Site icon Ullalavani

ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ನಿರ್ದೇಶಕ ರಿಷಬ್ ಶೆಟ್ಟಿ

UN NETWORKS

ಕೈರಂಗಳ: ಸಿನಿಮಾ ಚಿತ್ರೀಕರಣಕ್ಕೆ ಒಂದು ಬಾರಿ ಅವಕಾಶ ಕೊಟ್ಟ ಸಂಸ್ಥೆ ಅಥವಾ ಮಾಲೀಕರು ಮತ್ತೆ ಬೇರೊಂದು ಸಿನಿಮಾ ಅಲ್ಲಿ ಚಿತ್ರೀಕರಣ ಮಾಡುತ್ತೇವೆ, ದೊಡ್ಡ ಮೊತ್ತ ಕೊಡುತ್ತೇವೆ ಎಂದು ಜಪ್ಪಯ್ಯ ಅಂದರೂ ಅವಕಾಶ ಕೊಡುವುದಿಲ್ಲ. ಚಿತ್ರೀಕರಣದುದ್ದಕ್ಕೂ ಚಿತ್ರದ ಕಥೆ ಹಾಗೂ ಪತ್ರಾದ ಬಗ್ಗೆ ಗಮನ ಇರುತ್ತದೆಯೇ ಹೊರತು ಆ ತಂಡ ನೈರ್ಮಲ್ಯತೆಗೆ ಆದ್ಯತೆ ಕೊಡುವುದಿಲ್ಲ ಎಂಬ ಕಾರಣದಿಂದ ಮತ್ತೆ ಅಲ್ಲಿ ಬೇರೆ ಸಿನಿಮಾ ತಂಡಕ್ಕೆ ಅವಕಾಶ ಸಿಗುವುದಿಲ್ಲ. ಇನ್ನು ನಿರ್ದೇಶಕನ ಮುಂದಿನ ಸಿನಿಮಾದ ಕಥೆಯೂ ಬೇರೆಯದ್ದೇ ಆಗಿರುವುದರಿಂದ ಲೋಕೇಶನ್ ಬದಲಾಗುತ್ತಿರುವುದರಿಂದ ಸಹಜವಾಗಿಯೇ ತಂಡ ಸಿಹಿ, ಕಹಿ ಘಟನೆಗಳ ಹೊರತುಪಡಿಸಿ ಲೊಕೇಶನ್ ಮರೆಯುತ್ತದೆ. ಸಿನಿಮಾ ಸೋತರೂ ಗೆದ್ದರೂ ಮತ್ತೆ ಶೂಟಿಂಗ್ ಸ್ಪಾಟ್‍ಗೆ ಹೋಗೋದು ವಿರಳ. ಆದರೆ ಈ ಸಾಲಿನ ಯಶಸ್ವಿ ಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ: ರಾಮಣ್ಣ ರೈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ತನ್ನ ಚಿತ್ರಕ್ಕೆ ಅತಿ ಮುಖ್ಯವಾಗಿದ್ದ ಶಾಲೆಯ ಹಾಗೂ ಊರಿನ ಜನತೆಯ ಜೊತೆಗೂ ಒಂದು ರೀತಿಯ ಭಾವಾನಾತ್ಮಕ ಸಂಬಂಧ ಬೆಸೆದುಕೊಂಡಿದ್ದು ಸದ್ಯ ಆ ಸಂಬಂಧ ಶಾಲೆ ಹಾಗೂ ಗ್ರಾಮಕ್ಕೆ ದೊಡ್ಡ ಕೊಡುಗೆಯಾಗುತ್ತದೆ ಎಂಬ ಕನಸು ಜನರಲ್ಲಿ ಚಿಗುರೊಡೆದಿದ್ದು ಸಿನಿಮಾ ಐವತ್ತು ದಿನಗಳನ್ನು ಪೂರೈಸುತ್ತಿದ್ದಂತೆಯೇ ಆ ಊರಿನ ಜನತೆ ಸಂಭ್ರಮಿಸಿದ್ದಾರೆ.

ಹೌದು, ಕೇವಲ ಮೂರು ಚಿತ್ರಗಳನ್ನಷ್ಟೆವೇ ನಿರ್ದೇಶಿಸಿದರೂ ಆ ಮೂರು ಚಿತ್ರಗಳು ಯಶಸ್ವಿಯಾಗುತ್ತಲೇ ಸ್ಟಾರ್ ನಿರ್ದೇಶಕ ಪಟ್ಟಕ್ಕೇರಿರುವ ರಿಷಬ್ ಶೆಟ್ಟಿ ತನ್ನ ಮಹತ್ವಾಕಾಂಕ್ಷೆಯ ಭಿನ್ನ ಚಿತ್ರವಾಗಿ ಮೂಡಿಬಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಚಿತ್ರೀಕರಣ ನಡೆಸಿದ್ದ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಟಿಂಗ್ ನಡೆಸುತ್ತಿದ್ದಾಗ ಇದ್ದ ವಿದ್ಯಾರ್ಥಿಗಳ ಸಂಖ್ಯೆ 42. ಶೂಟಿಂಗ್ ಮುಗಿಸಿ ಚಿತ್ರ ರಿಲೀಸ್ ಆಗುವುದಕ್ಕೆ ಮುನ್ನವೇ ವಿದ್ಯಾರ್ಥಿಗಳ ಸಂಖ್ಯೆ 25ಕ್ಕೆ ಇಳಿದಿದೆ. ಕಾರಣವಿಷ್ಟೆ, ಆಡಳಿತ ಮಂಡಳಿ ನಿರ್ಲಕ್ಷ್ಯ , ಕೈರಂಗಳ ಶಾಲೆಯ ಆಸುಪಾಸಿನಲ್ಲಿ ಆರಮಭವಾಗಿರುವ ತಲೆಎತ್ತಿರುವ ಆರು ಆಂಗ್ಲಮಾಧ್ಯಮ ಶಾಲೆಗಳು, ವಿದ್ಯಾರ್ಥಿಗಳ ಕೊರತೆಯಿಂದ ವರ್ಗಾವಣೆ ಬಯಸಿದ ಶಿಕ್ಷಕರು, ಪೋಷಕರು ಆರೋಪಿಸುವಂತೆ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸುವಂತೆ ಸಲಹೆ ಕೊಟ್ಟಿರುವ ಶಿಕ್ಷಕರು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣ ನೀಡುವ ಶಿಕ್ಷಕರು ಹಾಗೂ ಮೂಲ ಸೌಲಭ್ಯಗಳ ಕೊರತೆ ಅದರ ಜೊತೆಗೆ ಅನುದಾನಿತ ಶಾಲೆಯಾದರೂ ಸರಕಾರದ ತಾರತಮ್ಯ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲು ಕಾರಣವಾಗಿತ್ತು.

ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಶಾಲೆ ಮುಚ್ಚುವ ಆತಂಕದಲ್ಲಿರುವ ಬಗ್ಗೆ ವಿದ್ಯಾರ್ಥಿ ಪೋಷಕರಿಂದ ತಿಳಿದುಕೊಂಡ ರಿಷಬ್ ಶೆಟ್ಟಿ ಅವರ ಮಾತುಗಳಿಗೆ ಧ್ವನಿಯಾಗಿ ಆ ಶಾಲೆಗೆ ಏನಾದರೂ ಮಾಡಬೇಕು ಎಂದು ತನ್ನ ಮಿತ್ರ ಸರಕಾರಿ ಶಾಲೆಗಳ ಉಳಿಸಿ ಆಂಧೋಲನ ನಡೆಸುತ್ತಾ ಈಗಾಗಲೇ ಐದು ಶಾಲೆಗಳನ್ನು ದತ್ತು ಪಡೆದುಕೊಂಡಿರುವ ಅನಿಲ್ ಶೆಟ್ಟಿ ಅವರ ಜೊತೆಗೆ ಸಾಕಷ್ಟು ಗ್ರೌಂಡ್ ವರ್ಕ್ ಮಾಡಿದರು. ತಾನು ಕಲಿತ ಶಾಲೆಯಷ್ಟೆ ಬಾಂಧವ್ಯ ಬೆಸೆದುಕೊಂಡಿರುವ ಕೈರಂಗಳದ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಬೇಕು, ತಮ್ಮ ಕನಸು ನನಸಾಗಲೇಬೇಕು ಎಂದು ಪಣತೊಟ್ಟು ತನ್ನ ತಂಡದೊಂದಿಗೆ ಗುರುವಾರ ಶಾಲೆಯಲ್ಲಿ ನಡೆದ ಶಾರದೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಂಡು ಆಡಳಿತ ಮಂಡಳಿ ಹಾಗೂ ಊರಿನ ಹಿರಿಯರ ಜೊತೆಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದು ಅದರಂತೆ ತನ್ನ ಮನದಾಳದ ಮಾತುಗಳನ್ನು ಸಭೆಯ ಮುಂದೆಯೇ ಹಂಚಿಕೊಂಡರು.

ಪ್ರತಿಯೊಬ್ಬ ಪೋಷಕರಿಗೂ ಒಂದು ಚಿಂತೆ ಇರುತ್ತದೆ. ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದರೆ ಮುಂದಿನ ಜೀವನ ಹೇಗೆ? ಆ ಬಗ್ಗೆ ಆತಂಕ ಬೇಡ. ನಾನು ಕನ್ನಡ ಶಾಲೆಯಲ್ಲಿ ಕಲಿತವನು. ಇನ್‍ಫೋಸಿಸ್ ಕಟ್ಟಿದ ನಾರಾಯಣ ಮೂರ್ತಿ , ಅವರ ಪತ್ನಿ ಸುಧಾ ಮೂರ್ತಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವರು. ದಿವಂಗತ ರಾಷ್ಟ್ರಪತಿ ಡಾ. ಎ.ಪಿ. ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಿಕ್ಷಣದಲ್ಲಿ ಕಲಿತವರಲ್ಲ. ಅವರ ಮಾತೃಭಾಷೆ ತಮಿಳು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ಅವರು ಯಾರೂ ಕೂಡಾ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಲ್ಲ. ಅಷ್ಡಕ್ಕೂ ಇಂಗ್ಲಿಷ್ ಕೂಡಾ ಒಂದು ಭಾಷೆ ಅಷ್ಟೆ, ಅದು ನಾಲೆಡ್ಜ್ ಅಲ್ವೇ ಅಲ್ಲ. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಪೋಷಕರ ಸಹಕಾರ ಅಗತ್ಯ ಎಂಬುದು ಅವರ ಸಲಹೆ.

ಶಾಲೆಯಲ್ಲಿ ಎಲ್ಲ ರೀತಿಯ ಕಾರ್ಯಗಳಾಗುವುದರ ಜೊತೆಗೆ ಅವರಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ಸಿಗಬೇಕು.
ಹಾಗೆಯೇ ಸಿನಿಮಾದವರು ಸುಮ್ನೆ ಹಾಗ್ ಬಂದು ಹೀಗೆ ಪಂಚ್ ಡೈಲಾಗ್ ಹೊಡೆದು ಹೋಗ್ತಾ ಇರ್ತಾರೆ ಎಂಬ ಭಾವನೆ ಬೇಡ. ಈ ಶಾಲೆಯ ಉಳಿವಿಗಾಗಿ ತುಂಬ ಗ್ರೌಂಡ್ ವರ್ಕ್ ಮಾಡಿ ಬಂದಿದ್ದೇವೆ. ಅದಕ್ಕೆ ಕನ್ನಡ ಮಾಧ್ಯಮ ಶಾಲೆ ಉಳಿಸಿ ರಾಜ್ಯಾದ್ಯಂತ ಆಂಧೋಲನ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕರ್ತ ಅನಿಲ್ ಶೆಟ್ಟಿ ಅವರ ಬೆಂಬಲ ಸಿಕ್ಕಿದ್ದು ಅವರು ಈ ಶಾಲೆಗೋಸ್ಕರ ಹಲವು ಯೋಜನೆ ಹಾಕಿಕೊಂಡಿದ್ದಾರೆ. ಐದು ಶಾಲೆಗಳನ್ನು ದತ್ತು ತೆಗೆದುಕೊಂಡು ಈಗಾಗಲೇ ಅಭಿವೃದ್ಧಿ ಮಾಡಿದ್ದಾರೆ. ಇಲ್ಲಿ ಎಲ್ ಕೆ ಜಿ, ಯುಕೆಜಿ, ಪ್ರಿ ಸ್ಕೂಲ್ , ಪ್ಲೇ ಏರಿಯಾ ನಿರ್ಮಿಸುವ ಯೋಜನೆ ಮಕ್ಕಳ ಪ್ರಯಾಣಕ್ಕೆ ಸುಗಮವಾಗುವಂತೆ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಎಲ್ಲರ ಸಹಕಾರ ಬಯಸಿದ್ದಾರೆ.

ರಿಷಬ್ ಶೆಟ್ಟಿ ಅವರ ಜೊತೆಗೆ ಮಾತುಕತೆ:
*ಕನ್ನಡ ಮಾಧ್ಯಮ ಶಾಲೆಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಅಥವಾ ಅನುದಾನಿತ ಶಾಲೆಗಳಿಗೆ ಸರಕಾರಿ, ಅನುದಾನಿತ ಹೀಗೆ..ತಾರತಮ್ಯ ಕಾರಣವಾಗುತ್ತದೆಯೇ ?
ಆಂಗ್ಲ ಮಾಧ್ಯಮ ಶಿಕ್ಷಣ ಕನ್ನಡ ಮಾಧ್ಯಮ ಶಾಲೆಗಳಿಗೆ ಸವಾಲೇ ಅಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರ್ಯಾಂಕ್ ಪಡೆಯುತ್ತಿದ್ದಾರೆ. ಉತ್ತಮ ಅಂಕ ಗಳಿಸುತ್ತಿದ್ದಾರೆ. ಕೆಲವು ಕಡೆ ಕನ್ನಡ ಮಾಧ್ಯಮ ಶಾಲೆಗಳು ಚೆನ್ನಾಗಿಯೇ ಇದೆ. ಬಹಳ ಸುಂದರವಾಗಿದೆ. ಆಂಗ್ಲ ಮಾಧ್ಯಮ ಶಿಕ್ಷಣದಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಪುಸ್ತಕಗಳನ್ನು ಬೆನ್ನಿಗೆ ಹೇರಿಕೊಂಡು ಕಳುಹಿಸಲಾಗುತ್ತದೆ. ಮಕ್ಕಳನ್ನು ಮಕ್ಕಳಾಗಿ ಬೆಳೆಯಲು ಬಿಡಬೇಕು. ಇಲ್ಲಿ ಶಾಲೆ ಹಳೆಯ ಶೈಲಿಯಲ್ಲಿಯೇ ಇದೆ, ಶಿಕ್ಷಕರ ಕೊರತೆ ಇದೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಸಿಗಬೇಕಿತ್ತು. ಆಡಳಿತ ಮಂಡಳಿ ಶಾಲೆಯನ್ನು ಸ್ವಲ್ಪ ಅಭಿವೃದ್ಧಿ ಪಡಿಸಬೇಕಿತ್ತು. ವಾಹನ ವ್ಯವಸ್ಥೆ ಆಗಬೇಕಿದೆ. ಹಾಗಾದಾಗ ಮಕ್ಕಳ ಬಗ್ಗೆ ಪೋಷಕರಿಗೂ ಧೈರ್ಯ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕಲಿತವರು ಈ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಮಕ್ಕಳನ್ನು ಬೇರೆ ಎಲ್ಲಿದ್ದರೂ ಇಲ್ಲಿಗೆ ವಾಪಾಸು ಕರೆ ತರಲು ಮನಸ್ಸು ಮಾಡಬೇಕು.
*ಬಹಳಷ್ಟು ಕಡೆಗಳಲ್ಲಿ ತಿಂಗಳಿಗೂ ಮೇಲೆ ಚಿತ್ರೀಕರಣ ನಡೆಸುವ ನಿಮಗೆ ಈ ಶಾಲೆಯ ಬಗ್ಗೆ ಭಾವನಾತ್ಮಕ ಸಂಬಂಧ ಬೆಸೆದ ಬಗೆ ಹೇಗೆ?
ನಾನು ಕೈರಂಗಳ ಶಾಲೆಯಲ್ಲಿ ಶೂಟಿಂಗ್ ಆರಂಭಿಸಿದ ದಿನಗಳಲ್ಲಿ 42ವಿದ್ಯಾರ್ಥಿಗಳಿದ್ದರು. ಶೂಟಿಂಗ್ ನಡೆಯುವಾಗ ಶಾಲೆಯ ಅಭಿವೃದ್ಧಿ ಬಗ್ಗೆ ಯೋಚನೆ ಇರಲಿಲ್ಲ. ಇಲ್ಲಿನ ಮುಖ್ಯ ಶಿಕ್ಷಕರು ಸ್ಥಳೀಯರಿಂದ ಕರೆ ಬರುತ್ತಿತ್ತು. ಗಣರಾಜ್ಯೋತ್ಸವ ದಿವಸ ಬಂದಾಗ ಮಕ್ಕಳಿಗೆ ಬ್ಯಾಗ್ ಕೊಡಿಸಿದ್ದೆ. ಆಗ ಕೇವಲ 25ವಿದ್ಯಾರ್ಥಿಗಳಿರುವುದು ಗೊತ್ತಾಯಿತು. ನನ್ ಸಿನಿಮಾದಲ್ಲಿ ಬಹಳ ಗಟ್ಟಿ ಪಾತ್ರ ಈ ಶಾಲೆಯದ್ದು. ಮರೆಯಲು ಸಾಧ್ಯವಿಲ್ಲದ್ದು. ಈ ಶಾಲೆ ಮುಚ್ಚಬಾರದು ಎಂದು ಮೊದಲಿಗೆ ಶಾಲೆಗೆ ಬಣ್ಣ ಕೊಡಿಸಬೇಕು ಎಂಬ ಯೋಚನೆ ಬಂತು. ಸಿನಿಮಾ ಜನರಿಗೆ ತಲುಪಿದಾಗ ಏನಾದರೂ ಮಾಡೋಣ ಅಂತ ಅನಿಸಿತು. ಶಾಲೆ ಮುಚ್ಚೋ ಪರಿಸ್ಥಿತಿ ಬಂದಾಗ ದತ್ತುತೆಗೆದುಕೊಳ್ಳುವ ಯೋಚನೆ ಬಂತು. ಶಾಲಾ ಆಡಳಿತ ಮಂಡಳಿ ಹಾಗೂ ಹಿರಿಯರ ಜೊತೆಗೆ ಚರ್ಚೆಗೆ ನಿರ್ಧರಿಸಿದೆವು. ಚರ್ಚೆ ಮಾಡಿದ್ದೇವೆ. ಒಂದು ನಿರ್ಧಾರಕ್ಕೆ ಬಂದಿದ್ದೇವೆ.
ಮಾದರಿ ಶಾಲೆ ಮಾಡಲು ಹೊರಟಿದ್ದೇವೆ. ಅಷ್ಟಕ್ಕೂ ನನ್ನ ಹುಟ್ಟೂರಿನ ಶಾಲೆಯನ್ನು ಊರವರು, ಶಿಕ್ಷಕರು ಸಮೃದ್ಧಿಯಲ್ಲಿ ಇಟ್ಟುಕೊಂಡಿದ್ದಾರೆ. ಹಾಗಾಗಿ ನನ್ ಕಲಿತ ಶಾಲೆಯ ಬಳಿಕ ಇದೇ ಶಾಲೆಯ ಮೇಲೆ ಹೆಚ್ಚಿನ ಅಟ್ಯಾಚ್‍ಮೆಂಟ್ ಇದೇ ಶಾಲೆಯ ಬಗ್ಗೆ.
*ಆಡಳಿತ ಮಂಡಳಿ ನಿರ್ಲಕ್ಷ್ಯ ತಾಳಿದೆ ಎಂಬ ಆರೋಪ ಇದೆ, ಅದುವೇ ಕಾರಣ ಅನಿಸುತ್ತದೆಯೇ? ದತ್ತುತೆಗೆದುಕೊಳ್ಳಲು ಸಮ್ಮತಿಸಿದ್ದಾರೆಯೇ?
ಶಾಲೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸಹಕರಿಸಲಿದೆ. ಈಗಾಗಲೇ ಸಹಕಾರ ಕೊಟ್ಟಿದ್ದಾರೆ. ಆಡಳಿತ ಮಂಡಳಿ ಹಾಗೂ ಹಿರಿಯರ ಜೊತೆಗೆ ಮಾತುಕತೆ ನಡೆದಿದೆ. ಇನ್ನು ಡಾಕ್ಯುಮೆಂಟೇಶನ್ ಮಾತ್ರ ಬಾಕಿ ಇದೆ.
*ಗತವೈಭವ ಮರುಕಳಿಸುವ ವಿಶ್ವಾಸ ಇದೆಯೇ?
ವಿದ್ಯಾರ್ಥಿಗಳು ಬರಬೇಕು. ಒಳ್ಳೊಳ್ಳೆಯ ಶಿಕ್ಷಕರು ಬೇಕು, ಶಾಲೆಯ ಅಭಿವೃದ್ಧಿ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಬದುಕಲು ಇಂಗ್ಲಿಷ್ ಬೇಕು. ಕನ್ನಡದ ಜೊತೆಗೆ ಇಂಗ್ಲಿಷ್‍ಗೂ ಆದ್ಯತೆ ನೀಡಿ ಕೈರಂಗಳ ಶಾಲೆಯಲ್ಲಿ ಕಲಿತಂತಹ ಮಕ್ಕಳು ಇತರ ಯಾವ ಶಾಲೆಯ ಮಕ್ಕಳಿಗೆ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಶಾಲೆ ಕಟ್ಟುವ ಕೆಲಸ ಕಷ್ಟ. ತುಂಬ ಕೈಗಳು ಬೇಕು. ಪ್ರತಿ ಸಿನಿಮಾ ಮಾಡಿ ಮುಗಿಸುವ ಆಶೆ ಹೊತ್ತುಕೊಂಡು ಸಾಗುತ್ತೇವೆ. ಅದೇ ನಿಟ್ಟಿನಲ್ಲಿ ಈ ಶಾಲೆಯನ್ನು ಅಭಿವೃದ್ಧಿ ಪಡಿಸುತ್ತೇವೆ.
*ಬೆಲ್ ಬಾಟಂ, ಕಥಾಸಂಗಮ ಕುರಿತಾಗಿ.
ಬೆಲ್ ಬಾಟಂ ಚಿತ್ರಕ್ಕೆ ಒಂದು ದಿನದ ಚಿತ್ರೀಕರಣ ಬಾಕಿ ಇದೆ. ಡಿಸೆಂಬರ್‍ನಲ್ಲಿ ರಿಲೀಸ್ ಆಗಲಿದೆ. ಆ ಬಳಿಕ ಕಥಾ ಸಂಗಮ ರಿಲೀಸ್ ಆಗಬೇಕಿದೆ. ಒಳ್ಳೊಳ್ಳೆಯ ಚಿತ್ರ ಕೊಡಲು ಪ್ರಯತ್ನಿಸುತ್ತೇನೆ.
* ಚಿತ್ರ, ನಿರ್ದೇಶನ ಕ್ಲಿಕ್ ಆಗಿದೆ. ಹೆಸರು ಕಾಸರಗೋಡು ಶಾಲೆಯಾದರೂ ಚಿತ್ರೀಕರಣಗೊಂಡದ್ದು ಕೈರಂಗಳ ಶಾಲೆಯಲ್ಲಿ. ಕೈರಂಗಳ ನಿಮ್ಮ ಅಂತರಂಗದಲ್ಲಿ ಶಾಶ್ವತ ನೆನೆಪು ಸ್ಥಾಪಿಸುತ್ತಾ?
ಎಲ್ಲಿನ ರಿಷಬ್ ಶೆಟ್ಟಿ, ಎಲ್ಲಿನ ಕೈರಂಗಳ ಶಾಲೆ? ಇವತ್ತು ಕೈರಂಗಳ ಶಾಲೆ ನನ್ನ ಶಾಲೆಯಾಗಿದೆ. ಸಹಜವಾಗಿ ನಾವು ಓದಿದ ಶಾಲೆಗೆ ಬಂದಾಗ ನಾವು ಹಳೆ ವಿದ್ಯಾರ್ಥಿಗಳಾಗಿ ಅಥವಾ ಮೂವತ್ತು ದಾಟಿದ ಮೇಲೆ ದೂರದ ಯಾವುದೋ ಊರಿನಲ್ಲಿ ಉದ್ಯೋಗ ಮಾಡುತ್ತಾ ನಮ್ಮ ಊರಿಗೆ ಬಂದಾಗ ಚಿಕ್ಕ ವಯಸ್ಸಿನ ಹಳೆ ಘಟನೆಗಳು ನೆನಪಾಗ್ತದೆ. ಐಸ್ ಕ್ಯಾಂಡಿ ತಿಂದದ್ದು, ಸಹಪಾಠಿಗಳ ಜೊತೆಗೆ ಹೊಡೆದಾಡಿದ್ದು, ಗಲಾಟೆ ಮಾಡಿದ್ದು, ಶಿಕ್ಷಕರಿಂದ ಪೆಟ್ಟು ತಿಂದದ್ದು ನೆನಪಾಗ್ತದೆ. ಹಳೆ ವಿಷಯ ಮರುಕಳಿಸುತ್ತದೆ. ನನಗೆ ಇವತ್ತು ಇಲ್ಲಿಗೆ ಬಂದಾಗ ಎರಡು ತಿಂಗಳು ಶೂಟಿಂಗ್ ಮಾಡಿದ್ದು ಆ ಎರಡು ತಿಂಗಳ ಅನುಭವ ನನಗೆ ತುಂಬ ವರ್ಷದ ಜರ್ನಿಯ ಫೀಲಿಂಗ್ ಕೊಡುತ್ತಿದೆ. ನನ್ನ ಜೀವನದಲ್ಲಿ ಕೈರಂಗಳ ನಿಮ್ಮ ಊರಾದರೂ ನನ್ನ ಊರಾಗಿದೆ. ಹಾಗಾಗಿ ನಾನು ಹೊರಗಿನವನಲ್ಲ. ಯಾಕೆಂದರೆ ಸರಕಾರಿ ಹಿ.ಪ್ರಾ. ಶಾಲೆ ಸಿನಿಮಾ ಕುರಿತಾಗಿ ಮಾತನಾಡಿದರೆ ಒಬ್ಬ ನಿರ್ದೇಶಕ ಒಂದು ಸಿನಿಮಾದಲ್ಲಿ ಹುಟ್ಟಿ ಅಲ್ಲೇ ಬೆಳೆದು ಆ ಸಿನಿಮಾ ಜನರಿಗೆ ಇಷ್ಟವಾಗಿ ಅದು ದೊಡ್ಡ ಮಟ್ಟಕ್ಕೆ ಜನರಿಗೆ ತಲುಪಿದರೆ ಆ ನಿರ್ದೇಶಕ ಬದುಕುತ್ತಾನೆ. ಬೆಳೆಯುತ್ತಾನೆ. ಇಲ್ದಿದ್ರೆ ಅವನ ಸಾವು ಕೂಡಾ ಅಲ್ಲೇ ಆಗ್ತದೆಯಂತೆ. ನನ್ ಸಿನಿಮಾದಲ್ಲಿ ನಾನು ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರ ಪಾತ್ರ, ಈಗಷ್ಟೆ ಶಾಲೆಗೆ ಸೇರುತ್ತಿರುವ ಮಗುವನ್ನು ಸಿನಿಮಾದಲ್ಲಿ ತೋರಿಸಿದ್ದೇನೆ. ಆ ಮಗುವಾಗಿ, ಶಿಕ್ಷಕರಾಗಿ ಎಲ್ಲ ವಯಸ್ಸಿನ ಪಾತ್ರಗಳ ಜೊತೆಗೆ ಜರ್ನಿ ಮಾಡಿ ಅನುಭವಿಸಿದರೆ ಮಾತ್ರ ನಾನು ಪರದೆ ಮೇಲೆ ಆ ಪಾತ್ರ ಸುಂದರವಾಗಿ ಸೃಷ್ಟಿಸಲು ಸಾಧ್ಯವಾಗುತ್ತದೆ. ನನ್ನ ಇಡೀ ಜೀವನದಲ್ಲಿ ಕೈರಂಗಳ ನನಗೆ ಮರೆಯಲಾರದ ಭಾವನಾತ್ಮಕ ಸಂಬಂಧ ಕಲ್ಪಿಸಿಕೊಟ್ಟಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೂಟಿಂಗ್ ಮಾಡಿದ ಕಾರಣದಿಂದ ನನ್ನೂರಾಗಿದೆ. ಹಾಗಾಗಿ ನಾನು ಇನ್ನು ಹೊರಗಿನವನಲ್ಲ, ನಾನು ನಿಮ್ಮವನೇ.

*ಸರಕಾರಿ ಶಾಲೆ ಉಳಿಸಿ ಆಂಧೋಲನ ಕಳೆದ ಮೂರು ತಿಂಗಳಿನಿಂದ ಮಾಡುತ್ತಾ ಬಂದಿದ್ದೇವೆ. ರಾಜ್ಯದ ಜನ ಸ್ಪಂದಿಸಿದ್ದಾರೆ. ಸರಕಾರದಲ್ಲಿ ಸಮರ್ಪಕ ಶಿಕ್ಷಣ ನೀತಿ ರಚಿಸಿ ಎಂದು ಕೇಳಿಕೊಂಡಿದ್ದೇವೆ. ಸರಕಾರಿ ಶಾಲೆಗಳನ್ನು ಸ್ಥಳೀಯವಾಗಿ ದತ್ತು ತೆಗೆದುಕೊಳ್ಳಲು ಅಲ್ಲಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಐದು ಶಾಲೆಗಳನ್ನು ನಮ್ಮ ಸಂಸ್ಥೆ ಅದಾಗಲೇ ದತ್ತುತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಿ ಮಾದರಿ ಶಾಲೆಯನ್ನಾಗಿ ನಿರ್ಮಿಸಲಿದ್ದೇವೆ. ಅದರಂತೆ ಪೋಷಕರ ಆತಂಕ ದೂರಮಾಡುವ ಸಲುವಾಗಿ ಇಂಗ್ಲಿಷ್ ಭಾಷಾ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಕೊಡುವ ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಜಿಲ್ಲೆಗೊಂದು ಮಾದರಿ ಶಾಲೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಶಾಲೆಯಲ್ಲಿ ಮುಂದಿನ ಎರಡು ವಾರದಲ್ಲಿ ಚಟುವಟಿಕೆಗಳು ಶುರುಮಾಡುತ್ತೇವೆ.

ಅನಿಲ್ ಶೆಟ್ಟಿ
ಸರಕಾರಿ ಶಾಲೆ ಉಳಿಸಿ ಆಂಧೋಲನ ಮುಖ್ಯಸ್ಥರು

ಶಾಲೆಯ ಬೆಳವಣಿಗೆಗೆ ನಾವು ಸಹಕರಿಸಲಿದ್ದೇವೆ. ನಮ್ಮ ಜೊತೆಗೆ ಆಡಳಿತ ಮಂಡಳಿ ಕೈಜೋಡಿಸಲಿದೆ. ಕೈರಂಗಳ ಶಾಲೆಯನ್ನು ರಾಜ್ಯದ ಮಾದರಿ ಶಾಲೆ ಆಗುವತ್ತ ನಮ್ಮ ಪ್ರಯತ್ನ ಮುಂದುವರಿಯಲಿದೆ. ಪ್ರತಿಯೊಂದು ಕನ್ನಡ ಶಾಲೆಗೆ ಇಂಗ್ಲಿಷ್ ಶಿಕ್ಷಣ ಲಭಿಸುತ್ತಿಲ್ಲ ಎಂಬುದೇ ಸವಾಲು. ಹಾಗಾಗಿ ನಾವು ಐದಯ ವರ್ಷದ ಯೋಜನೆಯಂತೆ ಇಲ್ಲಿ ಕನ್ನಡ ಮಾಧ್ಯಮ ಶಾಲೆಯಾಗಿಯೇ ಇಂಗ್ಲಿಷ್ ಶಿಕ್ಷಣ ನೀಡಲು ಶಿಕ್ಷಕರ ನೇಮಕ್ಕೆ ಕ್ರಮಕೈಗೊಳ್ಳಲಾಗುವುದು. ಕಂಪ್ಯೂಟರ್ ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡೆಗೂ ಆದ್ಯತೆ ಕೊಡಲಾಗುವುದು.
ಪ್ರಮೋದ್ ಶೆಟ್ಟಿ
ನಟ
ಶತಮಾನಗಳ ಇತಿಹಾಸವಿದೆ. ಎಲ್ಲ ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ಸಹಜವಾಗಿಯೇ ಶಿಕ್ಷಕರು ವರ್ಗಾವಣೆ ತೆಗದುಕೊಂಡರು. ಸದ್ಯ 25ಮಕ್ಕಳಿದ್ದಾರೆ. ಒಬ್ಬರು ಅಧ್ಯಾಪಕರಿದ್ದಾರೆ. ಸರಕಾರದ ನಿಯಮವೂ ಕಾರಣ. ಸಮಸ್ಯೆ ಉದ್ಭವಾಗಿದ್ದು ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ತಂಡ ದತ್ತು ತೆಗೆದುಕೊಳ್ಳಲು ಸಿದ್ಧರಾಗಿ ದತ್ತುಕೊಡಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ರಿಷಬ್ ಶೆಟ್ಟಿ ಅವರಂತಹ ಗಟ್ಟಿ ಕೈ ನಮಗೆ ಸಿಕ್ಕಿದೆ. ಆಂಗ್ಲಮಾಧ್ಯಮ ಶಿಕ್ಷಣ ಟ್ರೆಂಡ್ ಇದ್ದರೂ ನಮ್ ಶಾಲೆ ಮತ್ತೆ ವಿಜೃಂಭಿಸಲಿದೆ.
ಶಂಕರ್ ಭಟ್ ಕೊಲ್ಲರಮಜಲು
ಟ್ರಸ್ಟ್ ಅಧ್ಯಕ್ಷರು

ಆಂಗ್ಲ ಮಾಧ್ಯಮ ಶಿಕ್ಷಣ ಮಕ್ಕಳಿಗಿಂತ ಹೆಚ್ಚು ಪೋಷಕರಿಗೆ ಫ್ಯಾಶನ್ ಆಗಿಬಿಟ್ಟಿದೆ. ಆಂಗ್ಲಮಾಧ್ಯಮ ಶಿಕ್ಷಣ ಶಾಲೆಗಳು ಹುಟ್ಟಿಕೊಮಡದ್ದೂ ತೊಂದರೆ ಆಯಿತು. ಸರಕಾರದ ನಿಯಮ 40ಮಕ್ಕಳಿಗೆ ಒಂದು ಶಿಕ್ಷಕರು ಎಂಬ ನಿಯಮ ಇರುವುದರಿಂದ ಹೆಚ್ಚುವರಿ ಶಿಕ್ಷಕರನ್ನು ರಾಜ್ಯದ ಯಾವುದೋ ಮೂಲೆಗೆ ವರ್ಗಾವಣೆ ಮಾಡುತ್ತಾರೆ ಎಂಬ ನೆಲೆಯಲ್ಲಿ ಶಿಕ್ಷಕರಿಗೆ ಸಹಕರಿಸಿದ್ದು ತೊಂದರೆ ಆಯಿತು. ಐದು ವರ್ಷಗಳ ಕಾಲ ಅವ„ಯಲ್ಲಿ ಕನಿಷ್ಠ 150 ಮಕ್ಕಳನ್ನು ನಮ್ಮ ಶಾಲೆಯಲ್ಲಿ ಕಾಣಬಹುದು. ಅದಕ್ಕಾಗಿ ಮನೆ ಮನೆಗೆ ಭೇಟಿ ಕೊಟ್ಟು, ಅಂಗನವಾಡಿಗೆ ತೆರಳಿ ಆ ಮಕ್ಕಳನ್ನು ಮುಂದಿನ ದಿನಗಳಲ್ಲಿ ಆರಂಭವಾಗಲಿರುವ ಪ್ರಿಸ್ಕೂಲ್‍ಗೆ ಸೇರಿಸಲಿದ್ದೇವೆ.
ರಾಜಾರಾಮ ಭಟ್
ಟ್ರಸ್ಟ್ ಕಾರ್ಯದರ್ಶಿ

Exit mobile version