Site icon Ullalavani

ಉಳ್ಳಾಲ ದರ್ಗಾಕ್ಕಾಗಿ ಹಣ ಸಂಗ್ರಹಕ್ಕೆ ಆಡಳಿತ ಸಮಿತಿ ಯಾರನ್ನೂ ನೇಮಿಸಿಲ್ಲ: ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ

UN NETWORKS

ಉಳ್ಳಾಲ: ಐತಿಹಾಸಿಕ ಹಾಗೂ ಕಾರಣಿಕ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರ ವಾಗಿರುವ ಉಳ್ಳಾಲ ಸಯ್ಯಿದ್ ಮದನಿ ದರ್ಗಾದ ಹೆಸರು ಹೇಳಿಕೊಂಡು ಕೆಲವು ಮಂದಿ‌ ಹಣ ಸಂಗ್ರಹಿಸುತ್ತಿರುವ ಕುರಿತಾಗಿ ಕೇಳಿ ಬಂದಿದ್ದು ಉಳ್ಳಾಲ ದರ್ಗಾಕ್ಕೆ ಸಂದಬೇಕಾದ ಹಣ ನೇರವಾಗಿ ದರ್ಗಾಕ್ಕೇ ಸಲ್ಲಬೇಕು. ಹೊರತು ದರ್ಗಾ ಆಡಳಿತ ಹಣ ಸಂಗ್ರಹಕ್ಕೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಅಂತಹ ಕೃತ್ಯಕ್ಕೆ ಮುಂದಾದರೆ ಅದನ್ನು ಅಪರಾಧವಾಗಿ ಪರಿಗಣಿಸಲಾಗುವುದು ಎಂದು‌ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ‌ಹಾಜಿ ಅಬ್ದುಲ್ ರಶೀದ್ ಹೇಳಿದರು.

ಉಳ್ಳಾಲ ಸಯ್ಯಿದ್ ಮದನಿ ದರ್ಗಾ ದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ದರ್ಗಾ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಭಕ್ತರ ಸಂಖ್ಯೆಯಲ್ಲಿ ಹಾಗೂ ಹರಿಕೆ ಪಾವತಿಯಲ್ಲಿ ಕೇರಳಿಗರ ಕೊಡುಗೆ ದೊಡ್ಡದು. ‌ಆದರೆ ಇತ್ತೀಚೆಗೆ ದರ್ಗಾ ಆಡಳಿತಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ ಸಂಘಟನೆಯೊಂದಕ್ಕೆ ಸೇರಿದ ಕೆಲವು ಯುವಕರ ತಂಡ ಕೊಲ್ಲಂ, ಹಾಸನ, ಕಾಸರಗೋಡು ಪ್ರದೇಶದಲ್ಲಿ ಉಳ್ಳಾಲ ದರ್ಗಾ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಉಳ್ಳಾಲ ದರ್ಗಾದಲ್ಲಿ ಆರ್ಥಿಕ‌ ಅಡಚಣೆ ಇದೆ‌, ಆಡಳಿತಕ್ಕೆ ನೇತಾರ ಇಲ್ಲ ಎಂದು ಸಾಮಾಜಿಕ‌ ಜಾಲತಾಣಗಳಲ್ಲಿ ಆರೋಪ ಮಾಡುತ್ತಾ ಬಂದಿದೆ. ಅವರಿಗೆ ಒಂದು ದಿನ‌ ಅಲ್ಲಾಹು ಸದ್ಬುದ್ಧಿ ಕರಯಣಿಸಿಯಾನು ಎಂಬ ನಂಬಿಕೆಯೊಂದಿಗೆ ಅದೆಲ್ಲವನ್ನು ಸಹಿಸುತ್ತಾ ಬಂದಿದ್ದೇವೆ. ಹಣ ಸಂಗ್ರಹಕ್ಕೆ ವ್ಯಕ್ತಿಗತವಾಗಲೀ ಸಂಘಟನೆಗಾಗಲೀ ದರ್ಗಾ ಆಡಳಿತ ಯಾರನ್ನೂ ನೇಮಿಸಿಲ್ಲ, ಅಂತಹ ಅವಕಾಶ ಮಾಡಿ ಕೊಡುವುದೂ ಇಲ್ಲ. ದರ್ಗಾದ ಕೇರಳದ ಭಕ್ತರಿಗೆ ಆ ಬಗ್ಗೆ ಮಾಹಿತಿ ಇರದಿರುವುದು ಆಎಳಿತದ ಗಮನಕ್ಕೆ ಬಂದಿದ್ದು ಅಂತಹ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ದರ್ಗಾದ ಭಕ್ತರು‌ ಖಂಡಿಸಬೇಕು ಎಂದರು.

ದರ್ಗಾದ ನೂತನ ಆಡಳಿತ ಮಂಡಳಿಯ ಅಧಿಕಾರ ಈಗಾಗಲೇ ಎರಡೂವರೆ ವರ್ಷ ಪೂರ್ಣಗೊಂಡಿದ್ದು ಶೈಕ್ಷಣಿಕ, ಧಾರ್ಮಿಕ‌, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ನಾಡಿನಾದ್ಯಂತ ಉಳ್ಳಾಲಕ್ಕೆ ಕಪ್ಪುಚುಕ್ಕೆಯಾಗಿದ್ದ ಕೋಮು‌ ಸೂಕ್ಷ್ಮ‌ ಪ್ರದೇಶ ಎಂಬುದಕ್ಕೆ ತಿಲಾಂಜಲಿ‌ ಹಾಕಿ ಸಮಾಜದಲ್ಲಿ ಸಾಮರಸ್ಯತೆ ಕಾಪಾಡಿಕೊಂಡು‌ ಬರಲಾಗಿದೆ.‌ ಹಾಗಿದ್ದರೂ ಜನಪರ ಕಾರ್ಯಗಳನ್ನು ಸಹಿಸಲಾರದ ತಂಡ ದರ್ಗಾ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದೆ. ದರ್ಗಾದ ಇತ್ತೀಚಿನ ವಿದ್ಯಮಾನಗಳ ಕುರಿತಾಗಿ ಅನ್ಯ ರಾಜ್ಯದ ಭಕ್ತರು ಹಾಗೂ ಮಾಧ್ಯಮಗಳಿಗೂ ತಿಳಿದಿಲ್ಲ‌. ಹಾಗಾಗಿ ದರ್ಗಾದ ಪಾವಿತ್ರವ್ಯತೆ ಕಾಪಾಡುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.

ಐನೂರು ವರ್ಷಗಳ ಇತಿಹಾಸವಿರುವ ದರ್ಗಾ ಹಂತ ಹಂತವಾಗಿ ಖ್ಯಾತವಾಗಿದೆ.ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಐಟಿಐ , ಸೇರಿದಂತೆ ಲೌಕಿಕ ಹಾಗೂ ಧಾರ್ಮಿಕ ಜೀವನ ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಮಹಿಳಾ ಕಾಲೇಜು ಆರಂಭಿಸಲಾಗಿದೆ. ಹಿಂದೆ ಇಲ್ಲಿ ಕೇವಲ ಧಾರ್ಮಿಕ ಮಾತ್ರ ಶಿಕ್ಷಣ ಇತ್ತು. ಈಗ ಹಿಫುಲ್ ಕಾಲೇಜು, ದವಾ ವಸತಿ ಸಹಿತ ಕಾಲೇಜು ಆರಂಭಿಸಿ ಸುಮಾರು ಐನೂರು ವಿದ್ಯಾರ್ಥಿಗಳು ಅಧ್ಯಯನ‌ ನಡೆಸುತ್ತಿದ್ದಾರೆ ಎಂದರು.

ಆಡಳಿತ ಸಮಿತಿ ಮದುವೆ , ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಉಳ್ಳಾಲದಲ್ಲಿ ಕೋಮು‌ ಸಂಘರ್ಷ ನಿಂತಿದೆ. ಕಳೆದ ಎರಡೂವರೆ ವರ್ಷ ಧರ್ಮಾತೀತ ಸೌಹಾರ್ದತೆಗಾಗಿ ಎರಡು ಮೂರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ಕೆಲವು ವರ್ಷಗಳ ಹಿಂದೆ ಇ.ಕೆ ಸಂಸ್ಥೆಯಿಂದ ಪುಸ್ತಕ ತರಿಸಲಾಗುತ್ತಿತ್ತು. ಆ ಬಳಿಕ ಎ.ಪಿ.ಸಂಸ್ಥೆಯಿಂದ ತರಲಾಗುತ್ತಿತ್ತು. ಉಳ್ಳಾಲದಲ್ಲಿ ಕಣಚೂರು ಮೋನು ಅವರ ಆಡಳಿತ ಅವಧಿಯಲ್ಲಿ ಕರ್ನಾಟಕ ವಿದ್ಯಾಭ್ಯಾಸ ಬೋರ್ಡ್ ಆರಂಭಿಸಲಾಗಿದೆ. ಕರ್ನಾಟಕದಾದ್ಯಂತ ಅದೇ ಪುಸ್ತಕ ಕೊಡಿಸುವ ಯೋಜನೆ ಇತ್ತಾದರೂ ಕೆಲವರ ಅಸಹಕಾರದಿಂದ ಆ ಯೋಜನೆ ಈಡೇರಿಲ್ಲ ಎಂದು ಹೇಳಿದರು.

ದರ್ಗಾದಲ್ಲಿ ಕರ್ನಾಟಕ ಪಠ್ಯಕ್ರಮ ಅಳವಡಿಸಲು ದರ್ಗಾ ಅಧೀನದ 32‌ಮಸೀದಿಗಳ ಪೈಕಿ ಆರಂಭದಲ್ಲಿ ಹದಿಮೂರು ಮಸೀದಿಗಳ ವಿರೋಧವಿತ್ತು. ಈಗ ಕೇವಲ ಎಂಟು ಮಸೀದಿಗಳು ಕೇರಳ ಪಠ್ಯಕ್ರಮ ಅಳವಡಿಸಿಕೊಂಡಿದೆ. ಇತರ 24ಮಸೀದಿಗಳು ನಮ್ಮ ಪಠ್ಯಕ್ರಮ ಅಳವಡಿಸಿಕೊಂಡಿದೆ. ದರ್ಗಾಕ್ಕೆ ವಾರ್ಷಿಕ ಆರು ಕೋಟಿ ರೂ. ಅನುದಾನ ಹರಕೆ ಸೇರಿದಂತೆ ವಿವಿಧ ರೂಪದಲ್ಲಿ ಹರಿದು ಬರುತ್ತಿದ್ದು ಅದೆಲ್ಲವನ್ನು ವಿವಿಧ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಸರಕಾರವೂ ಅನುದಾನ‌ ನೀಡುತ್ತಾ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹದಿನೈದು ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ‌ ಶೌಚಾಲಯ ನಿರ್ಮಿಸಿಕೊಡುತ್ತಿದೆ ಎಂದು ನುಡಿದರು.

ಭಕ್ತಾದಿಗಳಿಂದ ಪಡೆದ ಹಣ ಕಲ್ಯಾಣಾರ್ಥವಾಗಿಯೇ ಬಳಸಲಾಗುತ್ತಿದೆ. ಶಿಕ್ಷಣ ಜನರ ಆರೋಗ್ಯಕ್ಕೆ ವಿನಿಯೋಗ ಮಾಡುವ ಸಂಸ್ಥೆ ನಮ್ಮದಾಗಿದೆ. ಕೆಲವರು ಮಸೀದಿಗಳು ನಮ್ಮನ್ನು ವಿರೋಧಿಸುತ್ತಿದೆಯಾದರೂ ಮತ್ತೆ ನಮ್ಮ ನಿಲುವನ್ನು ಬೆಂಬಲಿಸಬಹುದು. ಈಗಾಗಲೇ ವಿರೋಧಿಸುತ್ತಿದ್ದ ಐದು ಮಸೀದಿ ಸಪೋರ್ಟ್ ಕೊಟ್ಟಿದೆ. ದರ್ಗಾದಲ್ಲಿ ಪ್ರತಿ ದಿನ ಅನ್ನದಾನ ನಡೆಯುತ್ತಿದೆ. ಹಾಗೆಯೇ ಸರಕಾರ ಮಂಜೂರು ಮಾಡಿರುವ 75ಲಕ್ಷ ರೂ. ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣವಾಗಲಿದ್ದು ಮುವತ್ತು ಕೊಠಡಿ ರಚನೆ ಆಗಲಿದೆ‌ ಎಂದರು.

ಪ್ರಧಾನ ‌ಕಾರ್ಯದರ್ಶಿ ಹಾಜಿ ತ್ವಾಹಾ ಮಹಮದ್ , ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವಾ ಮಹಮ್ಮದ್, ಸದಸ್ಯರುಗಳಾದ ವಿ.ಸಿ. ಕಾಸಿಂ, ಫಾರೂಕ್ ಉಳ್ಳಾಲ್, ಅಮೀರ್ ಹಾಜಿ, ಆಸಿಫ್ ಅಬ್ದುಲ್ಲಾ, ಅಲಿ ಮೋನು, ಕೆ. ಎನ್. ಮಹಮ್ಮದ್, ಹಸೈನಾರ್, ಹಸನ್ ಕೈಕೊ ಹಾಗೂ ಲತೀಫ್ ಮೋನು ಮೇಲಂಗಡಿ ಉಪಸ್ಥಿತರಿದ್ದರು.

Exit mobile version