ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹರೇಕಳ : ಸದಾ ಸರಳತೆಯೊಂದಿಗೆ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಕುತ್ತಿಮೊಗೆರು ರಸ್ತೆ ಉದ್ಘಾಟನೆಗೆ ತೆರಳಿದ್ದ ಸಂದರ್ಭ ರಸ್ತೆ ಬದಿಯಲ್ಲಿ ವಾಲಿಬಾಲ್ ಆಡುತ್ತಿದ್ದ ಮಕ್ಕಳೊಂದಿಗೆ ಆಟವಾಡಿ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದರು.
ಹರೇಕಳ ಬೋಟ್ ಜೆಟ್ಟಿಯನ್ನು ಉದ್ಘಾಟನೆಗೊಳಿಸಿದ ಸಚಿವ ಯು.ಟಿ.ಖಾದರ್ ಅವರು ಬಳಿಕ ತಮ್ಮ ಸರಕಾರಿ ವಾಹನವನ್ನು ಬಿಟ್ಟು ಬೈಕಿನಲ್ಲಿ ಹಿಂಬದಿ ಸವಾರನಾಗಿ 5 ಕಿ.ಮೀವರೆಗೂ ಪ್ರಯಾಣಿಸಿದರು. ಕುತ್ತಿಮೊಗೆರು ರಸ್ತೆ ಉದ್ಘಾಟನೆಗೆ ತೆರಳುವ ದಾರಿಮಧ್ಯೆ ಮಕ್ಕಳು ವಾಲಿಬಾಲ್ ಆಡುವುದನ್ನು ಗಮನಿಸಿದ ಸಚಿವರು ಬೈಕನ್ನು ನಿಲ್ಲಿಸುವಂತೆ ತಿಳಿಸಿ, ಅವರೊಂದಿಗೆ ಗ್ರೌಂಡಿಗೆ ಇಳಿದರು. 10 ನಿಮಿಷಗಳ ಕಾಲ ವಾಲಿಬಾಲ್ ಆಟದಲ್ಲಿ ಕಾಲ ಕಳೆದ ಸಚಿವರು ನಾಲ್ಕು ಸರ್ವಿಸ್ ಗಳನ್ನು ಉತ್ಸಾಹದಿಂದ ಹಾಕುವುದರಿಂದ ಆಟದಲ್ಲೂ ನಿಸ್ಸೀಮರು ಅನ್ನುವುದನ್ನು ತೋರಿಸಿದರು. ಇವರ ಜತೆಗೆ ಜಿ.ಪಂ ಸದಸ್ಯ ಎನ್.ಎಸ್.ಕರೀಂ, ಸ್ಥಳೀಯ ಮುಖಂಡರುಗಳಾದ ಮಹಾಬಲ ಹೆಗ್ಡೆ, ರವಿರಾಜ್ ಶೆಟ್ಟಿ ಆಟವಾಡಿದರು. ಮಕ್ಕಳು ಉತ್ಸಾಹದಿಂದಲೇ ಆಟವಾಡಿ ಸಚಿವರಿಗೆ ಜೈ ಕಾರ ಹಾಕಿದರು.