UN NETWORKS
ಕುತ್ತಾರು : ಕಟ್ಟಡ ಕಾರ್ಮಿಕರ ಕಲ್ಯಾಣ ಪರಿಷತ್ ನಲ್ಲಿ 7.5 ಸಾವಿರ ಕೋಟಿ ಇದ್ದರೂ, ಸ್ಥಾಪನೆಯಾಗಿ 12 ವರ್ಷಗಳಲ್ಲಿ ಕಾರ್ಮಿಕರಿಗಾಗಿ ಕೇವಲ 320 ಕೋಟಿ ರೂ.ಗಳನ್ನು ಮಾತ್ರ ವ್ಯಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ನ ಜಿಲ್ಲಾ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅಭಿಪ್ರಾಯಪಟ್ಟರು.
ಇದರಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್‍ಶಿಪ್, ಹೆರಿಗೆ ಸೌಲಭ್ಯ, ಮದುವೆ ಸಹಾಯಧನ, ಸಾವನ್ನಪ್ಪಿದಾಗ ಸಹಾಯಧನ ಹೀಗೆ 12 ಬಗೆಯ ಸವಲತ್ತುಗಳು ಕಲ್ಯಾಣ ಮಂಡಳಿಯಿಂದ ಸಿಗಲು ಆರಂಭವಾಗಿದೆ. ಸದ್ಯ ಏಳೂವರೆ ಸಾವಿರ ಕೋಟಿ ಕಲ್ಯಾಣ ಮಂಡಳಿಯ ಉಳಿತಾಯದಲ್ಲಿದೆ. ಈ ಪೈಕಿ 320 ಕೋಟಿ ರೂ. ಮಾತ್ರ 12 ವರ್ಷಗಳಲ್ಲಿ ಕಾರ್ಮಿಕರಿಗಾಗಿ ವ್ಯಯಿಸಲಾಗಿದೆ. ಇದರಲ್ಲಿ ಕಲ್ಯಾಣ ಮಂಡಳಿಯ ಕಚೇರಿ ಕೆಲಸಗಳಿಗೂ ಒಳಗೊಂಡಿದೆ. ಸರಕಾರಗಳು ಕಾರ್ಮಿಕರಿಗೆ ಸವಲತ್ತುಗಳನ್ನು ಕೊಡದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ. ಇದೀಗ ಕಲ್ಯಾಣ ಮಂಡಳಿಯಲ್ಲಿರುವ ಕೋಟ್ಯಂತರ ಹಣದ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಣ್ಣು ಬಿದ್ದಿದೆ. ಮದುವೆಗೆ ಸಹಾಯಧನ ನೀಡುವ ಬದಲು ಜಿಲ್ಲೆಗಳಲ್ಲಿ ಒಂದು ಕಲ್ಯಾಣ ಮಂಟಪ ರಚಿಸುವ ತೀರ್ಮಾನಕ್ಕೆ ಮುಂದಾಗಿದೆ. ಇನ್ನೂ ಸುತ್ತೋಲೆ ಬಂದಿಲ್ಲ, ಅಧಿಕಾರಿಗಳು ಜಾಗ ಹುಡುಕುತ್ತಿದ್ದಾರೆ. ಜಿಲ್ಲೆಯಲ್ಲಿ ತುಂಬಾ ಜನ ಕಾರ್ಮಿಕರಿರುತ್ತಾರೆ. ಒಂದು ಕಲ್ಯಾಣ ಮಂಟಪದಲ್ಲಿ ಎಷ್ಟು ಮದುವೆ ನಡೆಸಲು ಸಾಧ್ಯ?. ಇದೊಂದು ತಮ್ಮವರಿಗೆ ಗುತ್ತಿಗೆ ಕೊಡುವ ಸಲುವಾಗಿ ಹಮ್ಮಿಕೊಂಡಿರುವ ಯೋಜನೆಯಾಗಿದೆ. ಈ ಮೂಲಕ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ವ್ಯಯಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನೊಂದೆಡೆ ಕಾರ್ಮಿಕರಿಗೆ ಸ್ಮಾರ್ಟ್ ಫೋನ್ ನೀಡುವ ಕೆಲಸಕ್ಕೆ ಸರಕಾರ ಕೈ ಹಾಕಿದೆ. ಸ್ಕಾಲರಶಿಪ್, ಪೆನ್ಶನ್, ವೈದ್ಯಕೀಯ ಸೌಲಭ್ಯ, ಮದುವೆ ಸಹಾಯಧನ ಹೆಚ್ಚಿಸಬೇಕು ಅನ್ನುವ ಬೇಡಿಕೆಯಿದ್ದರೂ ಅವೈಜ್ಞಾನಿಕ ತೀರ್ಮಾನಗಳನ್ನು ಕೈಗೊಂಡು ಕಾರ್ಮಿಕರಿಗೆ ಅವಮಾನ ಮಾಡುವ ಕೆಲಸವಾಗುತ್ತಿದೆ. ಕೇಂದ್ರ ಸರಕಾರ ಸಾಮಾಜಿಕ ಸುರಕ್ಷತಾ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದು ಜಾರಿಯಾದಲ್ಲಿ ವಿವಿಧ ಕಲ್ಯಾಣಕ್ಕಾಗಿ ಇಟ್ಟಂತಹ ಹಣದ ತೀರ್ಮಾನವನ್ನು ಪ್ರಧಾನಿಯೇ ಕೈಗೊಳ್ಳುವಂತಹ ಪರಿಸ್ಥಿತಿ ಎದುರಾಗುವುದು. ಕಾರ್ಮಿಕ ಸಂಘಟನೆಗಳ ಏಳಿಗೆಯನ್ನು ಸಹಿಸದೆ ಕೆಲವರು ಇಬ್ಭಾಗ ಮಾಡಲು ಮುಂದಾಗುತ್ತಿದ್ದಾರೆ ಎಂದರು.
ಜ.8, 9 ಭಾರತ್ ಬಂದ್
ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಜ.8,9 ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಈ ವೇಳೆ ಸರಕಾರಿ ನೌಕರರು, ರೈಲ್ವೇ ಇಲಾಖೆ, ಬ್ಯಾಂಕ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಎಲ್ಲಾ ವರ್ಗದವರು ದುಡಿಯದೆ ಬೀದಿಗಳಲ್ಲಿ ಇಳಿದು ಭಾರತ್ ಬಂದ್ ನಡೆಸಲಿದ್ದಾರೆ. ಇದರಿಂದ ದೇಶದ ಆರ್ಥಿಕತೆಗೆ ಧಕ್ಕೆಯಾಗಲಿದ್ದು, ಈ ಮೂಲಕ ಕೇಂದ್ರ ಸರಕಾರ ದೇಶದ ಆರ್ಥಿಕತೆಯಲ್ಲಿ ಕಾರ್ಮಿಕರ ಮಹತ್ವವನ್ನು ಅರಿಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ವಲಯ ಅಧ್ಯಕ್ಷ ಜನಾರ್ಧನ್ ಕುತ್ತಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಯು.ಬಿ.ಲೋಕಯ್ಯ, ಸಿಐಟಿಯು ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಕಟ್ಟಡ ಕಾರ್ಮಿಕರ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು, ಜನವಾದಿ ಮಹಿಳಾ ಸಂಘಟನೆಯ ಪದ್ಮಾವತಿ ಶೆಟ್ಟಿ, ಭಾಗವಹಿಸಿದ್ದರು.ಕೋಶಾಧಿಕಾರಿ ರೋಹಿದಾಸ್ ಭಟ್ನಗರ, ಜತೆ ಕಾರ್ಯದರ್ಶಿಗಳಾದ ಚಂದ್ರಹಾಸ್ ಪಿಲಾರ್, ನವೀನ್ ಗಿರಿಯಮೂಲೆ, ಉಪಾಧ್ಯಕ್ಷ ಇಬ್ರಾಹಿಂ ಅಂಬ್ಲಮೊಗರು, ಪೆರ್ಮನ್ನೂರು ಘಟಕದ ಅಧ್ಯಕ್ಷ ಬೋಜ ಶೆಟ್ಟಿ, ವಿನೋದ್ ಬಾಳೆಪುಣಿ, ವಾಲ್ಟರ್ ಡಿ.ಸೋಜ ತೊಕ್ಕೊಟ್ಟು, ಎಸ್ ಎಫ್ ಐ ಮುಖಂಡ ನಿತಿನ್ ಕುತ್ತಾರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕರಾದ ವಿಶ್ವನಾಥ್ ತೇವುಲ, ಬಂಟಪ್ಪ ಮೂಲ್ಯ ಕುತ್ತಾರಪದವು, ಚಂದಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ವಲಯ ಪ್ರ. ಕಾರ್ಯದರ್ಶಿ ಯು.ಜಯಂತ್ ನಾಯ್ಕ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರಾಮಚಂದ್ರ ಪಜೀರ್ ವಂದಿಸಿದರು.