಿ ಸಂವಾದದಲ್ಲಿ ಪಾಲ್ಗೊಂಡರು.