Site icon Ullalavani

ಸರ್ಜಿಕಲ್ ಸ್ಟ್ರೈಕ್ ಭಾರತದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ: ಕರ್ನಲ್ ಶರತ್ ಭಂಡಾರಿ

UN NETWORKS

ಕೊಣಾಜೆ: ಸರ್ಜಿಕಲ್ ಸ್ಟ್ರೈಕ್ ಭಾರತದ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸಿದೆ. ಇಸ್ರೆಲ್, ಅಮೇರಿದಂತಹ ಮುಂದುವರಿದ ರಾಷ್ಟ್ರಗಳು ಮಾತ್ರ ಇಂತಹ ನಿರ್ದಿಷ್ಟ ದಾಳಿಯಲ್ಲಿ ಗುರುತಿಸಿದ್ದ ರಾಷ್ಟ್ರಗಳಾಗಿದ್ದವು. ಇದೀಗ ಭಾರತವು ಕೂಡಾ ಯಶಸ್ವಿ ನಿರ್ದಿಷ್ಟ ದಾಳಿಯ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿ ಗುರುತಿಸುವಂತಾಗಿದೆ. ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ಸೇವೆಯನ್ನು ನಾವು ಸದಾ ಸ್ಮರಿಸಿಕೊಳ್ಳಬೇಕಿದೆ ಎಂದು ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರು ಹೇಳಿದರು.

ಭಾರತವು ನಡೆಸಿದ ಸರ್ಜಿಕಲ್ ದಾಳಿಗೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಮಂಗಳಸಭಾಂಗಣದಲ್ಲಿ ಶನಿವಾರ ನಡೆದ ನಿರ್ದಿಷ್ಟ ದಾಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೆಲವು ದೇಶಗಳು ಇಂತಹ ನಿರ್ದಿಷ್ಟ ದಾಳಿ ನಡೆಸಿವೆ. ಅವುಗಳಲ್ಲಿ ಕೆಲವು ಯಶಸ್ವಿಯಾದರೆ ಇನ್ನು ಕೆಲವು ದಾಳಿಗಳು ಪೈಲ್ಯೂರ್ ಆಗಿದೆ. ಆದರೆ ಭಾರತವು ಸರಿಯಾದ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯೊಂದಿಗೆ ವೀರ ಸೈನಿಕರ ಬಲದಿಂದ ನಿರ್ದಿಷ್ಟ ದಾಳಿಯ ಮೂಲಕ ವಿರೋದಿ ದೇಶಕ್ಕೆ ಸ್ಪಷ್ಟವಾದ ಉತ್ತರವನ್ನು ನೀಡಿದೆ ಎಂದರು.ದೇಶ ರಕ್ಷಣೆಯ ಭಾವದ ಜೊತೆಗೆ ನಾವು ಸ್ವಚ್ಚತೆಯ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕಿದೆ. ಸ್ವಚ್ಚತೆಯ ಭಾವನೆಯು ನಮ್ಮ ಹೃದಯದಲ್ಲಿ ಹುಟ್ಟಬೇಕು. ಕಳೆದ ಕೆಲವು ವರ್ಷದಿಂದ ಮೋದಿಯವರು ಈ ನಿಟ್ಟಿನಲ್ಲಿ ಸ್ವಚ್ಚತೆಯ ಬಗ್ಗೆ ಚಳುವಳಿಯನ್ನೇ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು, ಸರ್ಜಿಕಲ್ ದಾಳಿ ದಿನಾಚರಣೆಯು ನಮ್ಮ ಸೈನಿಕರ ಸೇವೆಯನ್ನು ನೆನಪಿಸುವ ದಿನವಾಗಿದೆ. ಕೊಡಗು ಅಥವಾ ಉತ್ತರ ಕರ್ನಾಟಕ ಜಿಲ್ಲೆಯಿಂದ ಬಹಳಷ್ಟು ಮಂದಿ ಸೇನೆ ಉತ್ಸುಕ ತೋರಿಸುತ್ತಾರೆ. ಆದರೆ ದ.ಕ ಹಾಗೂ ಉಡುಪಿ ಜಿಲ್ಲೆಯಿಂದ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯೆನಿಸುತ್ತದೆ. ದೇಶ ಸೇವೆಯ ಜೊತೆಗೆ ಶಿಸ್ತಿನ ಜೀವನವನ್ನು ಸೇನೆ ಸೇರುವುದರ ಮೂಲಕ ಪಡೆದುಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಭಾಗವಹಿಸಿದ್ದರು. ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಬಾರ್ಕೂರು ಉದಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.

Exit mobile version