ತೊಕ್ಕೊಟ್ಟು : ಬೀಡಿ ಕಾರ್ಮಿಕರ ಮುಷ್ಕರ ಬೆಂಬಲಿಸಲು ಪ್ರಚಾರ ಜಾಥಾ
UllalaVani
UN NETWORKS
ತೊಕ್ಕೊಟ್ಟು: ಪೆಟ್ರೋಲ್, ಅನಿಲ ಬೆಲೆ ಸೇರಿದಂತೆ ದಿನಬಳಕೆ ವಸ್ತುಗಳಿಗೆ ದುಬಾರಿಯಾಗಿರುವ ಸಮಯದಲ್ಲಿ 1,000 ಬೀಡಿಗೆ 180 ರೂ. ನೀಡುವ ಮೂಲಕ ಬೀಡಿ ಕಾರ್ಮಿಕರಿಗೆ ಬದುಕಲು ಅಸಾಧ್ಯವಾಗದ ವಾತಾವರಣ ನಿರ್ಮಿಸಲಾಗಿದೆ ಎಂದು ಎಂದು ಎಐಟಿಯುಸಿ ಮುಖಂಡ ಶೇಖರ್ ಹೇಳಿದ್ದಾರೆ.
ಸಿಐಟಿಯು, ಎಐಟಿಯುಸಿ, ಬಿಎಂಎಸ್, ಹೆಚ್ ಎಂಎಸ್ ಜಂಟಿಯಾಗಿ ಅ.23 ರಂದು ಕದ್ರಿ ಭಾರತ್ ಬೀಡಿ ವರ್ಕ್ಸ್ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹದ ಅ.11,12,13 ಜಿಲ್ಲೆಯಾದ್ಯಂತ ಕೈಗೊಂಡಿರುವ ಪ್ರಚಾರ ಜಾಥಾದ ತೊಕ್ಕೊಟ್ಟುವಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೀಡಿ ಸೂಪುಗಳಿಲ್ಲದ ಮನೆಯಿಲ್ಲ. ವಿದ್ಯಾಭ್ಯಾಸ, ಜೀವನ ಸಾಗಿಸಲು ಇದರಿಂದಲೇ ಸಾಧ್ಯವಾಗಿದೆ ಅನ್ನುವ ಅರಿವು ಮಕ್ಕಳಲ್ಲಿ ಮೂಡಬೇಕಾಗಿದೆ. ಈ ಮೂಲಕ ಅವರು ಮುಷ್ಕರ ಮತ್ತು ಧರಣಿ ಸತ್ಯಾಗ್ರಹದಲ್ಲಿ ಕೈಜೋಡಿಸಬೇಕಾಗಿದೆ. ಕಾರ್ಮಿಕರನ್ನು ದುಡಿಸಿದ ಮಾಲೀಕರು ಹಣ ಸಂಪಾದಿಸಿ, ಅದನ್ನು ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಐಷಾರಾಮಿಯಾಗಿ ಬಾಳುತ್ತಿದ್ದಾರೆ. ಆದರೆ ಕಾರ್ಮಿಕರ ಬವಣೆ ಕೇಳುವವರಿಲ್ಲ. ರಾಜ್ಯ ಸರಕಾರ ಕನಿಷ್ಟ ಕೂಲಿ ಕಾಯಿದೆ ಸೆಕ್ಷನ್ 5(1)(ಎ) ಅಡಿಯಲ್ಲಿ ಸಮಿತಿ ರಚಿಸಿ ಘೋಷಿಸಿದ ಕನಿಷ್ಟ ಕೂಲಿ ಸಾವಿರ ಬೀಡಿಗೆ ರೂ.210ನ್ನು 2018,ಎ.1 ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಿತ್ತು. ಬೀಡಿ ಮಾಲೀಕರು ಸಹಿ ಹಾಕಿರುವ ಈ ಕೂಲಿಯನ್ನು ನೀಡಲು ಮೀನ ಮೇಷ ಎಣಿಸುತ್ತಿರುವುದು ಖಂಡನೀಯ. 6 ತಿಂಗಳ ಹಣವನ್ನು ಇಟ್ಟುಕೊಂಡಿರುವುದು ಮಾತ್ರವಲ್ಲ, 2015ರ ಎ.1 ರಿಂದ ನೀಡಬೇಕಾದ ತುಟ್ಟಿಭತ್ಯೆ ರೂ.12.75 ಪೈಸೆಯಂತೆ ನೀಡಬೇಕಾದ ಹಣವನ್ನು ನೀಡದಿರುವುದು ಕಾರ್ಮಿಕರಿಗೆ ಸಹಿಸಲು ಅಸಾಧ್ಯವಾಗಿದೆ ಎಂದರು.
ಸಿಐಟಿಯು ಅಧ್ಯಕ್ಷ ವಸಂತ ಆಚಾರಿ, ಪ್ರ.ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಪ್ರ.ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜೆಪ್ಪಿನಮೊಗರು, ಭಾರತಿ ಬೋಳಾರ, ಜಿಲ್ಲಾ ಬೀಡಿ ಫೆಡರೇಶನ್ನಿನ ರಮಣಿ, ಪದ್ಮಾವತಿ.ಯಸ್ ಶೆಟ್ಟಿ, ಬಾಬು ಪಿಲಾರ್, ಕೃಷ್ಣಪ್ಪ ಸಾಲ್ಯಾನ್, ವಿಲಾಸಿನಿ ತೊಕ್ಕೊಟ್ಟು, ಮನಪಾ ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು. ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ನಿನ ಜಯಂತ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.