Site icon Ullalavani

ವಿದ್ಯಾರ್ಥಿಗೆ ಅಪರಿಚಿತ ತಂಡದಿಂದ ಇರಿತ

UN NETWORKS

ಉಳ್ಳಾಲ: ಅಪರಿಚಿತ ನಾಲ್ವರ ತಂಡ ವಿದ್ಯಾರ್ಥಿಗೆ ರೇಸರ್ ಮೂಲಕ ಕುತ್ತಿಗೆ ಮತ್ತು ಭುಜದ ಭಾಗಕ್ಕೆ ಇರಿದಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.

ಶಿವಮೊಗ್ಗ ತೀರ್ಥಹಳ್ಳಿಯ ನಿವಾಸಿ ಶ್ರೇಯಸ್ ಶೆಟ್ಟಿ (25) ಹಲ್ಲೆಗೊಳಗಾದ ವಿದ್ಯಾರ್ಥಿ. ಬೋಳಾರ ಅಜ್ಜಿ ಮನೆಯಲ್ಲಿ ಇರುವ ಈತ ಪಂಪ್‍ವೆಲ್ ಖಾಸಗಿ ಕಾಲೇಜಿನಲ್ಲಿ ಫೈರ್ ಆಂಡ್ ಸೇಫ್ಟಿ ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಈ ಹಿಂದೆ ಚಿತ್ರದುರ್ಗದಲ್ಲಿ ಡಿಪ್ಲೋಮಾ ಕಲಿಯುತ್ತಿದ್ದ ಈತ ಅರ್ಧದಲ್ಲೇ ವ್ಯಾಸಾಂಗ ಬಿಟ್ಟು ಮಂಗಳೂರಿನ ಕಾಲೇಜಿಗೆ ಸೇರ್ಪಡೆಗೊಂಡಿದ್ದ. ಚಿತ್ರದುರ್ಗದಲ್ಲಿದ್ದ ಸಂದರ್ಭ ವಿದ್ಯಾರ್ಥಿನಿ ಜತೆಗೆ ಪರಿಚಯವಾಗಿದ್ದು, ಆಕೆಯ ಜತೆಗೆ ಮಂಗಳೂರಿಗೆ ಬಂದರೂ ಸಂಪರ್ಕ ಇಟ್ಟುಕೊಂಡಿದ್ದರು. ಗುರುವಾರ ರಾತ್ರಿ ವಿದ್ಯಾರ್ಥಿನಿಗೆ ಕರೆ ಮಾಡಿದಾಗ ಅಪರಿಚಿತ ಮಾತನಾಡಿ ಶ್ರೇಯಸ್ ಗೆ ಬೆದರಿಕೆ ಒಡ್ಡಿದ್ದನು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ನೋಡಿಕೊಳ್ಳುವುದಾಗಿ ತಿಳಿಸಿದ್ದರು.

ಅದರಂತೆ ತಾನೂ ಮಂಗಳೂರಿನಲ್ಲಿ ಇರುವುದಾಗಿ ಶ್ರೇಯಸ್ ತಿಳಿಸಿದ್ದರು. ಶುಕ್ರವಾರ ಮಧ್ಯಾಹ್ನ ಶ್ರೇಯಸ್ ನನ್ನು ಅಪರಿಚಿತ ತಂಡ ಸೋಮೇಶ್ವರದಲ್ಲಿ ಭೇಟಿಯಾಗುವಂತೆ ತಿಳಿಸಿತ್ತು. ಅದರಂತೆ ಶ್ರೇಯಸ್ ತನ್ನ ಗೆಳೆಯರಾದ ಜಾನ್ಸನ್, ಹರಿಪ್ರಸಾದ್ ಮತ್ತಿಬ್ಬರ ಜತೆಗೆ ಸೇರಿಕೊಂಡು ಸೋಮೇಶ್ವರದ ಸಮುದ್ರ ತೀರದತ್ತ ತೆರಳಿದ್ದರು. ಅಲ್ಲಿ ಐದು ಮಂದಿ ತಂಡ ಇದ್ದು, ಅದರಲ್ಲಿ ಓರ್ವ ಶ್ರೇಯಸ್ ಕುತ್ತಿಗೆ ಮತ್ತು ಭುಜದ ಭಾಗಕ್ಕೆ ರೇಸರ್ ಮೂಲಕ ಇರಿದು ಪರಾರಿಯಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version