Site icon Ullalavani

ಕೊಲ್ಯ ನವರಾತ್ರಿ ಉತ್ಸವದಲ್ಲಿ ಪುರಾಣ ಪ್ರವಚನ

UN NETWORKS

ಕೊಲ್ಯ: ಭಾರತೀಯ ವೇದ, ಶಾಸ್ತ್ರ, ದರ್ಶನ, ಪುರಾಣ ಇತ್ಯಾದಿ ಮಾನವ ಜೀವನದ ಅನೇಕ ಉತ್ಕೃಷ್ಟ ಮೌಲ್ಯಗಳನ್ನು ಅಧಿಕೃತವಾಗಿ ತಿಳಿಸುತ್ತವೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವುಗಳಿಗೆ ಮಾನ್ಯತೆಯಿದೆ. ಆದರೆ ಇಂದಿನ ಶಿಕ್ಷಣ ಕ್ರಮದಲ್ಲಿ ಅವುಗಳ ಸ್ಥಾನ ಲುಪ್ತವಾಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಪುರಾಣ ಕಾವ್ಯಗಳ ಮರು ಓದು ಅಗತ್ಯ’ ಎಂದು ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಕೋಟೆಕಾರ್ ಸಮೀಪ ಕೊಲ್ಯದಲ್ಲಿ ಶ್ರೀ ರಮಾನಂದ ಸ್ವಾಮೀಜಿ ಸಂಸ್ಥಾಪಿತ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಜರಗಿದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದೆ ಮನೆ ಮನೆಯಲ್ಲಿ ನಡೆಯುತ್ತಿದ್ದ ಪುರಾಣ ವಾಚನ ಪ್ರಕಾರ ಈಗ ಮರೆಯಾಗುತ್ತಿದೆ. ಇದನ್ನು ಮರಳಿ ಜನಪ್ರಿಯಗೊಳಿಸುವ ಕೆಲಸವನ್ನು ಶಾಲಾ ಕಾಲೇಜು ಮತ್ತು ಮಠ ಮಂದಿರಗಳು ಮಾಡಬೇಕು’ ಎಂದವರು ತಿಳಿಸಿದರು.

ಬಳಿಕ ಕುಮಾರವ್ಯಾಸ ಭಾರತದ ‘ಅಕ್ಷಯ ಪಾತ್ರೆ’ ಕಥಾನಕದ ಪುರಾಣ ಪ್ರವಚನ ಜರಗಿತು. ಹಿರಿಯ ವಕೀಲ ಹಾಗೂ ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು ಕಾವ್ಯ ವಾಚನ ಮಾಡಿದರು. ಪ್ರವಚನಕಾರ ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದರು. ದೇವಳದ ಟ್ರಸ್ಟಿ ಮಧುಸೂದನ ಅಯ್ಯರ್ ವಂದಿಸಿದರು.

Exit mobile version