Site icon Ullalavani

11,152 ಎತ್ತರದ ಹಾಟು ಪರ್ವತಾರೋಹಣಗೈದ ನಿಟ್ಟೆ ವಿದ್ಯಾರ್ಥಿಗಳು

UN NETWORKS

ಉಳ್ಳಾಲ:` ಆಲಿಕಲ್ಲು ಮಳೆ ಬೀಳುತ್ತಿತ್ತು. ಬಂಡೆಕಲ್ಲು ಜಾರಿದರೂ ಬಿದ್ದು ಎದ್ದು ಮುಂದೆ ನಡೆದಿದ್ದೇವೆ. 10 ದಿನಗಳಲ್ಲಿ 90 ಕಿ.ಮೀ ಚಾರಣ ನಡೆಸುವುದರ ಜೊತೆಗೆ 11,152 ಎತ್ತರದ ಹಾಟು ಬೆಟ್ಟವನ್ನು ಏರಿದ ಕೀರ್ತಿ ನಮ್ಮ ತಂಡದ್ದಾಗಿದೆ’. ಇದು ಸೆ. 21 ರಿಂದ ಅ.1 ರವರೆಗೆ ನಿಟ್ಟೆ ವಿಶ್ವವಿದ್ಯಾಲಯದ 11 ಮಂದಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದಲ್ಲಿ ಮೆರೆದ ಸಾಹಸಗಾಥೆಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟ ವಿವರ.

ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೌಂಟೆನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್ ಆಯೋಜಿಸಿರುವ ಸಾಹಸ ಶಿಬಿರ-2018 ರಲ್ಲಿ ನಿಟ್ಟೆ ವಿಶ್ವವಿದ್ಯಾಲಯದ 10 ಮಂದಿ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶ ದೊರೆತಿತ್ತು. ಹಿಮಾಚಲ ಪ್ರದೇಶದ ನಾರಕಂಡದಲ್ಲಿ 10 ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಪರ್ವತಾರೋಹಣ, ಬಂಡೆಗಳಿಂದ ಇಳಿಯುವುದು (ರ್ಯಾಪ್ಲಿಂಗ್ ) , ಟ್ರೆಕ್ಕಿಂಗ್ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡರು.

ದೇಶದಿಂದ ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ಕಲ್ಪಿಸಲಾದ ಅವಕಾಶದಲ್ಲಿ ರಾಜ್ಯದ ಸುಮಾರು 20 ಮಂದಿಗೆ ಅವಕಾಶ ದೊರೆತಿತ್ತು. ಪ್ರತಿ ಹತ್ತು ಮಂದಿ ಸ್ವಯಂ ಸೇವಕರಿಗೆ ಓರ್ವ ಪ್ರಾಜೆಕ್ಟ್ ಕಾರ್ಡಿನೇಟರ್ ಜತೆಗಿದ್ದರು. ನಾಲ್ಕು ಜನರು ತರಬೇತುದಾರರು ಪ್ರಾತ್ಯಕ್ಷಿಕೆ ಜೊತೆಗೆ ಥಿಯರಿಯನ್ನು ಹೇಳಿಕೊಡುತ್ತಿದ್ದರು. ದಿನಿನಿತ್ಯ ಪರ್ವತಾರೋಹಣ 2,000 ಅಡಿಯಿಂದ 3,000 ಅಡಿ ಎತ್ತರದ ಬೆಟ್ಟಗಳಲ್ಲಿ ಇತ್ತು. ಬೆಳಿಗ್ಗೆ 6 ಗಂಟೆಗೆ ಹೋದರೆ ಬರುವಾಗ ಸಂಜೆ 3 ಗಂಟ ಆಗುತಿತ್ತು. ಆಮ್ಲಜನಕದ ಕೊರತೆ, ವಾಯುಭಾರ ಕಡಿಮೆಯಿರುವ ಪ್ರದೇಶವನ್ನು ತಲುಪುವ ಸಂದರ್ಭ ಜೀವನಕ್ರಮವೂ ಬದಲಾವಣೆಯಾಗುತಿತ್ತು. ಇಂತಹ ವಾತಾವರಣವನ್ನು ಹೊಂದಿಕೊಳ್ಳುವ ತರಬೇತಿಯೂ ಶಿಬಿರದಿಂದ ಆಗಿದೆ. ಹೆಚ್ಚಾಗಿ ಎಲ್ಲರೊಂದಿಗೂ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ಅವಕಾಶದ ಜೊತೆಗೆ ಅಭ್ಯಾಸವೂ ಶಿಬಿರದ ಮೂಲಕ ಆಗಿದೆ ಎಂದು ಪ್ರಾಜೆಕ್ಟ್ ಕಾರ್ಡಿನೇಟರ್ ಆಗಿದ್ದ ಡಾ| ಸತೀಶ್ ರಾವ್ ತಿಳಿಸಿದರು.

ಪರ್ವತಾರೋಹಣ ಸಂದರ್ಭ ಆಲಿಕಲ್ಲು ಮಳೆ, ಕಲ್ಲುಗಳು ಜಾರುವ ಸ್ಥಿತಿಯಲ್ಲೂ ಮೇಲೆ ಹತ್ತಿದ್ದೇವೆ. 50 ಜನರ ತಂಡದಲ್ಲಿ ಜಾರಿಬಿದ್ದಿಯೂ ಮೇಲೆ ನಡೆದುಕೊಂಡು ದಾಟಿದ್ದಾರೆ. ವೈದ್ಯರೂ ಅಲ್ಲೇ ಇದ್ದುದರಿಂದ ಎಲ್ಲರ ಆರೋಗ್ಯ ನಿಯಂತ್ರಣ ಮಾಡಲು ಸಾಧ್ಯವಾಯಿತು. 10 ದಿನಗಳಲ್ಲಿ 90 ಕಿ.ಮೀ ಕ್ಕಿಂತ ಹೆಚ್ಚು ಚಾರಣ ನಡೆಸಲಾಗಿದೆ. ಅತಿ ಹೆಚ್ಚು ಅಂದರೆ 11,152 ಎತ್ತರದ ಹಾಟು ಪೀಕ್ ನ್ನು ಏರಿರುವುದು ತಂಡದ ಸಾಹಸವಾಗಿದೆ .
ಡಾ| ಸತೀಶ್ ರಾವ್

ವಿದ್ಯಾರ್ಥಿಗಳಿಗೆ ಅಡ್ವೆಂಚರ್ ಕ್ಯಾಂಪ್ ಹೊಸತಾಗಿತ್ತು. ತರಬೇತುದಾರರ ತರಬೇತಿಯಿಂದ ಯಶಸ್ವಿಯಾಗಿ 10 ದಿನಗಳಲ್ಲಿ ತರಬೇತಿ ಪಡೆದಿದ್ದೇವೆ. ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇತ್ತು. ಇದರಿಂದ ನೀರಿನ ಜಾಗೃತಿ ಮೂಡಿತು. ಕರ್ನಾಟಕ, ತಮಿಳುನಾಡು ಮೂಲದವರು ಸೇರಿದ್ದರಿಂದ ಎಲ್ಲರೊಂ ದಿಗೆ ಬೆರೆಯಲು ಸಾಧ್ಯವಾಯಿತು. ಸಮಾಜಕ್ಕೆ ಒಳಿತನ್ನು ಮಾಡುವುದನ್ನು ಶಿಬಿರದಿಂದ ಕಲಿತೆವು. ಪರ್ವತಾರೋಹಣ ಗೈಯುವುದು, ಅಗತ್ಯ ಕ್ರಮಗಳನ್ನು ನಾವು ಕಲಿಯುವುದರ ಜೊತೆಗೆ ಇತರರಿಗೆ ಕಲಿಸಲು ಸಮರ್ಥರಾಗಿದ್ದೇವೆ.
ವರ್ಷಾ ಪಿ.ಶೆಟ್ಟಿ
ಬಯೋಮೆಡಿಕಲ್ ಸೈನ್ಸ್
ನಿಟ್ಟೆ ವಿ.ವಿ

ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮುತುವರ್ಜಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಎಲ್ಲರೊಂದಿಗೆ ಬೆರೆಯುವ ಮೂಲಕ ಸಮಗ್ರತೆ ಜೊತೆಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಿದೆ. ಇಂತಹ ಸಾಹಸ ಹಾಗೂ ಸಮಾಜಕ್ಕೆ ಪೂರಕವಾದ ಕಾರ್ಯಗಳಿಗೆ ನಿಟ್ಟೆ ವಿ.ವಿಯಿಂದ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದಡಿ 60ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಬಂಧವನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ. ಉನ್ನತ ಭಾರತ ಅಭಿಯಾನದಡಿ 5 ಗ್ರಾಮಗಳನ್ನು ದತ್ತು ಪಡೆದುಕೊಂಡು ರಾ.ಸೇ.ಯೋ ಮೂಲಕ ಕಾರ್ಯನಿರ್ವಹಿಸುತ್ತಿದೆ.
ಡಾ| ಸತೀಶ್ ಭಂಡಾರಿ
ಕುಲಸಚಿವರು
ನಿಟ್ಟೆ ವಿಶ್ವವಿದ್ಯಾಲಯ

Exit mobile version