ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಹರೇಕಳ ಕಡವಿನ ಬಳಿ ಆಟದ ಮೈದಾನ ನಿರ್ಮಾಣಕ್ಕೆ ಬೇಡಿಕೆಯಿದ್ದು ಯೋಜನೆ ಅನುಷ್ಠಾನಕ್ಕೆ ಬಂದಾಗ ನಿರ್ಧರಿಸಲಾಗುತ್ತದೆ. ಬೈತಾರ್ ರಸ್ತೆ ಕಾಮಗಾರಿಗೆ 10ಲಕ್ಷ ರೂ. ಬಿಡುಗಡೆಗೊಳಿಸಲಾಗಿದ್ದು ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಹಾಗೆಯೇ ಇತರ ಬಾಕಿ ಉಳಿದಿರುವ ಸಣ್ಣ ಪ್ರಮಾಣದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಹರೇಕಳದಲ್ಲಿ ನಿರ್ಮಿಸಲಾದ ಬೋಟ್ ಜೆಟ್ಟಿ, ಕುತ್ತಿಮೊಗರು ಜಾತ್ರೆ ನಡೆಯುವ ಪ್ರದೇಶ ಸಂಪರ್ಕ ಕಲ್ಪಿಸುವ 45ಲಕ್ಷ ರೂ. ವೆಚ್ಚದ ರಸ್ತೆ, ಹರೇಕಳ ಕಡವಿನ ಬಳಿ 50ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಕೋಡಿ ಸಂಪರ್ಕ ರಸ್ತೆ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಜನರು ಬೇಡಿಕೆ ಸಲ್ಲಿಸುವ ಮೊದಲು ಜನಪ್ರತಿನಿ„ಗಳು ಕೆಲಸ ಮಾಡಬೇಕು ಎನ್ನುವ ಸಂವಿಧಾನದ ಧ್ಯೇಯದಂತೆ ಹರೇಕಳದಲ್ಲಿ ಕೆಲಸ ಮಾಡಲಾಗಿದೆ. 1999ರ ಬಳಿಕ ಗ್ರಾಮದ ಚಿತ್ರಣವೇ ಬದಲಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಜನ ಮತ ನೀಡಿರುವ ಪರಿಣಾಮ ಇದಾಗಿದೆ. ಇಲ್ಲಿನ ಜನರು ರಸ್ತೆಗೆ ಡಾಂಬಾರು ಹಾಗೂ ತೇಪೆಗೆ ಮಾತ್ರ ಬೇಡಿಕೆ ಇಡುತ್ತಿದ್ದರೂ ಕಾಂಕ್ರೀಟ್, ಅಗಲೀಕರಣ ಮೂಲಕ ಶಾಶ್ವತ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಕಾಮಗಾರಿ ಹಂತದಲ್ಲಿ ಈ ಸಂದರ್ಭ ಸಣ್ಣ ಪುಟ್ಟ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರ ಸಹಕಾರ ಶ್ಲಾಘನೀಯ ಎಂದರು ತಿಳಿಸಿದರು.
ಯು.ಟಿ.ಫರೀದ್ ಬಳಿಕ ಯು.ಟಿ.ಖಾದರ್ ಗ್ರಾಮ ಅಭಿವೃದ್ಧಿಗೆ ಕೋಟ್ಯಾಂತರ ಅನುದಾನ ಮಂಜೂರು ಮಾಡಿಸಿದ್ದಾರೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ತೆರೆದ ಬಾವಿ ನಿರ್ಮಿಸುವ ಯೋಜನೆಗೆ ಜಾಗ ಖರೀದಿಸಲಾಗಿದ್ದು ಸಚಿವರ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಬಾವಲಿಗುರಿ, ಫರೀದ್ ನಗರ, ರಾಜಗುಡ್ಡೆಯಲ್ಲಿ ಕೊಳವೆ ಬಾವಿ ಕೆಲಸ ಆರಂಭಗೊಂಡಿದೆ. ಹಕ್ಕುಪತ್ರಕ್ಕೆ ಸಾಕಷ್ಟು ಅರ್ಜಿ ಬಂದಿದ್ದರೂ ಕಾನೂನು ತೊಡಕಿನಿಂದ ವಿತರಣೆ ಆಗದಿದ್ದು ಈ ಬಗ್ಗೆ ಸಚಿವರು ಗಮನಹರಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ ಹೇಳಿದರು.
ಸಿಪಿಐಎಂ ಹಿರಿಯ ಮುಖಂಡ ಹುಸೈನ್ ಪಾವೂರು ಪೋಡಾರ್ ಸೈಟ್ ರಸ್ತೆ ಅಭಿವೃದ್ಧಿಗೊಳಿಸುವಂತೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹಸ್‍ದಾಸ್ ಶೆಟ್ಟಿ, ಸದಸ್ಯರಾದ ಎಂ.ಪಿ.ಮಜೀದ್, ಅಕ್ಬರ್ ಅಲಿ, ಮಾಜಿ ಅಧ್ಯಕ್ಷ ಬಹಾಬಲ ಹೆಗ್ಡೆ, ಮಾಜಿ ಉಪಾಧ್ಯಕ್ಷ ದಾಮೋದರ ಕೋಟ್ಯಾನ್, ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಜಯರಾಮ ಆಳ್ವ ಪೋಡಾರ್, ಅಶೋಕ್ ಶೆಟ್ಟಿ ಮಜಲ್ ಹಾಗೂ ಹಸನ್ ಮೋನು ಉಪಸ್ಥಿತರಿದ್ದರು.