Site icon Ullalavani

ಗಾಂಧೀಜಿಯವರ ಚಿಂತನೆಗಳು ಇಂದಿಗೂ ಪ್ರಸ್ತುತ: ಕಂಜರ್ಪಣೆ ಬಾಲಸುಬ್ರಹ್ಮಣ್ಯ

UN NETWORKS

ಕೊಣಾಜೆ: ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿಯೂ ಅವರ ಚಿಂತನೆಗಳನ್ನು ಸಮಾಜದಲ್ಲಿ ಅಳವಡಿಕೊಂಡು ಸಾಮರಸ್ಯವನ್ನು ಕಟ್ಟುವ ಕಾರ್ಯ ಆಗಬೇಕಿದೆ ಎಂದು ಕಂಜರ್ಪಣೆ ಬಾಲಸುಬ್ರಹ್ಮಣ್ಯ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಬುಧವಾರ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಗಾಂಧೀಜಿಯವರ ಸ್ವದೇಶಿ ಚಳುವಳಿ, ಸ್ವಚ್ಚತಾ ಆಂದೋಲನ, ಗ್ರಾಮೀಣಾಭಿವೃದ್ದಿ ಚಿಂತನೆಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿದ್ದು, ಇಂತಹ ಚಿಂತನೆಗಳು ಭವ್ಯ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ. ಅವರು, ಗಾಂಧೀಜಿವರ 150ನೇ ಜನ್ಮ ದಿನಾಚರಣೆಯ ಇಂತಹ ಸುಸಂದರ್ಭದಲ್ಲಿ ನಾವು ಎಷ್ಟರ ಮಟ್ಟಿಗೆ ಅವರ ಚಿಂತನೆ, ತತ್ವಾದರ್ಶನಗಳನ್ನು ಜೀವನದಲ್ಲಿ ಅಳವಡಿಕೊಂಡಿದ್ದೇವೆ ಎಂಬುದರ ಬಗ್ಗೆ ಆಲೋಚಿಸಬೇಕಾಗಿದೆ. ಗಾಂಧೀಜಿಯವರ ಜೀವನವೇ ನಮಗೆಲ್ಲರಿಗೂ ಒಂದು ಸಂದೇಶವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರ ಆಚಾರಿ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಪಿ.ಎಲ್.ಧರ್ಮ ಅವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ವಂದಿಸಿದರು. ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.

Exit mobile version