Site icon Ullalavani

ಉಳ್ಳಾಲ-ಉಚ್ಚಿಲ ಮುಂದುವರಿದ ಅಲೆಗಳ ಅಬ್ಬರ : ಮೂರು ಮನೆಗಳಿಗೆ ಹಾನಿ

UN NETWORKS

ಉಳ್ಳಾಲ: ಚಂಡಾಮಾರುತ ಹಿನ್ನೆಲೆಯಲ್ಲಿ ಉಳ್ಳಾಲ, ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಎರಡನೇ ದಿನಕ್ಕೆ ಮುಂದುವರಿದಿದೆ. ಹಿಲೆರಿಯಾನಗರದಲ್ಲಿರುವ ಮೂರು ಮನೆಗಳು ಭಾಗಶ: ಸಮುದ್ರಪಾಲಾಗಿವೆ. 41 ಮನೆಗಳು ಅಪಾಯದಂಚಿನಲ್ಲಿ ಸಿಲುಕಿವೆ.

ಅ.9 ರಂದು ಮಂಗಳವಾರ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿತ್ತು. ನಿನ್ನೆ ತಡರಾತ್ರಿಯೂ ಅಲೆಗಳು ಮುಂದುವರಿದು ಇಂದು ಮೂರು ಮನೆಗಳು ಭಾಗಶ: ಸಮುದ್ರಪಾಲಾಗಿವೆ. ಹಿಲೆರಿಯಾನಗರದ ಐಸಮ್ಮ, ಜಮೀಲಾ, ಅನ್ವರ್ ತಸ್ಲೀಂ ಎಂಬವರ ಮನೆಗಳು ಭಾಗಶ: ಸಮುದ್ರದ ಪಾಲಾಗಿದ್ದು, ಮನೆಯಲ್ಲಿ ವಾಸಿಸಲು ಅಸಾಧ್ಯವಾಗಿದೆ. ಇಂದು ರಾತ್ರಿಯೂ ಅಲೆಗಳು ಅಪ್ಪಳಿಸಿದರೆ ಸಂಪೂರ್ಣ ಸಮುದ್ರಪಾಲಾಗುವ ಭೀತಿಯಲ್ಲಿ ಮನೆಮಂದಿಯಿದ್ದಾರೆ. ಹಿಲೆರಿಯಾನಗರ, ಕೈಕೋ, ಇಂದಿರಾನಗರ, ಸುಭಾಷನಗರ ಭಾಗದಲ್ಲಿ ಸಮುದ್ರದ ಅಲೆಗಳು ಗುರುವಾರ ಮಧ್ಯಾಹ್ನದದವರೆಗೂ ಅಪ್ಪಳಿಸುತ್ತಾ ಜನರನ್ನು ಆತಂಕಗೊಳಿಸಿದೆ. ಈವರೆಗೂ ಇಷ್ಟು ಮುಂದೆ ಸಮುದ್ರ ಬಂದಿಲ್ಲ ಅನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಉಚ್ಚಿಲ ಪೆರಿಬೈಲು ಸಮೀಪವೂ ಅಲೆಗಳು ಮಧ್ಯಾಹ್ನ ವೇಳೆ ರಸ್ತೆಯನ್ನು ದಾಟಿ ಅಪ್ಪಳಿಸಿದರಿಂದಾಗಿ ರಸ್ತೆಯಿಡೀ ಮರಳಿನಿಂದ ಮುಚ್ಚಿಹೋಗಿದೆ.

ಜನವಸತಿ ಪ್ರದೇಶದಲ್ಲಿ ಉಪ್ಪು ನೀರು ನಿಂತಿರುವುದರಿಂದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಉಪ್ಪು ನೀರು ಹೊರಹೋಗುವಂತೆ ಎರಡನೇ ದಿನವೂ ಜೆಸಿಬಿ ಮೂಲಕ ಸಂಜೆ ವೇಳೆ ಮೋರಿಯಿಂದ ಮರಳು ತೆರವುಗೊಳಿಸಲಾಯಿತು. ಸೋಮೇಶ್ವರ ಗ್ರಾಮ ಪಂಚಾಯಿತಿ ಸಹಕಾರದಿಂದ ಕಾಮಗಾರಿ ನಡೆದಿದೆ.

Exit mobile version