ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬಸ್ ಬಂದ್‍ಗೆ ಉಳ್ಳಾಲದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗಿನಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿತ್ತು.
ತೊಕ್ಕೊಟ್ಟು ಮಾರ್ಗವಾಗಿ ಬಿ.ಸಿ.ರೋಡ್, ಮುಡಿಪು, ಕೈರಂಗಳ, ಹೂಹಾಕುವ ಕಲ್ಲು, ಕೊಣಾಜೆ, ಪಾವೂರು, ಇನೋಳಿ, ತಲಪಾಡಿ, ಉಳ್ಳಾಲ, ಕಾಸರಗೋಡು ಸಂಚರಿಸುವ ಎಲ್ಲಾ ಬಸ್‍ಗಳ ಸಂಚಾರ ಸ್ಥಗಿತದಿಂದ ಬೆಳಗ್ಗಿನ ಜಾವ ಪ್ರಯಾಣಿಕರು ಪರದಾಡುವಂತಾಯಿತು.
ಮುಡಿಪು, ಬೋಳಿಯಾರ್, ತೊಕ್ಕೊಟ್ಟು, ಕೊಲ್ಯ ಪ್ರದೇಶದಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳಿಂದ ಜನರು ಕ್ಲಪ್ತ ಸಮಯಕ್ಕೆ ತಲುಪಲು ಪರದಾಡಿದರು.
ಖಾಸಗಿ ವಾಹನಗಳಿಗೆ ಉತ್ತಮ ಗಳಿಕೆ : ಬಸ್ ಸಂಚಾರ ಬಂದ್‍ನಿಂದ ರಿಕ್ಷಾ ಸೇರಿದಂತೆ ಖಾಸಗಿ ವಾಹನಗಳಿಗೆ ಉತ್ತಮ ಗಳಿಕೆಯಿತ್ತು. ಬಸ್ ನಿಲ್ದಾಣದ ಬಳಿ ಇರುವ ರಿಕ್ಷಾ ಚಾಲಕರಿಗೆ ಕಡಿಮೆ ಬಾಡಿಗೆ ದೊರೆತರೆ, ಉಳಿದ ಎಲ್ಲಾ ರಿಕ್ಷಾ ಚಾಲಕರು ಉತ್ತಮ ಸಂಪಾದನೆ ಮಾಡಿದ್ದಾರೆ. ಬಸ್‍ನಿಂದ ಇಳಿವ ಪ್ರಯಾಣಿಕರು ಇಲ್ಲದ್ದರಿಂದ ರಿಕ್ಷಾಕ್ಕೆ ಬಾಡಿಗೆ ಕಡಿಮೆ ಇತ್ತು ಎನ್ನುತ್ತಾರೆ ತೊಕ್ಕೊಟ್ಟಿನ ಬಸ್ ನಿಲ್ದಾಣ ಬಳಿಯ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರೇಮ್
ವ್ಯಾಪಾರ ಎಂದಿನಂತೆ : ತೊಕ್ಕೊಟ್ಟು, ದೇರಳಕಟ್ಟೆ, ಅಸೈಗೋಳಿ, ಮುಡಿಪು, ಕೋಟೆಕಾರು, ಕೆ.ಸಿ.ರೋಡ್, ಉಳ್ಳಾಲ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ವ್ಯಪಾರ ಎಂದಿನಂತೆ ಇತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಸ್ ಸಂಚಾರ ಕಡಿಮೆ ಇದ್ದರಿಂದ ವಾಹನಗಳು ಕಡಿಮೆ ಸಂಚರಿಸುತ್ತಿತ್ತು.