Site icon Ullalavani

ಅನುದಾನಗಳನ್ನು ಗ್ರಾ.ಪಂ ಮೂಲಕ ಅನುಷ್ಠಾನಗೊಳಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ : ಕಟೀಲ್

UN NETWORKS

ಮಂಗಳೂರು : ಗ್ರಾಮ ಪಂಚಾಯತ್ ಅಧ್ಯಕ್ಷರು ಅತ್ಯಂತ ಪ್ರಭಾವಿಶಾಲಿಗಳಾಗಿರುತ್ತಾರೆ. ಪ್ರಧಾನಿ ಮಂಜೂರುಗೊಳಿಸಿದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಗ್ರಾಮದ ಪ್ರಥಮ ಪ್ರಜೆಯಿಂದ ಸಾಧ್ಯ. ಅನುದಾನಗಳನ್ನು ಗ್ರಾ.ಪಂ ಮೂಲಕ ಅನುಷ್ಠಾನಗೊಳಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅವರು ಅಡ್ಯಾರ್ ಗ್ರಾಮ ಪಂಚಾಯಿತಿಯ ರಾಜೀವ್ ಗಾಂಧಿ ಸೇವಾ ಕೇಂದ್ರದ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಪಕ್ಷ ಅಭಿವೃದ್ಧಿ ಕೆಲಸ ಮಾಡಿದಾಗ ಕೈಜೋಡಿಸುವುದು, ಅಡ್ಡದಾರಿ ಹೋದಾಗ ತಪ್ಪುಗಳನ್ನು ಎತ್ತಿ ಹಿಡಿದು ಸರಿಪಡಿಸುವುದು ವಿಪಕ್ಷಗಳ ಪಾತ್ರ ಮುಖ್ಯ, ವಿರೋಧ ಪಕ್ಷ ಎಂಬುದು ಸಂಸತ್ ಕಡತದಲ್ಲಿ ಎಲ್ಲೂ ಇಲ್ಲ . ಗ್ರಾಮ ಪಂಚಾಯಿತಿ ಎನ್ನುವುದು ಅತ್ಯಂತ ಪ್ರಭಾವಿ ಕ್ಷೇತ್ರ, ಸರ್ಕಾರದ ಸವಲತ್ತು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಪಂಚಾಯತಿಯದ್ದಾಗಿದ್ದು, ಅಧ್ಯಕ್ಷರ ಅಧಿಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದರು.

ವಿದಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಎಲ್ಲ ಕೆಲಸವನ್ನೂ ಗ್ರಾಮ ಪಂಚಾಯಿತಿಯೇ ನಿರ್ವಹಿಸಬೇಕು ಎಂದು ಜನ ಬಯಸುವುದು ತಪ್ಪಲ್ಲ. ಆದರೆ ಇಲ್ಲಿಗೆ ತಾಲೂಕು, ಜಿಲ್ಲೆ, ಶಾಸಕ, ಸಂಸದರು ಅನುದಾನ ನೀಡಬೇಕಾಗುತ್ತದೆ. ಕುಡಿಯುವ ನೀರು, ನಡೆಯುವ ದಾರಿ, ಸಾವು, ಬದುಕಿನಲ್ಲಿರುವ ರೋಗಿಗಳ ಮಧ್ಯೆ ರಾಜಕೀಯ ತರಬಾರದು. ಗ್ರಾಮ ಪಂಚಾಯಿತಿಗೆ ಹೆಚ್ಚು ಅನುದಾನ ನೀಡಿದರೆ ಗ್ರಾಮದ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಆದರೆ ತುಮಕೂರು ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿಯಲ್ಲಿ ಏಳು ಕೋಟಿ ಅವ್ಯವಹಾರ ನಡೆದಿದೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಆಗುವ ತಪ್ಪುಗಳು ಎಲ್ಲೆಡೆ ಪರಿಣಾಮ ಬೀರುತ್ತದೆ ಎಂದರು.

ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಸಮದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾ ಮುಖ್ಯ ಅತಿಥಿಗಳಾಗಿದ್ದರು.ಅಡ್ಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ ಪಂಚಾಯಿತಿ ಅಭಿವೃದ್ಧಿಗೆ ನರೇಗಾದಿಂದ 10.25 ಲಕ್ಷ ಅನುದಾನ ಬಳಕೆ ಮಾಡುವ ಮೂಲಕ ಉದ್ಯೋಗ ಖಾತರಿಯ ಹಣ ಯಾವ ರೀತಿ ಬಳಸಬಹುದು ಎನ್ನುವುದನ್ನು ಪಿಡಿಓ ತೋರಿಸಿದ್ದಾರೆ, ಆಡಳಿತ, ಪ್ರತಿಪಕ್ಷ ಒಟ್ಟಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ. ತಲಪಾಡಿ, ಅಂಬ್ಲಮೊಗರು ಪಂಚಾಯತುಗಳಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಅಭಿವೃದ್ಧಿ ಅಧಿಕಾರಿಗಳು, ಅನುದಾನ ತಂದು ಪಂಚಾಯಿತಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version