Site icon Ullalavani

ಶಾರ್ಟ್ ಸರ್ಕ್ಯೂಟ್ : ಮನೆಗೆ ಹಾನಿ

UN NETWORKS

ಉಳ್ಳಾಲ: ಬೆಂಕಿ ಅವಘಢಕ್ಕೆ ತುತ್ತಾಗಿ ಮನೆಯೊಳಗಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿ, ಮನೆಯೂ ಭಾಗಶ: ಹಾನಿಯಾಗಿರುವ ಘಟನೆ ಉಳ್ಳಾಲ ನಗರಸಭೆಯ 24ನೇ ವಾರ್ಡಿನ ಧರ್ಮನಗರ ಬೊಟ್ಟು ಎಂಬಲ್ಲಿ ಶನಿವಾರ ಸಂಜೆ ವೇಳೆ ನಡೆದಿದೆ. ಘಟನೆ ವೇಳೆ ಮನೆಯೊಳಗಿದ್ದ ಟ್ಯೂಷನ್ನಿಗೆಂದು ಬಂದಿದ್ದ 15 ಮಕ್ಕಳು ಹಾಗೂ ಮನೆಯ ಮೂರು ಮಂದಿ ಪವಾಡಸದೃಶವಾಗಿ ಪಾರಾಗಿದ್ದಾರೆ.

ಬೊಟ್ಟು ಎಂಬಲ್ಲಿ ಜಯಂತ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಲೀಲಾ ಪೂಜಾರ್ತಿ ಅವರ ಕುಟುಂಬ ಎರಡು ವರ್ಷಗಳಿಂದ ಇದ್ದಾರೆ. ಲೀಲಾ ಪೂಜಾರ್ತಿ ಸೇರಿದಂತೆ ಅವರ ಮಕ್ಕಳಾದ ರಶ್ಮಿತಾ, ರಕ್ಷಿತಾ ಅವಘಢ ಸಂದರ್ಭ ಮನೆಯೊಳಗಿದ್ದರು. ಇನ್ನೋರ್ವ ಪುತ್ರ ರಾಕೇಶ್ ಕೆಲಸಕ್ಕೆ ತೆರಳಿದ್ದರು. ರಶ್ಮಿತಾ ಅವರು ಟ್ಯೂಷನ್ ನೀಡುತ್ತಿದ್ದು, ಸುಮಾರು 15 ಮಕ್ಕಳು ಮನೆಯೊಳಗಿದ್ದರು. ಇದೇ ವೇಳೆ ಸಿಡಿಲು ಬಡಿದು ಮನೆಯೊಳಗಿದ್ದ ಟಿವಿಯೊಳಗೆ ಬೆಂಕಿ ಕಾಣಿಸಿಕೊಂಡಿತ್ತು. ಮಕ್ಕಳು ಮನೆಮಂದಿಯ ಗಮನಕ್ಕೆ ತಂದಿದ್ದರು. ಕೂಡಲೇ ಮಕ್ಕಳು ಸೇರಿದಂತೆ ಮನೆಮಂದಿ ಮನೆ ಹೊರಗಡೆ ತೆರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರ ತಂಡ ಮರಳು ರಾಶಿಯನ್ನು ಎಸೆದು ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಆದರೆ ಘಟನೆ ಯಿಂದಾಗಿ ಮನೆಯೊಳಗಿದ್ದ ಟಿವಿ, ರೆಫ್ರಿಜರೇಟರ್, ಫ್ಯಾನ್, ಇಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಬೆಲೆಬಾಳುವ ಸೊತ್ತುಗಳು ಸುಟ್ಟು ಕರಕಲಾದವು. ಮನೆಯ ತಾರಸಿಯಿಡೀ ಬೆಂಕಿಯಿಂದ ಆವರಿಸಿ ಕರಕಲಾಗಿದೆ.

ಘಟನಾ ಸ್ಥಳಕ್ಕೆ ನಗರಸಭೆ ಸದಸ್ಯ ರವಿಚಂದ್ರ ಗಟ್ಟಿ ಭೇಟಿ ನೀಡಿ ಸರಕಾರದಿಂದ ಸಿಗುವ ಪರಿಹಾರವನ್ನು ಒದಗಿಸುವ ಭರವಸೆ ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಕೆ. ಪ್ರಮೋದ್ ಕುಮಾರ್, ಸಹಾಯಕ ನವನೀತ್, ನಗರಸಭೆಯ ನಾಮನಿರ್ದೇಶಿತ ಸದಸ್ಯ ರಿಚರ್ಡ್ ಲೂಯಿಸ್ ಉಪಸ್ಥಿತರಿದ್ದರು.

Exit mobile version