Site icon Ullalavani

ಧಾರ್ಮಿಕತೆಯ ಮಹತ್ವವನ್ನು ಅರಿತು ಮುನ್ನಡೆಯೋಣ: ಜಯರಾಮ್ ಸಾಂತ

UN NETWORKS

ಕೊಣಾಜೆ : ಧಾರ್ಮಿಕತೆಯ ಮಹತ್ವವನ್ನು ಅರಿತುಕೊಂಡು ಮುನ್ನಡೆದರೆ ಸೌಹಾರ್ದತೆಯ ಸಮಾಜ ಹಾಗೂ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೋಳಿಯಾರುಗುತ್ತು ಜಯರಾಮ್ ಸಾಂತ ಅವರು ಅಭಿಪ್ರಾಯಪಟ್ಟರು.

ಅವರು ಸಪ್ತಸ್ವರ ಕಲಾತಂಡ(ರಿ) ಕೊಣಾಜೆ ಹಾಗೂ ಸಾರ್ವಜನಿಕ ಶಾರದೋತ್ಸವ ಸಮಿತಿ ಶಾರದಾನಗರ ಕೊಣಾಜೆ ಇದರ 14ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಹಾಗೂ ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ನೈಜವಾದ ದೇವತಾ ಕಾರ್ಯ ಎಂಬುದು ಪ್ರತಿಯೊಬ್ಬರಿಗೂ ಒಳ್ಳೆಯತನವನ್ನು ಬಯಸುವುದು. ಇಂತಹ ಮನೋಭಾವನೆಯು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಆದ್ದರಿಂದ ಬಾಲ್ಯದಲ್ಲಿಯೇ ಮಕ್ಕಳಲ್ಲಿ ನೈತಿಕತೆ, ಸಂಸ್ಕಾರವನ್ನು ಬೆಳೆಸುವಂತ ಕಾರ್ಯ ಖಂಡಿತವಾಗಿಯೂ ಆಗಬೇಕಿದೆ ಎಂದು ಹೇಳಿದರು. ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ದೇರಳಕಟ್ಟೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶ್ವನಾಥ ಗುರುಸ್ವಾಮಿ ಅವರು, ನವರಾತ್ರಿಯ ಉತ್ಸವವು ನಮ್ಮ ಭಾರತೀಯ ಆಚರಣೆಯಲ್ಲಿ ಬಹಳ ವೈಶಿಷ್ಟಪೂರ್ಣವಾದ ಆಚರಣೆಯಾಗಿದೆ. ಹಬ್ಬ, ಆಚರಣೆಗಳ ಮಹತ್ವವನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕ, ಉರಗ ಪ್ರೇಮಿ ಪ್ರೊ.ಕೆ.ಬಾಲಕೃಷ್ಣ ಅವರನ್ನು ಗ್ರಾಮ ಗೌರವ ನೀಡಿ ಪುರಸ್ಕರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಒಡಿಯೂರು ಯಕ್ಷದ್ರುವ ಪಟ್ಲ ಪೌಂಡೇಶನ್‍ನ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಜೆ.ಕೆ.ಎ. ಪ್ರಿಂಟರ್ಸ್ ಮುಡಿಪುವಿನ ಅಜಿತ್ ಕುಮಾರ್, ಕೊಣಾಜೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವೀಚಾರಕಿ ರೇಷ್ಮ ಎಸ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಗೌರವ ಸಲಹೆಗಾರರಾದ ರವೀಂದ್ರ ರೈ ಹರೇಕಳ, ಅಧ್ಯಕ್ಷರಾದ ರವಿ ರೈ ಪಜೀರು, ಸಪ್ತಸ್ವರ ಕಲಾತಂಡದ ಅಧ್ಯಕ್ಷರಾದ ಸುರೇಂದ್ರ ಬೊಳ್ಳೆಕುಮೇರು, ಉಪಾಧ್ಯಕ್ಷ ಮಾಧವ ಗಟ್ಟಿ ಕೆಳಗಿನ ಮನೆ, ಭುವನೇಶ್ವರಿ ಮಾತೃಮಂಡಳಿಯ ಅಧ್ಯಕ್ಷರಾದ ಪೂರ್ಣಿಮ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರವೀಂದ್ರ ರೈ ಹರೇಕಳ ಅವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ಕೊಣಾಜೆ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ರೇಷ್ಮ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

Exit mobile version